ಫ್ರಾನ್ಸ್ vs ಬೆಲ್ಜಿಯಂ: ಗೆಲ್ಲುವ ತಂಡವ ಪಿಸುಗುಡುವ ಅಂಕಿ-ಅಂಶಗಳಿವು!

ಮಾಸ್ಕೋ, ಜುಲೈ 9: ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದ ಅಂತಿಮ ಘಟ್ಟದೆಡೆಗೆ ಮುನ್ನಡೆಯುತ್ತಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಆಕರ್ಷಣೀಯ ಕ್ರೀಡಾ ಹಬ್ಬಕ್ಕೆ ತೆರೆ ಬೀಳಲಿದೆ. ಫೈನಲ್ ಗೂ ಮುನ್ನ ನಡೆಯಲಿರುವ ಫ್ರಾನ್ಸ್-ಬೆಲ್ಜಿಯಂ ನಡುವಿನ ಮೊದಲ ಸೆಮಿಫೈನಲ್ ಕಾದಾಟದಲ್ಲಿ ಗೆಲ್ಲುವ ತಂಡ ಯಾವುದು? ಈ ಪ್ರಶ್ನೆಗೆ ಇಲ್ಲಿರುವ ಕೆಲ ಅಂಕಿ ಅಂಶಗಳು ಸುಳಿವು ನೀಡಬಲ್ಲವು.
ಸದ್ಯದ ಫೀಫಾ ರ್ಯಾಂಕಿಂಗ್ ನಲ್ಲಿ ಬೆಲ್ಜಿಯಂ ತಂಡ ಫ್ರಾನ್ಸ್ ಗಿಂತ ಮೊದಲಿದೆ. ಬೆಲ್ಜಿಯಂ 3ನೇ ಸ್ಥಾನದಲ್ಲಿದ್ದರೆ ಫ್ರಾನ್ಸ್ 7ನೇ ಸ್ಥಾನದಲ್ಲಿದೆ. ಫೀಫಾ ರ್ಯಾಂಕಿಂಗ್ ಅವಲಂಭಿಸಿ ಪಂದ್ಯದ ಸೋಲು-ಗೆಲುವು ನಿರ್ಧಾರವಾಗೋಲ್ಲ ಅನ್ನೋದಕ್ಕೆ ಇದೇ ಫೀಫಾ ವಿಶ್ವಕಪ್ ನಲ್ಲಿ ನಡೆದ ಅನೇಕ ಪಂದ್ಯಗಳು ಸಾಕ್ಷಿಯಾಗಿವೆ. ಹಾಗಾದರೆ ಜುಲೈ 10 ಮೊದಲ ಸೆಮಿಫೈನಲ್ ನಲ್ಲಿ ಗೆಲ್ಲುವ ತಂಡ ಯಾವುದಿರಬಹುದು?
ಹಿಂದಿನ ಸಾಧನೆಗಳ ಆಧಾರದಲ್ಲಿ ಹೋದರೆ ಫ್ರಾನ್ಸ್ ಗೆಲ್ಲುವ ತಂಡವಾಗಿ ಗೋಚರಿಸುತ್ತದೆ. ಯಾಕೆಂದರೆ ಫ್ರಾನ್ಸ್ ಇದು 6ನೇ ಬಾರಿಗೆ ವರ್ಲ್ಡ್ ಕಪ್ ಸೆಮಿಫೈನಲ್ ಗೆ ಪ್ರವೇಶಿಸುತ್ತಿದೆ. ಪ್ರವೇಶಿಸಿದ ಹಿಂದಿನ 5 ಸೆಮಿಫೈನಲ್ ಪಂದ್ಯಗಳಲ್ಲಿ ಮೂರು (1958, 1982, 1986) ಪಂದ್ಯಗಳನ್ನು ಸೋತು ಎರಡು (1998, 2006) ಪಂದ್ಯಗಳನ್ನು ಗೆದ್ದಿದೆ.
ಬೆಲ್ಜಿಯಂ ಈ ಹಿಂದೆ ಒಂದೇ ಬಾರಿ ವರ್ಲ್ಡ್ ಕಪ್ ಸೆಮಿ ಫೈನಲ್ ಗೆ ಪ್ರವೇಶಿಸಿದ್ದು. 1986ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಬೆಲ್ಜಿಯಂ ಆ ವರ್ಷದ ಚಾಂಪಿಯನ್ ಅರ್ಜೆಂಟೀನಾ ಎದುರು 2-0 ಅಂತರದಿಂದ ಸೋತಿತ್ತು. ಈ ಪಂದ್ಯದಲ್ಲಿ ಎರಡೂ ಗೋಲ್ ಸಿಡಿದ್ದು ಫುಟ್ಬಾಲ್ ದಂತಕತೆ ಡಿಗೋ ಮರಡೋನಾ ಅವರು! ಅದಲ್ಲದೆ 1980 ಯುರೋಪಿಯನ್ ಚಾಂಪಿಯನ್ ಶಿಪ್ ಸೆಮಿಫೈನಲ್ ಪಂದ್ಯದಲ್ಲೂ ಬೆಲ್ಜಿಯಂ ವೆಸ್ಟ್ ಜರ್ಮನಿ ಎದುರು ಸೋತಿತ್ತು.
ಆದರೆ ಈ ಫೀಫಾ ವಿಶ್ವಕಪ್ ಪಂದ್ಯಗಳನ್ನು ಗಮನಿಸಿದರೆ ಬೆಲ್ಜಿಯಂ ಸಕ್ಕತ್ ಫಾರ್ಮ್ ನಲ್ಲಿದೆ. ಪಂದ್ಯಾಟದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಬೆಲ್ಜಿಯಂ ನೇಮರ್ ಬಳಗಕ್ಕೆ (ಬ್ರೆಜಿಲ್) ಸೋಲುಣಿಸಿ ಸೆಮಿಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಇದರ ಜೊತೆ ಪಂದ್ಯಾಟದ ಉದ್ದಕ್ಕೂ ಬೆಲ್ಜಿಯಂ ಉತ್ತಮ ಪ್ರದರ್ಶನವನ್ನೇ ನೀಡಿರುವುದರು ತಂಡ ಬಲಿಷ್ಟವೆನ್ನುವುದಕ್ಕೆ ಮತ್ತೊಂದು ಸಾಕ್ಷಿ.
ಬೆಲ್ಜಿಯಂನಲ್ಲಿ ಇ ಹಜಾರ್ಡ್, ಲುಕಾಕು, ವರ್ಟೊಂಗನ್ ನಂಥ ಅಪಾಯಕಾರಿ ಆಟಗಾರರಿದ್ದರೆ, ಫ್ರಾನ್ಸ್ ನಲ್ಲಿ ಎಮ್ಬಪ್ಪೆ, ಗ್ರೀಜ್ಮನ್, ಪೋಗ್ಬಾ ನಂತ ಆಟಗಾರರಿದ್ದಾರೆ. ಒಂದಾರ್ಥದಲ್ಲಿ ಸುಲಭವಾಗಿ ಗೆಲ್ಲುವ ತಂಡವನ್ನು ಊಹಿಸಲಾಗದ ಪಂದ್ಯವೆಂದು ಮಂಗಳವಾರದ (ಜುಲೈ 10) ಸೆಮಿಫೈನಲ್ ಪಂದ್ಯವನ್ನು ಹೇಳಬಹುದು. ಗೆಲುವು ಯಾರದ್ದಾಗಲಿದೆ ಕಾದು ನೋಡೋಣ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications