
ಮಾಸ್ಕೋ, ಜೂ. 27: ಫೀಫಾ ವಿಶ್ವಕಪ್ ಗ್ರೂಫ್ ಎಫ್ ಮೆಕ್ಸಿಕೋ-ಸ್ವೀಡನ್ ಕಾದಾಟದಲ್ಲಿ ಸ್ವೀಡನ್ 3-0 ಅಂತರದ ಗೆಲುವು ಸಾಧಿಸಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಮೂರು ಗೋಲ್ ಸಿಡಿಸಿ ಸ್ವೀಡನ್ ಗೆಲುವನ್ನಾಚರಿಸಿತು.
ಮೆಕ್ಸಿಕೋ-ಸ್ವೀಡನ್ ಎರಡೂ ತಂಡಗಳು ತಲಾ 6 ಅಂಕಗಳನ್ನು ಗಳಿಸಿರುವುದರಿಂದ ಎರಡೂ ತಂಡಗಳು 16ರ ಹಂತದ ಸ್ಪರ್ಧೆಗೆ ಪ್ರವೇಶ ಗಿಟ್ಟಿಸಿಕೊಂಡಿವೆ. ಕಝಾನ ಸ್ಟೇಡಿಯಂನಲ್ಲಿ ನಡೆದ ಸೌತ್ ಕೊರಿಯಾ-ಜರ್ಮನಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ತಂಡ ಕೊರಿಯಾದೆದುರು 2-0ಯಿಂದ ಸೋತು ಪಂದ್ಯಾಟದಿಂದ ಹೊರ ನಡೆದಿರುವುದು ಇತ್ತಂಡಗಳಿಗೆ ಅನುಕೂಲವನ್ನೊದಗಿಸಿತು.
ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಈ ಮೆಕ್ಸಿಕೋ-ಸ್ವೀಡನ್ ಕಾದಾಟದಲ್ಲಿ ಸ್ವೀಡನ್ 50ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿತು. ಸ್ವೀಡನ್ ನ ಲುಡ್ವಿಗ್ ಆಗಸ್ಟಿನ್ಸನ್ ಅವರು ಸ್ವಿಡನ್ ಮುನ್ನಡೆ ಕೊಟ್ಟರು. ಅದಾಗಿ 62ನೇ ನಿಮಿಷಲದಲ್ಲಿ ಆಂಡ್ರಿಯಾಸ್ ಗ್ರ್ಯಾನ್ಕ್ವಿಸ್ಟ್, 74ನೇ ನಿಮಿಷದಲ್ಲಿ ಎಡ್ಸನ್ ಅಲ್ವರೇಜ್ ಗೋಲ್ ಬಾರಿಸಿ ಸ್ವೀಡನ್ ಗೆಲುವಿಗೆ ಕಾರಣರಾದರು.
ಪಂದ್ಯದ ವೇಳೆ ಇತ್ತಂಡಗಳ ಆಟಗಾರರ ವಿರುದ್ಧ ಒಟ್ಟು ಐದುಸಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲಾಯ್ತು. ಇತ್ತಂಡಗಳಿಂದ ಒಟ್ಟು ಆರುಬಾರಿ ಆಟಗಾರರ ಬದಲಾವಣೆ ನಡೆಯಿತು.