
ಮಾಸ್ಕೋ, ಜು. 3: ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಕಾದಾಟದಲ್ಲಿ ಸ್ವೀಡನ್ ತಂಡ ಸ್ವಿಟ್ಜರ್ ಲ್ಯಾಂಡ್ ವಿರುದ್ಧ 1-0ಯ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಸ್ವೀಡನ್ ಕ್ವಾರ್ಟರ್ ಫೈನಲ್ ಹಂತದ ಸ್ಪರ್ಧೆಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಪಂದ್ಯದ ದ್ವಿತೀಯಾರ್ಧದ 66ನೇ ನಿಮಿಷದಲ್ಲಿ ಸ್ವಿಡನ್ ಪರ ಎಮಿಲ್ ಫೋರ್ಸ್ಬರ್ಗ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅದಾಗಿ ಪಂದ್ಯಾಂತ್ಯದವರೆಗೂ ಸ್ವಿಟ್ಜರ್ ಲ್ಯಾಂಡ್ ಗೆ ಗೋಲ್ ಬಾರಿಸಲು ಸಾಧ್ಯವಾಗಲಿಲ್ಲ. 90+3ನೇ ನಿಮಿಷದಲ್ಲಿ ಸ್ವೀಡನ್ ನ ಮಾರ್ಟಿನ್ ಓಲ್ಸನ್ ಅವರನ್ನು ತಳ್ಳಿದ್ದಕ್ಕಾಗಿ ಸ್ವಿಟ್ಜರ್ ಲ್ಯಾಂಡ್ ನ ಮೈಕೆಲ್ ಲ್ಯಾಂಗ್ ವಿರುದ್ಧ ರೆಡ್ ಕಾರ್ಡ್ ಪ್ರದರ್ಶಿಸಲಾಯ್ತು.
ಅನಂತರ 90+6ನೇ ನಿಮಿಷದಲ್ಲಿ ಸ್ವೀಡನ್ ಗೆ ಪೆನಾಲ್ಟಿ ಶೂಟ್ ಗೆ ಅವಕಾಶ ನೀಡಲಾಯಿತಾದರೂ ಸ್ವಿಟ್ಜರ್ ಲ್ಯಾಂಡ್ ಗೋಲ್ ಕೀಪರ್ ಯಾನ್ ಸೋಮರ್ ಗೋಲ್ ತಪ್ಪಿಸಿ ಅಂಕವನ್ನು 1-0ಗೆ ನಿಲ್ಲಿಸಿದರು. ಪಂದ್ಯದ ಮೊದಲಾರ್ಧದಲ್ಲಿ 1 ಹೆಚ್ಚುವರಿ ನಿಮಿಷವನ್ನು ಸೇರಿಸಲಾಯ್ತು.
ಸ್ವೀಡನ್ ಗೆ 8ನೇ ನಿಮಿಷದಲ್ಲಿ ಮತ್ತು 28ನೇ ನಿಮಿಷದಲ್ಲಿ ಎರಡು ಗೋಲ್ ದಾಖಲಿಸಲು ಅವಕಾಶವಿತ್ತಾದರೂ ಆ ಅವಕಾಶಗಳು ಕೈ ತಪ್ಪಿದವು. ಎದುರಾಳಿ ಸ್ವಿಟ್ಜರ್ ಲ್ಯಾಂಡ್ ಗೋಲ್ ಕೀಪರ್ ಗೋಲ್ ತಪ್ಪಿಸಿದರು. ಸ್ವೀಡನ್ ಗೆಲುವು ಸಾಧಿಸಿದರೂ ಸ್ವಿಟ್ಜರ್ ಲ್ಯಾಂಡ್ ಉತ್ತಮ ಪೈಪೋಟಿ ನೀಡಿದ್ದು ಕಂಡುಬಂತು.