ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಅವರ ಭರ್ಜರಿ ಅರ್ಧಶತಕ ಹಾಗೂ ನಾಯಕ ಸಿಕಂದರ್ ರಾಜಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಜಿಂಬಾಬ್ವೆ ತಂಡ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿದೆ. ಈ ಮೂಲಕ ಜಿಂಬಾಬ್ವೆ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.
ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಪತಮ್ ನಿಸ್ಸಂಕ ಹಾಗೂ ಕುಸಾಲ್ ಪೆರೆರಾ (22) ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಮೂರನೇ ಕ್ರಮಾಂಕದಲ್ಲಿ ಕುಸಾಲ್ ಮೆಂಡೀಸ್ (14) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನಿಸ್ಸಂಕಾ 8 ಬೌಂಡರಿ ಸೇರಿದಂತೆ 62 ರನ್ ಬಾರಿಸಿ ಔಟ್ ಆದರು.

179 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಬ್ರಿಯಾನ್ ಬೆನೆಟ್ ಮತ್ತು ತಡಿವಾನಾಶೆ ಮರುಮಣಿ ಜೋಡಿ ಮೊದಲ ವಿಕೆಟ್‌ಗೆ 69 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ತಡಿವಾನಾಶೆ ಮರುಮಣಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿದರು. ರಯಾನ್ ಬರ್ಲ್ 12 ಎಸೆತಗಳಲ್ಲಿ 23 ರನ್ ಸಿಡಿಸಿದರು. ಮೂರನೇ ವಿಕೆಟ್‌ಗೆ ಸಿಂಕದರ್ ರಾಜಾ ಮತ್ತು ಬ್ರಿಯಾನ್ ಬೆನೆಟ್ ಜೋಡಿ 40 ಎಸೆತಗಳಲ್ಲಿ 69 ರನ್ ಸೇರಿಸಿತು. ಸಿಕಂದರ್ ರಾಜ್ 45 ರನ್ ಸಿಡಿಸಿದರು. ಬ್ರಿಯಾನ್ ಬೆನೆಟ್ 8 ಬೌಂಡರಿ ನೆರವಿನಿಂದ ಅಜೇಯ 63 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಜಿಂಬಾಬ್ವೆ 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 182 ರನ್ ಸೇರಿಸಿತು.
ಜಿಂಬಾಬ್ವೆ ತಂಡ ಆಡಿದ 4 ಪಂದ್ಯಗಳಲ್ಲಿ ಮೂರು ಗೆಲುವು, 1 ಪಂದ್ಯ ರದ್ದಾಗಿದ್ದು, 7 ಅಂಕಗಳನ್ನು ಕಲೆ ಹಾಕಿದ್ದು, ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಶ್ರೀಲಂಕಾ ಆಡಿದ 4 ಪಂದ್ಯಗಳಲ್ಲಿ 3 ಜಯ, 1 ಸೋಲು ಕಂಡಿದ್ದು 6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಸಿ ಗುಂಪಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ವೆಸ್ಟ್ ಇಂಡೀಸ್ ಆಡಿದ 4 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಗುರುವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿಂಡೀಸ್ 42 ರನ್‌ಗಳಿಂದ ಇಟಲಿ ತಂಡವನ್ನು ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 165 ರನ್ ಸೇರಿಸಿತು. ವಿಂಡೀಸ್ ತಂಡದ ನಾಯಕ ಶಾಯ್ ಹೋಪ್ 46 ಎಸೆತಗಳಲ್ಲಿ 75 ರನ್ ಸಿಡಿಸಿದರು. 6 ಬೌಂಡರಿ, 4 ಸಿಕ್ಸರ್‌ಗಳನ್ನು ಇವರು ಬಾರಿಸಿದರು. ಗುರಿಯನ್ನು ಬೆನ್ನಟ್ಟಿದ ಇಟಲಿ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲವಾಗಿ ಸೋಲ ಕಂಡಿತು. 18 ಓವರ್‌ಗಳಲ್ಲಿ ಇಟಲಿ 123 ರನ್‌ಗಳಿಗೆ ಆಲೌಟ್ ಆಯಿತು. ಇಟಲಿ ಆಡಿದ 4 ಪಂದ್ಯಗಳಲ್ಲಿ 1 ಜಯ, 3 ಸೋಲು ಕಂಡಿದ್ದು, 2 ಅಂಕಗಳನ್ನು ಕಲೆ ಹಾಕಿದೆ.