
2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೋಲುಗಳ ಗೆಲುವಿನ ಮೂಲಕ ಅರ್ಜೆಂಟೀನಾ ತಂಡ ಕ್ವಾರ್ಟರ್ ಫೈನಲ್ ತಲುಪಿತು.
ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ 1,000ನೇ ಪಂದ್ಯದಲ್ಲಿ 789ನೇ ಗೋಲು ಗಳಿಸಿದರು. ಇದೇ ವೇಳೆ ವಿಶ್ವಕಪ್‌ನ ನಾಕೌಟ್ ಸುತ್ತುಗಳಲ್ಲಿ ತಮ್ಮ ಮೊದಲ ಗೋಲು ಬಾರಿಸಿದರು. ಇದರೊಂದಿಗೆ ನೆದರ್ಲ್ಯಾಂಡ್ಸ್ ವಿರುದ್ಧ ಅಂತಿಮ ಎಂಟರ ಪಂದ್ಯದಲ್ಲಿ ಸೆಣಸಾಡಲಿದ್ದಾರೆ.
35 ವರ್ಷ ವಯಸ್ಸಿನ ಲಿಯೋನೆಲ್ ಮೆಸ್ಸಿ ಕತಾರ್ ಪಂದ್ಯಾವಳಿಯಲ್ಲಿ ಅವರ ಮೂರನೇ ಗೋಲು ಮತ್ತು ಫಿಫಾ ವಿಶ್ವಕಪ್‌ನಲ್ಲಿ ಒಂಬತ್ತನೇ ಗೋಲು ಗಳಿಸುವ ಮೂಲಕ, ದಂತಕಥೆ ಮರಡೋನಾ ಅವರಿಗಿಂತ ಒಂದು ಗೋಲು ಹೆಚ್ಚು ಬಾರಿಸಿದ ಸಾಧನೆ ಮಾಡಿದರು.
ಜೂಲಿಯನ್ ಅಲ್ವಾರೆಜ್ 57ನೇ ನಿಮಿಷದಲ್ಲಿ ಆಸ್ಟ್ರೇಲಿಯನ್ ಡಿಫೆಂಡಿಂಗ್ ಮೀರಿ ಗೋಲು ಗಳಿಸಿದರು. ನಂತರ ಎಂಜೊ ಫೆರ್ನಾಂಡಿಸ್ ಅವರ 77ನೇ ನಿಮಿಷದ ಮತ್ತೊಂದು ಗೋಲು ಅನಿರೀಕ್ಷಿತವಾಗಿ ಬಂತು. ಸಾರ್ವಕಾಲಿಕ ಅತ್ಯುತ್ತಮ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ಅಂತಿಮ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಲು ಪ್ರಯತ್ನಿಸಲಿದ್ದಾರೆ.

45,000 ಸಾಮರ್ಥ್ಯದ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ಆಸ್ಟ್ರೇಲಿಯಾದ ಹಳದಿ ಜೆರ್ಸಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಅರ್ಜೆಂಟೀನಾದ ಅಬ್ಬರದ ಆಟ ಮತ್ತು ಬೆಂಬಲಿಗರ ಚೀರಾಟದ ಮುಂದೆ ಏನು ನಡೆಯಲಿಲ್ಲ.
ಆಸ್ಟ್ರೇಲಿಯಾ ತಂಡವು ದೊಡ್ಡ ಅಂಡರ್‌ಡಾಗ್ ತಂಡವಾಗಿತ್ತು. ತವರಿನಲ್ಲಿ ಕೆಲವರು ಪಂದ್ಯಾವಳಿಯಲ್ಲಿ ಆಸೀಸ್ ಅಂತಿಮ 16ರ ಘಟ್ಟದವರೆಗೆ ಬರುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೂ ಇದು ಆಸ್ಟ್ರೇಲಿಯಾಗೆ ಆಘಾತಕಾರಿ ವಿಶ್ವಕಪ್ ಆಗಿದೆ.
ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ತನ್ನ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳಿಂದ ಸೋತಾಗ ಕತಾರ್‌ನಲ್ಲಿ ದೊಡ್ಡ ಆಘಾತಕ್ಕೆ ಒಳಗಾಗಿತ್ತು. ನಂತರದ ಪಂದ್ಯಗಳಲ್ಲಿ ಅವರು ಪುಟಿದೆದ್ದರು.