ಬೆಕ್ಕು ಭವಿಷ್ಯ : ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಷ್ಯಾಕ್ಕೆ ಜಯ

ಸೈಂಟ್ ಪೀಟರ್ಸ್ ಬರ್ಗ್, ಜೂನ್ 14: ಫೀಫಾ ವಿಶ್ವಕಪ್ 2018 ಜಾಗತಿಕ ಸಮರದ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ಸೆಣಸಲಿವೆ. ಈ ಪಂದ್ಯದ ಫಲಿತಾಂಶವನ್ನು ಬಿಳಿ ಬೆಕ್ಕು ಈಗಲೇ ತೋರಿಸಿದೆ. ರಷ್ಯಾ ಗೆಲುವಿನೊಂದಿಗೆ ಶುಭಾರಂಭ ಮಾಡಲಿದೆಯಂತೆ.
ಪ್ರತಿ ವಿಶ್ವಕಪ್ ಟೂರ್ನಮೆಂಟ್ ನಲ್ಲೂ ಅಧಿಕೃತ ಭವಿಷ್ಯ ನುಡಿಯುವ ಪ್ರಾಣಿಗೆ ವಿಶೇಷ ಸ್ಥಾನಮಾನ ಸಿಗುತ್ತದೆ. ಕರಾರುವಾಕ್ ಭವಿಷ್ಯ ತೋರಿಸುತ್ತಿದ್ದ ಆಕ್ಟೋಪಸ್ ಪಾಲ್ ಇನ್ನು ನೆನಪು ಮಾತ್ರ. ಈ ಬಾರಿ ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನ ಹರ್ಮಿಟೇಜ್ ಮ್ಯೂಸಿಯಂನಲ್ಲಿರುವ ಬಿಳಿ ಬಣ್ಣದ ಬೆಕ್ಕು -ಭವಿಷ್ಯ ತೋರಿಸುವ ಅವಕಾಶ ಪಡೆದುಕೊಂಡಿದೆ.
ಜೂನ್ 14ರಂದು ಉದ್ಘಾಟನಾ ಸಮಾರಂಭದ ನಂತರ ರಷ್ಯಾ ಹಾಗೂ ಸೌದಿ ಅರೇಬಿಯಾ ಪಂದ್ಯದ ವಿಜೇತರು ಯಾರು ಎಂಬುದನ್ನು ತೋರಿಸಿದೆ.

ಎರಡು ದೇಶಗಳ ಬಾವುಟ ಇರಿಸಲಾಗಿದ್ದು ಅದರ ಕೆಳಗೆ ಆಹಾರ ತುಂಬಿದ ಬಟ್ಟಲು ಇಡಲಾಗುತ್ತದೆ. ಯಾವ ಬಟ್ಟಲನ್ನು ಆಯ್ಕೆ ಮಾಡಿಕೊಳ್ಳುತ್ತದೆಯೋ ಆ ತಂಡ ಅಂದಿನ ಪಂದ್ಯದ ವಿಜೇತ ಎಂದು ತಿಳಿಯಲಾಗುತ್ತದೆ. ಸದ್ಯ ಅಚಿಲ್ಸ್ ಬೆಕ್ಕು, ರಷ್ಯಾದ ಬಾವುಟದ ಬಳಿ ಆಹಾರ ಆಯ್ಕೆ ಮಾಡಿದೆ.
ಕಳೆದ ವರ್ಷ 2017ರ ಕಾನ್ಫಿಡರೇಷನ್ ಕಪ್ ಟೂರ್ನಮೆಂಟ್ ನ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ಅಚಿಲ್ಸ್ ಸರಿಯಾಗಿ ಊಹಿಸಿತ್ತು. ನಂತರ 2018ರ ವಿಶ್ವಕಪ್ ಗಾಗಿ ಅಚಿಲ್ಸ್ ಗೆ ತರಬೇತಿ ನೀಡಲಾಗಿದ್ದು, ಕಿವಿ ಕೇಳಿಸದ ಬಿಳಿ ಬೆಕ್ಕು, ಎಷ್ಟೇ ಕೆಮರಾ ಫ್ಲಾಶ್ ಆದರೂ ವಿಚಲಿತನಾಗದೆ ತನ್ನ ಆಯ್ಕೆ ಮಾಡಬಲ್ಲ ಸಾಮರ್ಥ್ಯ ಬೆಳೆಸಿಕೊಂಡಿದೆ.
2010ರ ಫೀಫಾ ವಿಶ್ವಕಪ್ ಸಂದರ್ಭದಲ್ಲಿ ಜರ್ಮನಿ ತಂಡ ಆಡಿದ 13 ಪಂದ್ಯಗಳಲ್ಲಿ 11 ಫಲಿತಾಂಶಗಳು ಪೌಲ್ ಅಕ್ಟೋಪಸ್ ಹೇಳಿದ ರೀತಿಯೇ ಫಲಿತಾಂಶಗಳು ಬಂದಿದ್ದವು.
ಇದಲ್ಲದೆ ಫೈನಲ್ ನಲ್ಲಿ ಸ್ಪೇನ್ ಗೆಲ್ಲಲಿದೆ ಎಂದಿದ್ದ ಪೌಲ್ ಭವಿಷ್ಯವೂ ನಿಜವಾಗಿತ್ತು. ಈಗ ಅಚಿಲ್ಸ್ ಸರದಿ, ಅಚಿಲ್ಸ್ ಭವಿಷ್ಯ ಎಷ್ಟು ನಿಜವಾಗುತ್ತೋ ಕಾದುನೋಡೋಣ
ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು
ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ. ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications