Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA 2026: ಕುರಿ ಕಾಯುವ ಹುಡುಗ ಈಗ ಫುಟ್‌ಬಾಲ್‌ ಹೀರೋ, ಇರಾನ್ ಗೋಲ್‌ಕೀಪರ್‌ ಸಾಹಸ ಗಾಥೆ

FIFA World Cup 2026: ಇರಾನ್ ರಾಷ್ಟ್ರೀಯ ಫುಟ್‌ಬಾಲ್ ತಂಡದ ಖ್ಯಾತ ಗೋಲ್‌ಕೀಪರ್ ಅಲಿರೆಜಾ ಬೈರಾನ್‌ವಾಂಡ್ ಅವರ ಜೀವನ ಕಥೆ ಯಾವುದೇ ಸಿನಿಮಾ ಕಥೆಗಿಂತ ಏನು ಕಮ್ಮಿಯಿಲ್ಲ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದು, ಇಂದು ವಿಶ್ವದ ಅತ್ಯುತ್ತಮ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿ ಬೆಳೆದ ಅವರ ರೋಚಕ ಪಯಣದ ವಿವರ ಇಲ್ಲಿದೆ ನೋಡಿ.

2026ರ ಫಿಫಾ ವಿಶ್ವಕಪ್ ಮುಖಾಮುಖಿಯಲ್ಲಿ ಬೆಲ್ಜಿಯಂ ವಿರುದ್ಧ ಇರಾನ್ ತಂಡವು 0-0 ಗೋಲುಗಳ ರೋಚಕ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಇರಾನ್ ತಂಡದ ಗೋಲ್‌ಕೀಪರ್ ಅಲಿರೆಜಾ ಬೈರಾನ್‌ವಾಂಡ್ ಅವರು ಅದ್ಭುತ ಪ್ರದರ್ಶನದ ಮೂಲಕ ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಬೆಲ್ಜಿಯಂನಂತಹ ಬಲಿಷ್ಠ ತಂಡದ ಮಾರಕ ಗೋಲ್‌ಗಳನ್ನು ಹೆದರದೆ ತಡೆದು ನಿಂತ ಬೈರಾನ್‌ವಾಂಡ್, ಇರಾನ್ ಪಾಲಿಗೆ ರಕ್ಷಣಾ ಗೋಡೆಯಾಗಿ ನಿಂತರು. ಈ ಅಸಾಧಾರಣ ಪ್ರದರ್ಶನದ ಮೂಲಕ ಅವರು ಜಾಗತಿಕ ಫುಟ್‌ಬಾಲ್ ವಲಯದಲ್ಲಿ ಮತ್ತೊಮ್ಮೆ ತಮ್ಮ ಛಾಪು ಮೂಡಿಸಿದ್ದಾರೆ.

Alireza Beiranvand Inspiring Journey From Poverty to FIFA World Cup Hero Know Complete details

ಕಣ್ಣೀರು, ಹಸಿವು, ಕಠಿಣ ಪರಿಶ್ರಮದ ಕಥೆ

ಫುಟ್‌ಬಾಲ್ ಜಗತ್ತಿನಲ್ಲಿ ಇಂದು 'ಪರ್ಷಿಯನ್ ಗೋಡೆ' ಎಂದೇ ಖ್ಯಾತರಾಗಿರುವ ಇರಾನ್‌ನ ಸ್ಟಾರ್ ಗೋಲ್‌ಕೀಪರ್ ಅಲಿರೆಜಾ ಬೈರಾನ್‌ವಾಂಡ್ ಅವರ ಯಶೋಗಾಥೆ ಯಾವುದೇ ರೋಚಕ ಸಿನಿಮಾಗೂ ಕಮ್ಮಿಯಿಲ್ಲ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಫಿಫಾ ವಿಶ್ವಕಪ್‌ನ ಬಲಿಷ್ಠ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ 7 ಅದ್ಭುತ ಸೇವ್‌ಗಳನ್ನು ಮಾಡಿ ಇರಾನ್‌ಗೆ ಐತಿಹಾಸಿಕ ಡ್ರಾ ಮಾಡಿಕೊಟ್ಟ ಈ 6 ಅಡಿ 4 ಇಂಚು ಎತ್ತರದ ಆಟಗಾರನ ಸಾಧನೆಯ ಹಿಂದೆ ಕಣ್ಣೀರು, ಹಸಿವು ಮತ್ತು ಕಠಿಣ ಪರಿಶ್ರಮದ ಕಥೆಯಿದೆ.

ಬಾಲ್ಯದಲ್ಲಿ ಕುರಿ ಕಾಯುವ ಕೆಲಸ

ಇರಾನ್‌ನ ಲೊರೆಸ್ತಾನ್ ಪ್ರಾಂತ್ಯದ ಅತ್ಯಂತ ಬಡ ಅಲೆಮಾರಿ ಕುರ್ದಿಶ್ ಕುಟುಂಬದಲ್ಲಿ ಜನಿಸಿದ ಅಲಿರೆಜಾ ಅವರ ಬಾಲ್ಯ ಕುರಿಗಳನ್ನು ಕಾಯುವುದರಲ್ಲೇ ಕಳೆಯಿತು. ಅವರಿಗೆ ಫುಟ್‌ಬಾಲ್ ಆಡುವುದೆಂದರೆ ಪಂಚಪ್ರಾಣ. ಆದರೆ ಬಡತನದ ಕಾರಣದಿಂದಾಗಿ ತಂದೆಗೆ ಮಗ ಫುಟ್‌ಬಾಲ್ ಆಡುವುದು ಇಷ್ಟವಿರಲಿಲ್ಲ. ಆಟ ಆಡುವುದು ಸಮಯದ ವ್ಯರ್ಥ ಎಂದು ಭಾವಿಸಿದ್ದ ತಂದೆ ಒಮ್ಮೆ ಕೋಪದಲ್ಲಿ ಅಲಿರೆಜಾ ಅವರ ಫುಟ್‌ಬಾಲ್ ಉಡುಪು ಮತ್ತು ಗ್ಲೌಸ್‌ಗಳನ್ನು ಹರಿದು ಹಾಕಿದ್ದರು. ಆದರೆ ಆಟದ ಮೇಲಿನ ಛಲ ಬಿಡದ ಅಲಿರೆಜಾ ಬರಿಗೈಯಲ್ಲೇ ಗೋಲುಗಳನ್ನು ತಡೆಯುವ ಅಭ್ಯಾಸ ಮುಂದುವರೆಸಿದರು.

ಫುಟ್‌ಬಾಲ್ ಕನಸು ನನಸಾಗಿದ್ದು ಹೇಗೆ?

ತನ್ನ ಫುಟ್‌ಬಾಲ್ ಕನಸನ್ನು ನನಸಾಗಿಸಿಕೊಳ್ಳಲು 12 ವರ್ಷದ ಅಲಿರೆಜಾ ತಮಗೆ ತಿಳಿದಿರುವ ಸಂಬಂಧಿಕರೊಬ್ಬರಿಂದ ಸ್ವಲ್ಪ ಹಣ ಸಾಲ ಪಡೆದು, ಯಾರಿಗೂ ಹೇಳದೆ ರಾಜಧಾನಿ ಟೆಹ್ರಾನ್‌ಗೆ ಬಸ್ ಹತ್ತಿ ಓಡಿಹೋದರು. ಟೆಹ್ರಾನ್‌ಗೆ ಬಂದಾಗ ಅವರ ಬಳಿ ಒಂದು ಹೊತ್ತಿನ ಊಟಕ್ಕೂ ಹಣವಿರಲಿಲ್ಲ, ತಂಗಲು ಜಾಗವೂ ಇರಲಿಲ್ಲ.

ಸ್ಥಳೀಯ ಫುಟ್‌ಬಾಲ್ ಕ್ಲಬ್‌ವೊಂದರ ಮೈದಾನದ ಗೇಟ್ ಬಳಿಯೇ ಅವರು ರಾತ್ರಿಗಳನ್ನು ಕಳೆಯುತ್ತಿದ್ದರು. ಒಂದು ದಿನ ಬೆಳಗ್ಗೆ ಎದ್ದಾಗ ಅವರ ಸುತ್ತಲೂ ಜನರು ಹಣ ಹಾಕಿದ್ದರು. ಜನರು ತಮ್ಮನ್ನು ಭಿಕ್ಷುಕ ಎಂದು ಭಾವಿಸಿದ್ದನ್ನು ಕಂಡು ಅಲಿರೆಜಾ ಕಣ್ಣೀರಿಟ್ಟಿದ್ದರು. ಆದರೆ ಅದೇ ಹಣದಿಂದ ಅಂದು ಹೊಟ್ಟೆ ತುಂಬಿಸಿಕೊಂಡಿದ್ದರು. ನಂತರ ಅವರ ಹಠವನ್ನು ಕಂಡು ಕೋಚ್ ಹುಸೇನ್ ಫೈಜ್ ಉಚಿತ ತರಬೇತಿ ನೀಡಲು ಒಪ್ಪಿಕೊಂಡರು.

ಹೊಟ್ಟೆಪಾಡಿಗಾಗಿ ಅಲಿರೆಜಾ ಮಾಡಿದ ಕೆಲಸಗಳು

ಫುಟ್‌ಬಾಲ್ ತರಬೇತಿಯ ಜೊತೆಗೆ ಬದುಕಲು ಅಲಿರೆಜಾ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿದರು. ಅವರ ಎತ್ತರದ ಕಾರಣದಿಂದಾಗಿ ದೊಡ್ಡ ದೊಡ್ಡ ಎಸ್‌ಯುವಿ ಕಾರುಗಳನ್ನು ತೊಳೆಯುವ ಕೆಲಸ ಸಿಕ್ಕಿತು. ಬಳಿಕ ಬಟ್ಟೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಿ ಅಲ್ಲೇ ರಾತ್ರಿ ಮಲಗುತ್ತಿದ್ದರು. ನಂತರ ಪಿಜ್ಜಾ ಅಂಗಡಿಯೊಂದರಲ್ಲಿ ಹಿಟ್ಟು ಕಲಸುವ ಕೆಲಸಕ್ಕೂ ಸೇರಿಕೊಂಡರು. ಅಷ್ಟೇ ಅಲ್ಲದೆ ಯಾವುದೇ ಅಂಜಿಕೆಯಿಲ್ಲದೆ ಮುನ್ಸಿಪಾಲಿಟಿಯಲ್ಲಿ ರಾತ್ರಿ ಶಿಫ್ಟ್‌ನಲ್ಲಿ ರಸ್ತೆ ಮತ್ತು ಪಾರ್ಕ್‌ಗಳನ್ನು ಗುಡಿಸುವ ಕೆಲಸವನ್ನೂ ಮಾಡಿದರು.

ಬಾಲ್ಯದಲ್ಲಿ ಅಲೆಮಾರಿಗಳಾಗಿದ್ದಾಗ ಕುರಿಗಳನ್ನು ಕಾಯುವಾಗ ಅಲಿರೆಜಾ ದಲ್ಪರನ್ ಎಂಬ ಸ್ಥಳೀಯ ಆಟವನ್ನು ಆಡುತ್ತಿದ್ದರು. ಇದರಲ್ಲಿ ಕಲ್ಲುಗಳನ್ನು ದೂರಕ್ಕೆ ಎಸೆಯಬೇಕಾಗುತ್ತಿತ್ತು. ಈ ಅಭ್ಯಾಸದಿಂದಾಗಿ ಅವರ ಕೈಗಳು ಬಲಿಷ್ಠವಾದವು. ಇಂದು ಅವರು ಫುಟ್‌ಬಾಲ್ ಇತಿಹಾಸದಲ್ಲೇ ಅತಿ ದೂರಕ್ಕೆ ಬಾಲ್ ಎಸೆದ (61 ಮೀಟರ್ - ದಕ್ಷಿಣ ಕೊರಿಯಾ ವಿರುದ್ಧ) ಮತ್ತು ಅತಿ ದೂರಕ್ಕೆ ಡ್ರಾಪ್ ಕಿಕ್ (78 ಮೀಟರ್) ಒದ್ದ ಕಾರಣಕ್ಕಾಗಿ ಎರಡು ಅಧಿಕೃತ ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ.

ರೊನಾಲ್ಡೊಗೆ ಶಾಕ್ ನೀಡಿದ್ದ ಅಲಿರೆಜಾ

2011ರಲ್ಲಿ ವೃತ್ತಿಪರ ಕ್ಲಬ್‌ಗೆ ಸೇರಿದ ಇವರು, 2015ರಲ್ಲಿ ಇರಾನ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. 2018ರ ರಷ್ಯಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ವಿರುದ್ಧದ ಪಂದ್ಯದಲ್ಲಿ ಜಗತ್ತಿನ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಪೆನಾಲ್ಟಿಯನ್ನು ಅದ್ಭುತವಾಗಿ ತಡೆದು ಇಡೀ ವಿಶ್ವದ ಗಮನ ಸೆಳೆದಿದ್ದರು. 4 ಬಾರಿ ಇರಾನ್ ಲೀಗ್‌ನ ಅತ್ಯುತ್ತಮ ಗೋಲ್‌ಕೀಪರ್ ಆಗಿ ಹೊರಹೊಮ್ಮಿರುವ ಇವರು, 'ಫಿಫಾ ದಿ ಬೆಸ್ಟ್' ಪ್ರಶಸ್ತಿಗೆ ನಾಮಿನೇಟ್ ಆದ ಮೊದಲ ಇರಾನ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಬಡತನ ಹಸಿವು ಮತ್ತು ಕಠಿಣ ಸಂದರ್ಭಗಳ ನಡುವೆಯೂ ಛಲ ಬಿಡದೆ ಹೋರಾಡಿದ ಅಲಿರೆಜಾ ಬೈರಾನ್‌ವಾಂಡ್ ಅವರ ಈ ಜೀವನ ಪಯಣ ಇಂದಿನ ಕೋಟ್ಯಂತರ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ.

Story first published: Monday, June 22, 2026, 14:12 [IST]
Other articles published on Jun 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+