
ಗುರುವಾರ ಶಾರ್ಜಾ ಕ್ರಿಕೆಟ್ ಕ್ರಿಕೆಟ್ ಮೈದಾನದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಆರ್‌ಸಿಬಿ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವನ್ನ ದಾಖಲಿಸಿತು. ಈ ಪಂದ್ಯಕ್ಕೂ ಮೊದಲು ಅಭ್ಯಾಸದ ವೇಳೆಯಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್‌ಗೇಲ್ ಜೊತೆಗಿನ ಅದ್ಭುತ ಕ್ಷಣವನ್ನು ಆರ್‌ಸಿಬಿ ಸ್ಪಿನ್ನರ್ ಯುಜವೇಂದ್ರ ಚಹಾಲ್ ಟ್ವಿಟರ್‌ನಲ್ಲಿ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅನಿಮೇಟೆಡ್ ಫೋಟೊವನ್ನು ಶೇರ್ ಮಾಡಿರುವ ಚಹಾಲ್ ಟಿಮನ್, ಪುಂಬಾ ಮತ್ತೆ ಒಂದಾಗುತ್ತಿದ್ದಾರೆ ಎಂಬ ಅಡಿಬರಹ ನೀಡಿ, ಹಿಂದೆ ಆರ್ ಸಿಬಿ ತಂಡದಲ್ಲಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರನ್ನು ತಬ್ಬಿಕೊಂಡು ಸಂತಸಪಟ್ಟಿರುವ ಫೋಟೋವೊಂದನ್ನು ಹರಿಬಿಟ್ಟಿದ್ದಾರೆ.
ಡಿಸ್ನಿ ಕ್ಲಾಸಿಕ್ 'ಲಯನ್ ಕಿಂಗ್' ಚಿತ್ರದಲ್ಲಿನ 'ಟಿಮೊನ್ ಮತ್ತು ಪುಂಬಾ' ಚಿತ್ರದ ಎರಡು ಅಪ್ರತಿಮ ಪಾತ್ರಗಳೊಂದಿಗೆ ಚಹಾಲ್ ತಮ್ಮನ್ನು ಹೋಲಿಸಿಕೊಂಡಿದ್ದಾರೆ. ಮತ್ತು ಈ ಅಡಿಬರಹ ನೀಡಲು ಪ್ರೇರೇಪಣೆ ತನ್ನ ಭಾವೀ ಪತ್ನಿ ಧನಶ್ರೀ ಎಂದು ಬರೆದುಕೊಂಡಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿರುವ ಕ್ರಿಸ್ ಗೇಲ್, ಗುರುವಾರ ನಡೆದ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದರು. ಈ ಸೀಸನ್‌ನಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿ ಕ್ರಿಸ್ 45 ಎಸೆತಗಳಲ್ಲಿ 53 ರನ್ ಸಿಡಿಸಿದರು. ಆರ್‌ಸಿಬಿ ವಿರುದ್ಧ ಗೆಲುವಿನಲ್ಲಿ ಗೇಲ್ ಪಾತ್ರ ಪ್ರಮುಖವಾಗಿತ್ತು.