
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022ರಲ್ಲಿ ಬಲಿಷ್ಟ ಅರ್ಜೆಂಟೀನಾ ತಂಡವು ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿದ್ದು, ಯಾರೂ ಕಾಣದಂತಹ ಸೋಲನ್ನ ಅನುಭವಿಸುವ ಮೂಲಕ ಅಚ್ಚರಿಯ ಫಲಿತಾಂಶ ಕಂಡಿದೆ. ರ್ಯಾಂಕಿಂಗ್‌ನಲ್ಲಿ 51ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ ತಂಡವು , ವಿಶ್ವ ಫುಟ್ಬಾಲ್‌ನ 3ನೇ ರ್ಯಾಂಕಿಂಗ್ ತಂಡದೆದುರು ಗೆಲ್ಲುವ ಮೂಲಕ ಅಚ್ಚರಿಯ ಗೆಲುವನ್ನ ಸಾಧಿಸಿದೆ.
ಅಪಾರ ಪ್ರಮಾಣದ ಫುಟ್ಬಾಲ್ ಅಭಿಮಾನಿಗಳನ್ನ ಹೊಂದಿರುವ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು 1-2 ಗೋಲುಗಳ ಅಂತರದಲ್ಲಿ ಸೋಲುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅಚ್ಚರಿಯ ಫಲಿತಾಂಶ ಕಂಡಂತಹ ಪಂದ್ಯಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಈ ರೀತಿಯಾದ ಅಚ್ಚರಿಯ ಫಲಿತಾಂಶ ಹೊರಬಂದಂತಹ ಪಂದ್ಯಗಳು ಯಾವುವು ಎಂಬುದನ್ನ ಈ ಕೆಳಗೆ ಕಾಣಬಹುದು.
ಇಟಲಿ 0-1 ಕೋಸ್ಟರಿಕಾ (ಬ್ರೆಜಿಲ್, 2014)
2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದಂತಹ ಫಿಫಾ ವಿಶ್ವಕಪ್‌ನಲ್ಲಿ ಕೋಸ್ಟರಿಕಾ ತಂಡವು ಬಲಿಷ್ಠ ಇಟಲಿ ತಂಡದ ವಿರುದ್ಧ ಗೆಲ್ಲುವ ಮೂಲಕ ಫುಟ್ಬಾಲ್ ಲೋಕಕ್ಕೆ ಶಾಕ್ ನೀಡಿತು. ಉರುಗ್ವೆ ವಿರುದ್ಧ ಗೆಲ್ಲುವ ಮೂಲಕ ಟೂರ್ನಮೆಂಟ್ ಆರಂಭಿಸಿದ ತಂಡವು, ನೆದರ್ಲ್ಯಾಂಡ್ಸ್ ವಿರುದ್ಧ ಪೆನಾಲ್ಟಿಯಲ್ಲಿ ಸೋಲನ್ನ ಅನುಭವಿಸಿತು.
ಫ್ರಾನ್ಸ್ 0-1 ಸೆನೆಗಲ್ (ಕೊರಿಯಾ/ಜಪಾನ್, 2002)
ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು 2002ರಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಜಂಟಿ ಆತಿಥ್ಯದಲ್ಲಿ ನಡೆದಂತಹ ವಿಶ್ವಕಪ್‌ನಲ್ಲಿ ಯಾರೂ ಊಹಿಸದ ಸೋಲನ್ನ ಕಂಡಿತು. ಬಲಿಷ್ಠ ಸ್ಟಾರ್ ಆಟಗಾರರನ್ನು ಹೊಂದಿದ್ದಂತಹ ಫ್ರಾನ್ಸ್ ತಂಡವು, ಮೊಟ್ಟ ಮೊದಲ ವಿಶ್ವಕಪ್ ಪಂದ್ಯವನ್ನಾಡಿದ ಸೆನೆಗಲ್ ತಂಡದ ವಿರುದ್ಧ 0-1 ಅಂತರದಲ್ಲಿ ಸೋಲನ್ನ ಕಂಡಿತು.
ಇಂಗ್ಲೆಂಡ್ 0-1 ಯುಎಸ್‌ಎ (ಬ್ರೆಜಿಲ್, 1950)
1950ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಬಹುದೊಡ್ಡ ಫುಟ್ಬಾಲ್ ತಂಡವಾಗಿ ಗುರುತಿಸಿಕೊಂಡಿತ್ತು. ಆದ್ರೆ ಆ ವರ್ಷದಲ್ಲಿ ಇಂಗ್ಲೆಂಡ್ ತಂಡವು ಯುಎಸ್‌ಎ ವಿರುದ್ಧ ಸೋಲುವ ಮೂಲಕ ಯಾರೂ ಊಹಿಸದ ರೀತಿಯಲ್ಲಿ ಮುಗ್ಗರಿಸಿತು.
ಜರ್ಮನಿ 0-1 ಮೆಕ್ಸಿಕೊ (ರಷ್ಯಾ, 2018)
2018ರಲ್ಲಿ ರಷ್ಯಾದಲ್ಲಿ ನಡೆದಂತಹ ಕಳೆದ ಫಿಫಾ ವಿಶ್ವಕಪ್‌ನಲ್ಲಿ ಮೆಕ್ಸಿಕೊ ತಂಡವು 1-0 ಅಂತರದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಗೆಲ್ಲುವ ಮೂಲಕ ವಿಶ್ವ ಫುಟ್ಬಾಲ್ ಲೋಕಕ್ಕೆ ಅಚ್ಚರಿಯ ಫಲಿತಾಂಶ ನೀಡಿತು.
ಬ್ರೆಜಿಲ್ 1-2 ನಾರ್ವೆ (ಫ್ರಾನ್ಸ್, 1998)
1998ರ ಫಿಫಾ ವಿಶ್ವಕಪ್‌ನಲ್ಲಿ ನಾರ್ವೆ ತಂಡವು ಐದು ಬಾರಿ ಚಾಂಪಿಯನ್ ಬ್ರೆಜಿಲ್ ತಂಡವನ್ನೇ ಮಣಿಸಿದ್ದು ಇತಿಹಾಸ. ಗ್ರೂಪ್ ಹಂತದಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಬ್ರೆಜಿಲ್ ತಂಡದ ವಿರುದ್ಧ ಪಂದ್ಯದ ಕೊನೆಯ ನಿಮಿಷದಲ್ಲಿ ಗೋಲು ದಾಖಲಿಸಿದ ನಾರ್ವೆ 2-1 ಅಂತರದಲ್ಲಿ ಗೆಲುವು ದಾಖಲಿಸಿತು.
ಅರ್ಜೆಂಟೀನಾ 0-1 ಕ್ಯಾಮರೂನ್ (ಇಟಲಿ, 1990)
ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವು 1990ರ ವಿಶ್ವಕಪ್‌ನಲ್ಲಿ ಆಫ್ರಿಕಾದ ದೇಶ ಕ್ಯಾಮರೂನ್ ವಿರುದ್ಧ ಸೋಲನ್ನ ಅನುಭವಿಸುವ ಮುಖಭಂಗ ಅನುಭವಿಸಿತು. ಲೆಜೆಂಡ್ ಡಿಯಾಗೊ ಮರಡೋನಾ ನೇತೃತ್ವದ ಅರ್ಜೆಂಟೀನಾ ತಂಡವು ಇಟಲಿಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಆರಂಭಿಕ ಪಂದ್ಯದಲ್ಲಿ ಸೋಲನ್ನ ಅನುಭವಿಸಿತು.
ವೆಸ್ಟ್ ಜರ್ಮನಿ 1-2 ಅಲ್ಗೇರಿಯಾ (ಸ್ಪೇನ್, 1982)
ಸ್ಪೇನ್‌ನಲ್ಲಿ ನಡೆದಂತಹ 1982ರ ವಿಶ್ವಕಪ್‌ನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಜರ್ಮನಿ ವಿರುದ್ಧ ಅಲ್ಗೇರಿಯಾ ತಂಡವು ಅಚ್ಚರಿಯಾಗಿ ಗೆಲ್ಲುವ ಮೂಲಕ ವೆಸ್ಟ್ ಜರ್ಮನಿಗೆ ಶಾಕ್ ನೀಡಿತು. 2-1 ಅಂತರದಲ್ಲಿ ಅಲ್ಗೇರಿಯಾ ಪಂದ್ಯವನ್ನು ಗೆದ್ದು ಬೀಗಿತು.
ಫ್ರಾನ್ಸ್ 0-2 ಮೆಕ್ಸಿಕೊ (ದಕ್ಷಿಣ ಆಫ್ರಿಕಾ, 2010)
2010ರಲ್ಲಿ ನಡೆದಂತಹ ವಿಶ್ವಕಪ್‌ನಲ್ಲಿ ಹ್ಯಾಂಡ್‌ಬಾಲ್ ಗೋಲ್ ವಿವಾದದ ಮೂಲಕ ಅರ್ಹತೆ ಪಡೆದಿದ್ದ ಫ್ರಾನ್ಸ್ ತಂಡವು, ಎರಡನೇ ಗ್ರೂಪ್ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ 0-2 ಗೋಲುಗಳ ಅಂತರದಲ್ಲಿ ಸೋಲನ್ನ ಅನುಭವಿಸಿತು. 2006ರ ರನ್ನರ್ ಅಪ್ ಆದ ಫ್ರಾನ್ಸ್ ತಂಡವನ್ನು ಮೆಕ್ಸಿಕೊ ಸೋಲಿಸಿದ್ದು ನಿಜಕ್ಕೂ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅಚ್ಚರಿಯ ಫಲಿತಾಂಶಗಳಲ್ಲಿ ಒಂದಾಗಿದೆ.