2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಕತಾರ್‌ನಲ್ಲಿ ಅದ್ಧೂರಿ ಚಾಲನೆ

ಕಳೆದ ಹಲವು ವರ್ಷಗಳಿಂದ ವಿವಾದಗಳಿಂದ ಸುದ್ದಿಯಾಗಿದ್ದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಭಾನುವಾರ (ನವೆಂಬರ್ 20) ಸಂಜೆ ಕತಾರ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ.
ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಡುವ ಮೊದಲು ಕತಾರ್‌ನ ಅಲ್ ಖೋರ್‌ನ ಅಲ್ ಬೈಟ್ ಸ್ಟೇಡಿಯಂನಲ್ಲಿ ಭಾನುವಾರ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಸುಮಾರು ಒಂದು ಗಂಟೆಗಳ ಕಾಲ ನಡೆದ ವೇದಿಕೆ ಸಮಾರಂಭದಲ್ಲಿ ಕತಾರ್‌ನ ಸಾಂಸ್ಕೃತಿಕ ಪರಂಪರೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಅನಾವರಣ ಕಂಡಿತು.
ಈ ವೇಳೆ ಖ್ಯಾತ ಸಂಗೀತಗಾರರು, ಹಾಡುಗಾರರು ಮತ್ತು ಕಲಾವಿದರ ಆಕರ್ಷಕ ನೃತ್ಯ ಕೂಡ ಉದ್ಘಾಟನಾ ಸಮಾರಂಭದ ಪ್ರಮುಖ ಅಂಶವಾಗಿತ್ತು. ಐದು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಅಮೆರಿಕದ ಮಾರ್ಗನ್ ಫ್ರೀಮನ್ ಅವರ ವಾಯ್ಸ್ ಓವರ್ ವಿಡಿಯೋ ಮೂಲಕ ಸಮಾರಂಭ ಆರಂಭಗೊಂಡಿತು.
ಸ್ವತಃ ಮಾರ್ಗನ್ ಫ್ರೀಮನ್ ವೇದಿಕೆಯ ಮೇಲೆ ಆಗಮಿಸಿದ ಬಳಿಕ ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಇದೇ ವೇಳೆ ಕತಾರ್‌ನ ಪ್ರಖ್ಯಾತ ಯೂಟ್ಯೂಬರ್, ಅಪರೂಪದ ಕಾಯಿಲೆಗೆ ತುತ್ತಾಗಿರುವ 20 ವರ್ಷದ ಘನಿಮ್ ಅಲ್-ಮುಫ್ತಾ ಕೂಡ ಮಾತನಾಡಿದರು.

ಅಭಿಮಾನಿಗಳಿಗೆ ರಸಮಂಜರಿ ನೀಡಿದ ಮೋರ್ಗನ್ ಫ್ರೀಮನ್, ಜಂಗ್ ಕುಕ್
ಮೋರ್ಗನ್ ಫ್ರೀಮನ್ ಮತ್ತು ಜಂಗ್ ಕುಕ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದ ಅಭಿಮಾನಿಗಳಿಗೆ ರಸಮಂಜರಿ ನೀಡಿದರು. ಇದಕ್ಕೂ ಮುನ್ನ ಫ್ರಾನ್ಸ್ ಲೆಜೆಂಡ್ ಮಾರ್ಸೆಲ್ ಡೆಸೈಲಿ ವಿಶ್ವಕಪ್ ಟ್ರೋಫಿಯನ್ನು ಕ್ರೀಡಾಭಿಮಾನಿಗಳ ಮುಂದೆ ಪ್ರದರ್ಶಿಸಿದರು.
ಇಡೀ ಕಾರ್ಯಕ್ರಮವನ್ನು ಮಾರ್ಗನ್ ಫ್ರೀಮನ್ ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು. 2010ರ ವಿಶ್ವಕಪ್‌ನ ಧ್ಯೇಯಗೀತೆ "ವಾಕಾ' ಹಾಗೂ ಈ ಬಾರಿಯ ವಿಶ್ವಕಪ್‌ನ ಧ್ಯೇಯಗೀತೆ "ಫೀಲ್ ದ ಮ್ಯಾಜಿಕ್ ಇನ್ ದ ಏರ್' ಮಿಶ್ರಣ ಹಾಡಿಗೆ ನೃತ್ಯ ಕಲಾವಿದರು ಅದ್ಭುತವಾಗಿ ಹೆಜ್ಜೆ ಹಾಕಿದ್ದು ಸೊಗಸಾಗಿತ್ತು.
ಉದ್ಘಾಟನಾ ಸಮಾರಂಭದ ವೇಳೆ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಧ್ವಜಗಳನ್ನು ಕಲಾವಿದರು ಪ್ರದರ್ಶಿಸಿದರು. ದಕ್ಷಿಣ ಕೊರಿಯಾದ ಗಾಯಕ ಜಂಗ್ ಕುಕ್ ಕೂಡ ಆಕರ್ಷಕ ಗೀತೆ ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.

ಎಲ್ಲರಿಗೂ ಫಿಫಾ ವಿಶ್ವಕಪ್‌ಗೆ ನಾವು ಸ್ವಾಗತ
"ಕತಾರ್ ಹಾಗೂ ಅರಬ್ ರಾಷ್ಟ್ರಗಳಿಂದ ಎಲ್ಲರಿಗೂ ಫಿಫಾ ವಿಶ್ವಕಪ್‌ಗೆ ನಾವು ಸ್ವಾಗತವನ್ನು ಕೋರುತ್ತಿದ್ದೇವೆ. ಈ ವಿಶ್ವಕಪ್ ಅನ್ನು ಯಶಸ್ವಿ ಮಾಡುವ ನಿಟ್ಟಿನಲ್ಲಿ ನಮ್ಮೊಂದಿಗೆ ಹಲವರು ಕೆಲಸ ಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ನೀವು ಕಾಯುತ್ತಿದ್ದ ಒಂದು ಸಂಭ್ರಮದ ಟೂರ್ನಿಯ ಆರಂಭದಲ್ಲಿ ನಾವಿದ್ದೇವೆ".
"ಮುಂದಿನ 28 ದಿನಗಳ ಕಾಲ ವಿಶ್ವ ನಮ್ಮ ದೇಶದತ್ತ ನೋಡುತ್ತಿರುತ್ತದೆ. ಈ ವಿಶ್ವಕಪ್‌ನೊಂದಿಗೆ ಆದ ಎಲ್ಲಾ ವಿಚಾರಗಳನ್ನು ಮರೆತು ಜನರು ಇಷ್ಟದಿಂದ ವಿಶ್ವಕಪ್ ನೋಡುತ್ತಾರೆ ಎನ್ನುವ ವಿಶ್ವಾಸವನ್ನು ನಾವು ಇಡುತ್ತೇವೆ," ಎಂದು ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಹೇಳಿದರು.

ಭಾರತದ ಪ್ರತಿನಿಧಿಯಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಭಾಗಿ
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಹಾಗೂ ದುಬೈ ಆಡಳಿತಗಾರ ಕೂಡ ಆಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು. ಸೌದಿ ಅರೇಬಿಯಾದ ಯುವರಾಜ ಮತ್ತು ಮಂತ್ರಿಗಳ ನಿಯೋಗವು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಭಾರತ ದೇಶದ ಪ್ರತಿನಿಧಿಯಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭಕ್ಕೆ ನೀರಸ ಪ್ರತಿಕ್ರಿಯೆ?
ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಇತರ ವಿಚಾರಗಳ ಕಾರಣಕ್ಕಾಗಿ ಕತಾರ್ ಜಗತ್ತಿನ ಆಕ್ರೋಶ ಎದುರಿಸುತ್ತಿದೆ. ಈ ಕಾರಣಕ್ಕಾಗಿಫುಟ್ಬಾಲ್ ವಿಶ್ವಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಾಗಿ ಕಾಣುತ್ತಿದ್ದವು ಎಂದು ವರದಿಯಾಗಿದೆ.

ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್‌ಗೆ ಆಘಾತ?
ಕತಾರ್‌ನ ಅಲ್ ಖೋಲ್‌ನ ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ಕತಾರ್ ವಿರುದ್ಧ ವಿರಾಮದ ವೇಳೆಗೆ ಎನ್ನರ್ ವೇಲೆನ್ಸಿಯಾ ಮೊದಲಾರ್ಧದಲ್ಲಿ ಎರಡು ಗೋಲು ಗಳಿಸಿ ಈಕ್ವೆಡಾರ್‌ಗೆ 2-0 ಗೋಲುಗಳನ್ನು ಗಳಿಸಿ ಮುನ್ನಡೆ ತಂದುಕೊಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications