
ಮಾಸ್ಕೋ, ಜೂ. 20: ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಇಂದು ಮುಖಾಮುಖಿಯಾಗಿದ್ದ ಸೌದಿ ಅರೇಬಿಯಾ ಮತ್ತು ಉರುಗ್ವೆ ತಂಡಗಳ ಸೆಣಸಾಟದಲ್ಲಿ ಉರುಗ್ವೆ 1-0 ಅಂತರದ ಗೆಲುವು ದಾಖಲಿಸಿದೆ. ಲೂಯಿಸ್ ಸೌರೆಜ್ ಅವರು ಸಿಡಿಸಿದ ಗೋಲ್ ನೆರವಿನಿಂದ ಉರುಗ್ವೆ ಗೆಲುವನ್ನು ಸಂಭ್ರಮಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ
ಗ್ರೂಪ್ ಎಯ ಬುಧವಾರದ ಕಾದಾಟದಲ್ಲಿ 13ನೇ ನಿಮಿಷದಲ್ಲೇ ಉರುಗ್ವೆಗೆ ಮೊದಲ ಗೋಲ್ ದಾಖಲಿಸುವ ಅವಕಾಶವಿತ್ತು. ಆದರೆ ಗೋಲ್ ಸಿಡಿಸುವಲ್ಲಿನ ಪ್ರಯತ್ನ ವಿಫಲಗೊಂಡಿತು. ಪಂದ್ಯದಲ್ಲಿ ಉರುಗ್ವೆಯಿಂದ ಆಕರ್ಷಕ ಆಟ ಪ್ರದರ್ಶನಗೊಂಡಿತು.
23ನೇ ನಿಮಿಷದಲ್ಲಿ ಉರುಗ್ವೆಯ ಲೂಯಿಸ್ ಸೌರೆಜ್ ಮೊದಲ ಗೋಲ್ ಬಾರಿಸಿ ಉರುಗ್ವೆಗೆ 1-0ಯ ಮುನ್ನಡೆ ತಂದುಕೊಟ್ಟರು. ಈ ಗೋಲ್ ನೊಂದಿಗೆ ಸೌರೆಜ್ 100ನೇ ಪಂದ್ಯದಲ್ಲಿ ಒಟ್ಟು 52 ಅಂತಾರಾಷ್ಟ್ರೀಯ ಗೋಲ್ ಸಿಡಿಸಿದ ಸಾಧನೆಗೂ ಕಾರಣರಾದರು.
ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೂ ಮುನ್ನ 2 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತು. ಮೊದಲಾರ್ಧ ಮುಕ್ತಾಯವಾಗುವಾಗ ಸೌರೆಜ್ ಗೋಲ್ ಬಿಟ್ಟರೆ ಬೇರೆ ಗೋಲ್ ದಾಖಲಾಗದ್ದರಿಂದ ಉರುಗ್ವೆ ಮುನ್ನಡೆಯಲ್ಲಿತ್ತು.
75ನೇ ನಿಮಿಷಕ್ಕೆ ಸೌದಿ ಅರೇಬಿಯಾದ ಮೊಹಮ್ಮದ್ ಕಾನು ಅವರು ಗಾಯಗೊಂಡು ಪಂದ್ಯದಿಂದ ಹೊರ ನಡೆದರು. ಅವರ ಜಾಗಕ್ಕೆ ಹಟ್ಟನ್ ಬಾಬಿರ್ ಬಂದು ಸೇರಿಕೊಂಡರು. ಇತ್ತ ಉರುಗ್ವೆಯೂ ಬಹಳಷ್ಟು ಆಟಗಾರರನ್ನು ಬದಲಿಸಿಕೊಂಡಿದ್ದರಿಂದ 80ನೇ ನಿಮಿಷದಲ್ಲಿ ಕೊನೆಯಬಾರಿ ಸ್ಯಾಂಚೆಝ್ ಬದಲಿಗೆ ನಹಿತನ್ ನಂಡೆಜ್ ತಂಡವನ್ನು ಸೇರಿಕೊಂಡರು.
ದ್ವಿತೀಯಾರ್ಧದಲ್ಲಿ ಗೋಲ್ ದಾಖಲಾಗದ್ದರಿಂದ ಉರುಗ್ವೆ ಅಂತಿಮವಾಗಿ ಗೆಲುವಿನ ನಗೆ ಬೀರಿತು.