
ಮಾಸ್ಕೋ, ಜೂ. 19: ಮೊರ್ಡೋವಿಯಾ ಅರೆನಾದಲ್ಲಿ ನಡೆದ ಫೀಫಾ ವಿಶ್ವಕಪ್ ಕೊಲಂಬಿಯಾ-ಜಪಾನ್ ನಡುವಿನ ಪಂದ್ಯದಲ್ಲಿ ಜಪಾನ್ 2-1ರಿಂದ ಮೇಲುಗೈ ಸಾಧಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳು ಸಮಬಲ ಸಾಧಿಸಿದ್ದವು. ಆದರೆ ದ್ವಿತೀಯಾರ್ಧದಲ್ಲಿ ಜಪಾನ್ ಗೋಲ್ ಸಿಡಿಸಿ ಗೆಲುವು ತನ್ನದಾಗಿಸಿಕೊಂಡಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಪಂದ್ಯದ ಮೊದಲಾರ್ಧದಲ್ಲಿ ಜಪಾನ್ ಮೊದಲು ಗೋಲ್ ಖಾತೆ ತೆರೆಯಿತು. ಜಪಾನ್ ನ ಶಿಂಜಿ ಕಗಾವಾ ಅವರು 6ನೇ ನಿಮಿಷದಲ್ಲಿ ಗೋಲ್ ಬಾರಿಸಿ ಜಪಾನ್ ಗೆ 1-0ಯ ಮುನ್ನಡೆ ತಂದುಕೊಟ್ಟರು.
15ನೇ ನಿಮಿಷದಲ್ಲಿ ಜಪಾನ್ ಮತ್ತೊಂದು ಗೋಲ್ ಸಿಡಿಸಿ ಕೊಲಂಬಿಯಾಕ್ಕೆ ಅಘಾತವನ್ನು ನೀಡುವುದರಲ್ಲಿತ್ತು. ಆದರೆ ಕೊಲಂಬಿಯಾ ಗೋಲ್ ದಾಖಲಾಗದಂತೆ ನೋಡಿಕೊಂಡಿತು. ಬಲಿಷ್ಟ ತಂಡವಾಗಿ ಕೊಲಂಬಿಯಾ ಗುರುತಿಸಿಕೊಂಡಿದ್ದರೂ ಜಪಾನ್ ಮುನ್ನಡೆ ಸಾಧಿಸಿದ್ದರಿಂದ ಕೊಲಂಬಿಯಾ ಒತ್ತಡಕ್ಕೆ ಸಿಲುಕಿತು.
31ನೇ ನಿಮಿಷದಲ್ಲಿ ಕೊಲಂಬಿಯಾ ಆಟಗರಾರನನ್ನು ಬದಲಿಸಿಕೊಂಡಿತು. ಕ್ಯುಡ್ರಾಡೋ ಅವರು ಹೊರ ನಡೆದು, ವಿಲ್ಮರ್ ಬ್ಯಾರಿಯೊಸ್ ಮೈದಾನಕ್ಕಿಳಿದರು. 34ನೇ ನಿಮಿಷದಲ್ಲಿ ಗೋಲ್ ಬಾರಿಸಲು ಯತ್ನಿಸಿದ ಕೊಲಂಬಿಯಾ ಪ್ರಯತ್ನಕ್ಕೆ ಹಿನ್ನಡೆಯಾಯಿತು.
ಮೊದಲಾರ್ಧ ಮುಕ್ತಾಯಕ್ಕೂ ಮುನ್ನ ಕೊಲಂಬಿಯಾ ಗೋಲ್ ಖಾತೆ ತೆರೆಯಿತು. ಕೊಲಂಬಿಯಾದ ಕ್ವಿಂಟರ್ರೋ ಅವರು 39ನೇ ನಿಮಿಷದಲ್ಲಿ ಗೋಲ್ ಸಿಡಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದರು. ಮೊದಲಾರ್ಧದಲ್ಲಿ 1 ಹೆಚ್ಚುವರಿ ನಿಮಿಷವನ್ನು ಸೇರಿಸಲಾಯಿತು.
ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಪ್ರಾಬಲ್ಯ ಮೆರೆಯಲು ತೀವ್ರ ಪೈಪೋಟಿ ನಡೆಸಿದವು. ಆದರೆ 70 ನಿಮಿಷಗಳವರೆಗೆ ಇತ್ತಂಡಗಳಿಂದ ಗೋಲ್ ದಾಖಲಾಗಲಿಲ್ಲ. 73ನೇ ನಿಮಿಷದಲ್ಲಿ ಜಪಾನ್ ನ ಯುಯು ಒಸಾಕೊ ಗೋಲ್ ಸಿಡಿಸಿ ಬಲಿಷ್ಟ ಕೊಲಂಬಿಯಾವನ್ನು ಸೋಲಿನತ್ತ ಕೆಡವಿದರು.
ರಷ್ಯಾದ ಸರನ್ಸ್ಕ್ ನ ಮೊರ್ಡೋವಿಯಾ ಅರೆನಾದಲ್ಲಿನ ಎಚ್ ಗುಂಪಿನ ನಡುವಿನ ಈ ಕಾದಾಟದಲ್ಲಿ ಫೀಫಾ ರ್ಯಾಂಕಿಂಗ್ ನಲ್ಲಿ 16ನೇ ಶ್ರೇಯಾಂಕಿತ ಕೊಲಂಬಿಯಾ ಎದುರು 61ನೇ ಶ್ರೇಯಾಂಕಿತ ಜಪಾನ್ ಅಚ್ಚರಿ ರೀತಿಯಲ್ಲಿ ಗೆಲುವು ಸಾಧಿಸಿದೆ.