ಮುಂಬೈ, ಜುಲೈ 10: ಇಂಡಿಯನ್ ಸೂಪರ್ ಲೀಗ್ (ಐಸ್ಎಲ್) ಫುಟ್ಬಾಲ್ ಟೂರ್ನಿಯ ಚೊಚ್ಚಲ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಜುಲೈ 10ರಂದು ನಡೆಸಲಾಗಿದೆ. ಎಂಟು ಫ್ರಾಂಚೈಸಿಗಳು ಭರ್ಜರಿ ಹರಾಜು ನಡೆಸಿ ಸ್ಟಾರ್ ಅಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿವೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ, ಸೌರವ್ ಗಂಗೂಲಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೂಪರ್ ಲೀಗ್ ನ ರಾಯಭಾರಿಗಳಾಗಿದ್ದಾರೆ.
ಭಾರತ ಫುಟ್ಬಾಲ್ ತಂಡದ ನಾಯಕ ಸ್ಟಾರ್ ಸ್ಟ್ರೈಕರ್ ಸುನಿಲ್ ಛೇಟ್ರಿ ಅವರು ಮುಂಬೈ ಫುಡ್ಬಾಲ್ ಕ್ಲಬ್ ಪಾಲಾಗಿದ್ದಾರೆ. ಮಿಡ್ ಫೀಲ್ಡರ್ ಯುಗೆನೆಸನ್ ಲಿಂಗ್ಡೋ ಹಾಗೂ ಸುನಿಲ್ ನಡುವೆ ಭಾರಿ ಪೈಪೋಟಿ ಕಂಡು ಬಂದಿತ್ತು. ಇಬ್ಬರಿಗೂ 1 ಕೋಟಿ ರು ಗೂ ಅಧಿಕ ಬೆಲೆಗೆ ಮಾರಾಟವಾದರು. ಲಿಂಗ್ಡೋ ಅವರನ್ನು ಪುಣೆ ಸಿಟಿ ಎಫ್ ಸಿ ಖರೀದಿಸಿತು.
ಮೊದಲ ಆವೃತ್ತಿಯಲ್ಲಿ ಐಎಸ್ಎಲ್ ಬದಲು ಐ-ಲೀಗ್ ಕ್ಲಬ್ ಪರ ಆಡಿದ್ದ ಸುನಿಲ್ ಛೇಟ್ರಿ ಬೆಂಗಳೂರು ಎಫ್ಸಿ ಪರ ಆಡಿ ಕಪ್ ಎತ್ತಿದ್ದರು. ಈ ಬಾರಿ ಐಎಸ್ಎಲ್ ನಲ್ಲಿ ಆಡಲು ಅನುಮತಿ ಸಿಕ್ಕಿತ್ತು. ಸುನಿಲ್ ಛೇಟ್ರಿಗೆ 80 ಲಕ್ಷ ರೂ. ಮೂಲಬೆಲೆ ನೀಡಲಾಗಿತ್ತು. ಮೂಲ ಬೆಲೆಗಿಂತ 40 ಲಕ್ಷ ರು ಅಧಿಕ ಮೊತ್ತಕ್ಕೆ ಸುನಿಲ್ ಸೇಲ್ ಆದರು.
27.50 ಲಕ್ಷ ರು ಮೂಲ ಬೆಲೆ ಹೊಂದಿದ್ದ ಲಿಂಗ್ಡೋ ಅವರನ್ನು 1.05 ಕೋಟಿ ರು ನೀಡಿ ಪುಣೆ ಸಿಟಿ ಎಫ್ ಸಿ ಖರೀದಿಸಿದ್ದು ವಿಶೇಷವಾಗಿದೆ. ಉಳಿದಂತೆ ಹಾಲಿ ಚಾಂಪಿಯನ್ ಅಟ್ಲೆಂಟಿಕೋ ಡಿ ಕೋಲ್ಕತ್ತಾ, ಗೋವಾ ಎಫ್ ಸಿ, ಕೇರಳ ಬ್ಲಾಸ್ಟರ್ಸ್, ನಾರ್ಥ್ ಈಸ್ಟ್ ಯುನೈಟೆಡ್ ಹಾಗೂ ಪುಣೆ ಸಿಟಿ ಎಫ್ ಸಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವು.
87ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸಿಕ್ಕಿಂನಲ್ಲಿ ಜನಿಸಿ ದೆಹಲಿಯಲ್ಲಿ ನೆಲೆಸಿ, ಬೆಂಗಳೂರು ಎಫ್ ಸಿ ಅವಿಭಾಜ್ಯ ಅಂಗವಾಗಿರುವ ಭಾರತೀಯ ಫುಟ್ಬಾಲ್ ತಂಡದ ನಾಯಕ 31 ವರ್ಷ ವಯಸ್ಸಿನ ಸುನಿಲ್ ಛೇಟ್ರಿ ಅವರಿಗೆ ಇದು ಮೊದಲ ಸೂಪರ್ ಲೀಗ್ ಆಗಿದೆ. ಅಕ್ಟೋಬರ್ 3ರಿಂದ ನಡೆಯಲಿರುವ 2ನೇ ಆವೃತ್ತಿಯ ಐಎಸ್ಎಲ್ ಆರಂಭವಾಗಲಿದೆ. (ಒನ್ ಇಂಡಿಯಾ ಸುದ್ದಿ)