
ನವದೆಹಲಿ, ಆಗಸ್ಟ್ 19: ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ದ್ವಿತೀಯ ಆ್ಯಷಸ್ ಟೆಸ್ಟ್‌ನಲ್ಲಿ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ತಲೆಗೆ ಚೆಂಡು ತಗುಲಿ ಮೈದಾನದಿಂದ ಹೊರ ನಡೆಯುವಂತಾಗಿತ್ತು. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆತಕ್ಕೆ ಗಾಯಗೊಂಡ ಸ್ಮಿತ್ ಬದಲಿಗೆ ಮಾರ್ನಸ್ ಲ್ಯಾಬುಸ್ಚಾಗ್ ಅವರನ್ನು ಬದಲಿಸಿಕೊಳ್ಳಲಾಗಿತ್ತು.
ಸ್ಮಿತ್‌ಗೆ ಬೌನ್ಸರ್ ಎಸೆದಿದ್ದ ಆರ್ಚರ್, ಸ್ಮಿತ್ ಕುಸಿದಾಗ ವಿಕೆಟ್ ಕೀಪರ್ ಜೋಸ್ ಬಟ್ಲರ್ ಜೊತೆಗೂಡಿ ನಗುತ್ತಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಆರ್ಚರ್-ಬಟ್ಲರ್ ನಡೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಟ್ವಿಟರ್ ಮೂಲಕ ಟಾಂಟ್ ನೀಡಿದ್ದರು.
'ಬೌನ್ಸರ್ ಕ್ರಿಕೆಟ್ ಆಟದ ಭಾಗ. ಆದರೆ ಬೌಲಿಂಗ್ ವೇಳೆ ಬ್ಯಾಟ್ಸ್ಮನ್‌ಗೆ ಚೆಂಡು ಬಡಿದರೆ, ಆತ ಕೆಳಗುರುಳಿದರೆ ಬೌಲರ್ ನೆರವಿಗೆ ಧಾವಿಸಿ ಆತನನ್ನು ವಿಚಾರಿಸೋ ಮಾನವೀಯತೆ ಮೆರೆಯಬೇಕು. ಸ್ಮಿತ್ ನೋವಿನಲ್ಲಿದ್ದಾಗ ಆರ್ಚರ್ ದೂರ ನಿಂತಿದ್ದು ಸರಿಯಲ್ಲ. ಆಟದ ವೇಳೆ ಹೀಗೆ ಗಾಯಗೊಂಡ ಬ್ಯಾಟ್ಸ್ಮನ್ ಬಳಿಗೆ ಓಡುತ್ತಿದ್ದವರಲ್ಲಿ ನಾನು ಮುಂಚೂಣಿಯಲ್ಲಿದ್ದೆ' ಎಂದು ಅಖ್ತರ್ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯುವಿ, 'ಹೌದು ನೀನು ಬರುತ್ತಿದ್ದೆ. ನಿನ್ನ ಪದಗಳು ನೀನೊಬ್ಬ ಉತ್ತಮ ಸಹ ಆಟಗಾರ ಅನ್ನೋದನ್ನು ಹೇಳುತ್ತಿವೆ. ಯಾಕೆಂದರೆ ಅಲ್ಲಿ ನಿನ್ನ ಜೊತೆಗೆ ಇನ್ನೂ ಕೆಲವು ಆಟಗಾರರು ಸಹಾಯಕ್ಕೆ ಓಡಿಬರುತ್ತಿರುತ್ತಾರೆ ಅನ್ನೋದನ್ನು ಹೇಳಿದ್ದೀಯ,' ಎಂದು ತಮಾಷೆಯಾಗಿ ಬರೆದು ಹಲ್ಲು ಕಿಸಿಯುವ, ಕಣ್ಣು ಹೊಡೆಯುವ ಇಮೋಜಿಗಳನ್ನೂ ಸೇರಿಸಿದ್ದಾರೆ.
ಅಖ್ತರ್, ಯುವಿ ಕೆಲ ಪಂದ್ಯಗಳ ವೇಳೆ ಮೈದಾನದಲ್ಲಿ ಪ್ರಬಲ ಸ್ಪರ್ಧಿಗಳಂತೆ ಕಾಣುತ್ತಿದ್ದರಾದರೂ ಆಟವನ್ನು ಬದಿಗಿರಿಸಿದರೆ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾಗ ಅಖ್ತರ್ ವಿಡಿಯೋವೊಂದರಲ್ಲಿ ಸಿಕ್ಸರ್ ಕಿಂಗ್ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದರು. ಇದಕ್ಕೆ ಪ್ರತಿಯಾಗಿ ಯುವಿ ಕೂಡ ಅಖ್ತರ್‌ಗೆ ಧನ್ಯವಾದ ಸಲ್ಲಿಸಿದ್ದರು.