

ಬೆಂಗಳೂರು, ಜೂನ್ 07: ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2018ರ ಜಾಗತಿಕ ಸಮರದಲ್ಲಿ ಇಂಗ್ಲೆಂಡ್ ತಂಡವನ್ನು ಹ್ಯಾರಿ ಕೇನ್ ಅವರು ಮುನ್ನಡೆಸುತ್ತಿದ್ದಾರೆ. ಜಿ ಗುಂಪಿನಲ್ಲಿರುವ ಇಂಗ್ಲೆಂಡ್ ತಂಡ, ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಕಪ್ ಗೆಲ್ಲುವ ಹುಮ್ಮಸ್ಸಿನಿಂದ ಕಣಕ್ಕಿಳಿಯುತ್ತಿದೆ.
ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.
ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.
ದೇಶ: ಇಂಗ್ಲೆಂಡ್
ಗುಂಪು : ಜಿ ಗುಂಪಿನಲ್ಲಿ ಇಂಗ್ಲೆಂಡ್ ಜೊತೆಗೆ ಪನಾಮಾ, ಬೆಲ್ಜಿಯಂ ಹಾಗೂ ಟುನಿಷಿಯಾ.
ಫೀಫಾ ಶ್ರೇಯಾಂಕ : 13
2014ರ ವಿಶ್ವಕಪ್ ಫಲಿತಾಂಶ: ಗ್ರೂಪ್ ಹಂತದಿಂದಲೆ ನಿರ್ಗಮನ
ಇಲ್ಲಿ ತನಕ ಶ್ರೇಷ್ಠ ಸಾಧನೆ : ವಿಶ್ವ ಚಾಂಪಿಯನ್ 1966.
ಸ್ಟಾರ್ ಆಟಗಾರರು : ಹ್ಯಾರಿ ಕೇನ್ (ಸ್ಟ್ರೈಕರ್, ಟೊಟೆನ್ ಹ್ಯಾಮ್ ಹಾಟ್ಸ್ ಪುರ್), ರಹೀಮ್ ಸ್ಟರ್ಲಿಂಗ್ (ಸ್ಟ್ರೈಕರ್, ಮ್ಯಾಂಚೆಸ್ಟರ್ ಸಿಟಿ), ಕೈಲಿ ವಾಕರ್ (ಡಿಫೆಂಡರ್, ಮ್ಯಾಂಚೆಸ್ಟರ್ ಯುನೈಟೆಡ್), ಡೆಲೆ ಅಲ್ಲಿ(ಮಿಡ್ ಫೀಲ್ಡರ್, ಟೊಟೆನ್ ಹ್ಯಾಮ್ ಹಾಟ್ಸ್ ಪುರ್)
ಕೋಚ್ : ಗರೇತ್ ಸೌಥ್ ಗೇಟ್
ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು
2018ರಲ್ಲಿ ನಿರೀಕ್ಷೆ: ಜಿ ಗುಂಪಿನಿಂದ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಇಂಗ್ಲೆಂಡಿಗೆ ಕ್ವಾರ್ಟರ್ ಫೈನಲ್ ಹಂತಕ್ಕಿಂತ ಮೇಲಕ್ಕೇರುವುದು ಕಷ್ಟವಾಗಲಿದೆ. ಇಂಗ್ಲೆಂಡ್ ತಂಡದ ಡಿಫೆನ್ಸ್ ಮತ್ತೊಮ್ಮೆ ಕೈ ಕೊಡುವ ಸಾಧ್ಯತೆಯಿದೆ.
ಕೇನ್ ನಾಯಕತ್ವ: ಕಳೆದ ವರ್ಷ ಸ್ಕಾಲೆಂಡ್ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೇನ್ ಅವರು ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದರು.ಕಳೆದ 18 ತಿಂಗಳಿನಿಂದ ನಡೆದಿರುವ ಸಿದ್ಧತಾ ಶಿಬಿರದಲ್ಲಿ ಉತ್ತಮ ನಿರ್ವಹಣೆ ತೋರಿರುವ ಕೇನ್ ಅವರು ಉತ್ತಮ ಫಲಿತಾಂಶ ತರುವ ನಂಬಿಕೆಯಿದೆ ಎಂದು ತಂಡದ ಮ್ಯಾನೇಜರ್ ಗರೇಟ್ ಸೌಥ್ ಗೇಟ್ ಹೇಳಿದ್ದಾರೆ.
ಉಳಿದಂತೆ ಜೋ ಹಾರ್ಟ್, ಜಾಕ್ ವಿಲ್ಶೇರ್ ಅವರು ತಂಡಕ್ಕೆ ಆಯ್ಕೆಯಾಗಿಲ್ಲ. ಲಿವರ್ ಪೂಲ್ ನ ಟ್ರೆಂಟ್ ಅಲೆಕ್ಸಾಂಡರ್ ಅರ್ನಾಲ್ಡ್ ಅಚ್ಚರಿಯ ಆಯ್ಕೆ ಎನಿಸಿಕೊಂಡರೆ, ಚೆಲ್ಸಿ ಕ್ಯಾಪ್ಟನ್ ಗ್ಯಾರಿ ಕಾಹಿಲ್ ತಂಡಕ್ಕೆ ಬಲ ತರುವ ನಿರೀಕ್ಷೆಯಿದೆ.
ಜಿ ಗುಂಪಿನಲ್ಲಿರುವ ಇಂಗ್ಲೆಂಡ್ ತಂಡವು ಜೂನ್ 18ರಂದು ಟುನಿಷಿಯಾ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಸಾಮಾನ್ಯವಾಗಿ 3-4-2-1 ರಚನೆಯಲ್ಲಿ ಕಣಕ್ಕಿಳಿಯಲಿರುವ ಇಂಗ್ಲೆಂಡ್ ತಂಡಕ್ಕೆ ಕೇನ್ ಹಾಗೂ ಲಿಂಗಾರ್ಡ್ ಮುಂಪಡೆಯಲ್ಲಿದ್ದರೆ, ಹೆಂಡ್ರಿಸನ್ ಹಾಗೂ ಡೈಯರ್ ಮಿಡ್ ಫೀಲ್ಡ್ ನಲ್ಲಿ ವಾಕರ್ ಹಾಗೂ ಕಿರನ್ ಟ್ರಿಪ್ಪರ್ ಹಿಂಪಡೆಯಲ್ಲಿ ಆಡಲಿದ್ದಾರೆ. ಕಾಹಿಲ್, ಜಾನ್ ಸ್ಟೋನ್ಸ್ ಡಿಫೆನ್ಸ್ ಮೇಲೆ ಇಂಗ್ಲೆಂಡ್ ಭವಿಷ್ಯ ನಿಂತಿದೆ.