
ಮಾಸ್ಕೋ, ಜೂ. 15: ಎಕಟೆರಿನ್ಬರ್ಗ್ ನಲ್ಲಿ ನಡೆದ ಈಜಿಪ್ಟ್ ಮತ್ತು ಉರುಗ್ವೆ ನಡುವಿನ ಫೀಫಾ ವಿಶ್ವಕಪ್ 2018ರ ಎರಡನೇ ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ ಉರುಗ್ವೆ 1-0 ಅಂತರದ ಗೆಲುವು ದಾಖಲಿಸಿ ವಿಜಯದ ನಗು ಬೀರಿತು.
ಪಂದ್ಯದ ಮೊದಲಾದರ್ಧದಲ್ಲಿ ಎರಡೂ ತಂಡಗಳು ಗೋಲ್ ದಾಖಲಿಸಲು ಹರಸಾಹಸ ಮಟ್ಟವಾದರೂ ಯಾರಿಂದಲೂ ಗೋಲ್ ಸಿಡಿಯಲಿಲ್ಲ. ಆದರೆ ಗಿಮೆನೆಜ್ ಅವರು 89ನೇ ನಿಮಿಷದಲ್ಲಿ ದಾಖಲಿಸಿದ ಗೋಲ್ ನೆರವಿನಿಂದ ಉರುಗ್ವೆ ಗೆಲುವು ಸಾಧಿಸಿತು.
ದ್ವಿತೀಯಾರ್ಧದಲ್ಲಿ ಉರುಗ್ವೆಯ ಲೂಯಿಸ್ ಸೌರೆಜ್ ಅವರು 46ನೇ ನಿಮಿಷದಲ್ಲಿ ಮೊದಲ ಖಾತೆ ತೆರೆಯುವುದರಲ್ಲಿದ್ದರು. ಚೆಂಡು ಇನ್ನೇನು ಗೋಲ್ ಗೆರೆಯತ್ತ ನುಗ್ಗುವುದರಲ್ಲಿತ್ತು. ಆದರೆ ಈಜಿಪ್ಟ್ ನ ಎಲ್ಸೆನಾವಿ ಅವರು ಗೋಲ್ ತಪ್ಪಿಸುವಲ್ಲಿ ಯಶಸ್ವಿಯಾದರು.
58ನೇ ನಿಮಿಷದಲ್ಲಿ ಉರುಗ್ವೆ ಮೊದಲಬಾರಿ ಆಟಗಾರರನ್ನು ಬದಲಿಸಿತು. ನಾಂಡೆಜ್ ಅವರ ಬದಲಿಗೆ ಸ್ಯಾಂಚೆಝ್ ಅವರು ಮೈದಾನಕ್ಕಿಳಿದರು. ಉರುಗ್ವೆ 60ನೇ ನಿಮಿಷದಲ್ಲಿ ಮತ್ತೊಮ್ಮೆ ಆಟಗಾರರನ್ನು ಬದಲಿಸಿಕೊಂಡಿತು. ಡಿ ಅರಾಸ್ಕೆಟಾ ಅವರ ಬದಲಿಗೆ ರೊಡ್ರಿಗಜ್ ಕಣಕ್ಕಿಳಿದರು.
73ನೇ ನಿಮಿಷದಲ್ಲಿ ಮತ್ತೊಂದು ಗೋಲ್ ದಾಖಲಾಗುವುದರಲ್ಲಿತ್ತಾದರೂ ಅದೂ ಕೈತಪ್ಪಿತು. ಇವತ್ತಿನ ಪಂದ್ಯದಲ್ಲಿ ಈಜಿಪ್ಟ್ ನ ಮೊಹಮದ್ ಸಲಾಹ್ ಅವರು ಮೈದಾನಕ್ಕಿಳಿಯದಿರಲಿಲ್ಲ. ಸಲಾಹ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಪಂದ್ಯದ ವೇಳೆ ಸಲಾಹ್ ಪೆವಿಲಿಯನ್ ನಲ್ಲಿ ಕೂತು ತಂಡವನ್ನು ಬೆಂಬಲಿಸಿದರು.
ಸಲಾಹ್ ಪಂದ್ಯವನ್ನಾಡದಿದ್ದುದ್ದೇ ಒಂದು ರೀತಿಯಲ್ಲಿ ಈಜಿಪ್ಟ್ ಸೋಲಲು ಕಾರಣವೆನ್ನಬಹುದು. ಪಂದ್ಯದ ಬಳಿಕ ಸಲಾಹ್ ಅವರಿಂದ ನಿರಾಶೆ ವ್ಯಕ್ತವಾಗಿತ್ತು.