ಅರ್ಜೆಂಟೀನಾ- ನೈಜೀರಿಯಾ ಪಂದ್ಯ ಇಂದು: ಮೆಸ್ಸಿ ಮೇಲಿದೆ ಎಲ್ಲರ ಕಣ್ಣು
ಬೆಂಗಳೂರು, ಜೂನ್ 26: ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿರುವ ಐಸ್‌ಲ್ಯಾಂಡ್ ವಿರುದ್ಧ ಡ್ರಾ ಮತ್ತು ಕ್ರೊವೇಷಿಯಾ ವಿರುದ್ಧ 3-0 ಅಂತರದ ಆಘಾತಕಾರಿ ಸೋಲು ಅನುಭವಿಸಿದ ಅರ್ಜೆಂಟೀನಾ, ಮಂಗಳವಾರ ನೈಜೀರಿಯಾ ತಂಡವನ್ನು ಎದುರಿಸಲಿದೆ.
ಕ್ರೊವೇಷಿಯಾ ಎದುರಿನ ಸೋಲಿನಿಂದ ಫೀಫಾ ವಿಶ್ವಕಪ್ ಸ್ಪರ್ಧೆಯಿಂದಲೇ ಹೊರಬೀಳುವ ಹಂತ ತಲುಪಿರುವ ಲಿಯೊನೆಲ್ ಮೆಸ್ಸಿ ಬಳಗ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದೆ.
ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದೆನಿಸಿಕೊಂಡಿರುವ ಅರ್ಜೆಂಟೀನಾ, ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿತ್ತು. ಆದರೆ ಮೆಸ್ಸಿ ಬಳಗ ಈಗ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಅರ್ಜೆಂಟೀನಾದ 40 ಮಿಲಿಯನ್ ಜನರ ನಿರೀಕ್ಷೆಯ ಭಾರ ಈಗ ಮೆಸ್ಸಿ ಹೆಗಲ ಮೇಲಿದೆ. ಜತೆಗೆ ಗೊನ್ಜಾಲೊ ಹಿಗ್ವೇನ್ ಮತ್ತು ಏಂಜೆಲ್ ಡಿ ಮಾರಿಯಾ ಅವರು ಸಾಥ್ ನೀಡಿದರೆ, ಅರ್ಜೆಂಟೀನಾ ಪುಟಿದೇಳುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಆದರೆ, ಎಲ್ಲರ ಗಮನ ಇರುವುದು ಮೆಸ್ಸಿ ಮೇಲೆ. ಏಕೆಂದರೆ ಮೆಸ್ಸಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಆದರೆ, ಗ್ರೂಪ್ 'ಡಿ'ಯಲ್ಲಿ ಅರ್ಜೆಂಟೀನಾದ ಹಾದಿ ಅಷ್ಟು ಸುಗಮವಾಗಿಲ್ಲ. ಐಸ್‌ಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ನೈಜೀರಿಯಾ, ಈ ಪಂದ್ಯವನ್ನು ಗೆದ್ದು ಎರಡನೆಯ ಸುತ್ತು ಪ್ರವೇಶಿಸುವ ತವಕದಲ್ಲಿದೆ.
ಒಂದು ಡ್ರಾ ಮತ್ತೊಂದು ಸೋಲಿನಿಂದ ಸಂಕಷ್ಟದಲ್ಲಿರುವ ಮೆಸ್ಸಿ ಬಳಗಕ್ಕೆ ಎರಡನೆಯ ಸುತ್ತನ್ನು ಪ್ರವೇಶಿಸಿರುವ ಕನಸನ್ನು ಇನ್ನೂ ಜೀವಂತವಾಗಿರಿಸುವಂತೆ ಮಾಡಿರುವುದು ಇದೇ ನೈಜೀರಿಯಾ ತಂಡ.
ಇದು ಮೆಸ್ಸಿಯ ಕೊನೆಯ ವಿಶ್ವಕಪ್ ಎಂಬ ಮಾತು ಫೀಫಾ ಆರಂಭಕ್ಕೆ ಮುಂಚೆಯಿಂದಲೂ ಕೇಳಿಬರುತ್ತಿದೆ. 2016ರ ಯೂರೋ ಟೂರ್ನಿಯಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಪೋರ್ಚುಗಲ್ ತಂಡಕ್ಕೆ ಗೆಲುವು ತಂದಿಟ್ಟಂತೆ, ಮೆಸ್ಸಿಗೆ ಅಂತರರಾಷ್ಟ್ರೀಯ ಗೆಲುವಿನ ಸಂಭ್ರಮದೊಂದಿಗೆ ವಿದಾಯ ಹೇಳುವ ಅವಕಾಶ ಸಿಗಲಿದೆಯೇ ಎಂಬುದು ಸದ್ಯದ ಕುತೂಹಲ.
ಮೊದಲ ನಾಕ್‌ಔಟ್ ಹಂತದಿಂದ ಮುಂದಿನ ದಾರಿ ಕ್ರಮಿಸಲು ನೈಜೀರಿಯಾ ವಿರುದ್ಧ ಗೆಲುವು ಕಂಡರೆ ಸಾಲದು. ಈಗಾಗಲೇ ಅರ್ಹತೆ ಪಡೆದುಕೊಂಡಿರುವ ಕ್ರೊವೇಷಿಯಾ ಎದುರು ಐಸ್‌ಲ್ಯಾಂಡ್ ಸೋಲು ಅನುಭವಿಸಬೇಕು.

ನೈಜೀರಿಯಾಕ್ಕೆ ಡ್ರಾ ಸಾಕು
ಐಸ್‌ಲ್ಯಾಂಡ್ ತಂಡವು ಕ್ರೊವೇಷಿಯಾ ಎದುರು ಸೋಲು ಅನುಭವಿಸಿದರೆ, ಎರಡನೆಯ ಹಂತಕ್ಕೆ ಪ್ರವೇಶಿಸಲು ನೈಜೀರಿಯಾ ತಂಡವು ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸಿದರೂ ಸಾಕು.
ಆದರೆ, ನೈಜೀರಿಯಾದ ವಿಲಿಯಮ್ ಟ್ರೂಸ್ಟ್ ಎಕಾಂಗ್, ಎದುರಾಳಿ ತಂಡದ ಬಗ್ಗೆ ಚಿಂತೆಗೀಡಾಗಿದ್ದಾರೆ. ಒಂದು ವೇಳೆ ಮೆಸ್ಸಿ ಲಯ ಕಂಡುಕೊಂಡರೆ ಸಮಸ್ಯೆ ಖಚಿತ. ಆದರೆ ಅದಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ ಅವರು.
ನಾವು ಉತ್ತಮ ಆಟಗಾರರಿರುವ ಪ್ರಬಲ ತಂಡವನ್ನು ಎದುರಿಸಿರುವುದು ಇದೇ ಮೊದಲೇನಲ್ಲ. ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ. ನಮಗೆ ಸಾಕಷ್ಟು ಅವಕಾಶಗಳಿವೆ ಎಂದಿದ್ದಾರೆ ಎಕಾಂಗ್.

ಅಹ್ಮದ್ ಮೂಸಾ
ಐಸ್‌ಲ್ಯಾಂಡ್ ವಿರುದ್ಧ ಎರಡು ಗೋಲುಗಳನ್ನು ಬಾರಿಸಿ ಪರಾಕ್ರಮ ತೋರಿದ್ದ ಅಹ್ಮದ್ ಮೂಸಾ, ನೈಜೀರಿಯಾ ತಂಡ ನೆಚ್ಚಿಕೊಂಡಿರುವ ಪ್ರತಿಭೆ. ಅದೇ ಆಟವನ್ನು ಅವರು ಅರ್ಜೆಂಟೀನಾ ವಿರುದ್ಧ ಪ್ರದರ್ಶಿಸಿದರೆ ಮೆಸ್ಸಿಯ ಚಾಕಚಕ್ಯತೆಗೆ ಸವಾಲೊಡ್ಡಬಹುದು.

ಲಿಯೊನಲ್ ಮೆಸ್ಸಿ
ಈಗ ತಾನೆ ವಿಶ್ವಕಪ್‌ಗೆ ಕಾಲಿಟ್ಟಿರುವ ಐಸ್‌ಲೆಂಡ್ ವಿರುದ್ಧದ ಪೆನಾಲ್ಟಿ ಕೊಡುಗೆಯನ್ನು ಗೋಲ್ ಆಗಿ ಪರಿವರ್ತಿಸುವುದರಲ್ಲಿ ಎಡವಿದ ಮೆಸ್ಸಿ, ಅರ್ಜೆಂಟೀನಾದ ಫುಟ್ಬಾಲ್ ಪ್ರಿಯರ ಕಣ್ಣಲ್ಲಿ ಈಗಾಗಲೇ ತಪ್ಪಿತಸ್ಥನಾಗಿದ್ದಾರೆ.
ಕ್ರೊವೇಷಿಯಾ ವಿರುದ್ಧವೂ ತಂಡದ ಗೋಲ್‌ಕೀಪರ್ ಮತ್ತು ಡಿಫೆಂಡರ್‌ಗಳ ಯಡವಟ್ಟಿನಿಂದ ಹೀನಾಯ ಸೋಲು ಎದುರಾಯಿತು. ಇದು ಮೆಸ್ಸಿ ಪಾಲಿಗೆ ಅತಿ ಮಹತ್ವದ ಪಂದ್ಯ. ಸೋತರೆ ಮೆಸ್ಸಿ ಪಾಲಿಗೆ ವಿಶ್ವಕಪ್‌ನಲ್ಲಿ ಇದೇ ಕೊನೆಯ ಪಂದ್ಯವಾಗಬಹುದು.

ಕೋಚ್ ವಿರುದ್ಧ ಅಸಮಾಧಾನ?
ಗುರುವಾರದ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಕ್ಕೆ 1986ರ ಫುಟ್ಬಾಲ್ ವಿಶ್ವಕಪ್ ವಿಜೇತ ಡಿಯಾಗೊ ಮರಡೋನಾ ಕೋಚ್ ಜಾರ್ಜ್ ಸಂಪೋಲಿ ಮತ್ತು ಅವರ ತಂತ್ರಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಇದರ ಬೆನ್ನಲ್ಲೇ ಅರ್ಜೆಂಟೀನಾದ ಆಟಗಾರರು ಸಂಪೋಲಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅಲ್ಲಿನ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಕ್ಲೌಡಿಯೊ ಟಾಪಿಯಾ ಅಲ್ಲಗಳೆದಿದ್ದಾರೆ.
ಕೋಚಿಂಗ್ ಸಿಬ್ಬಂದಿ ಅಭ್ಯಾಸದಲ್ಲಿ ಮಾರ್ಗದರ್ಶನ ನೀಡುತ್ತಿರುವುದನ್ನು ಮಾಧ್ಯಮಗಳು ನೋಡಿವೆ. ತಂಡಕ್ಕೆ ತರಬೇತಿ ನೀಡುತ್ತಿರುವುದನ್ನು ಗಮನಿಸಿದ್ದಾರೆ. ಆದರೂ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರು ತಮ್ಮ ಕಾರ್ಯ ಏನು ಎಂಬುದನ್ನು ಮರೆಯಬಾರದು. ನಾವು ಅವರಿಂದ ಬೆಂಬಲವನ್ನು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಅಂಕಿ ಅಂಶಗಳು
* ಅರ್ಜೆಂಟೀನಾ-ನೈಜೀರಿಯಾ ಮುಖಾಮುಖಿಯ ಎಂಟು ಪಂದ್ಯಗಳ ಪೈಕಿ ನಾಲ್ಕು ಪಂದ್ಯ ವಿಶ್ವಕಪ್‌ನಲ್ಲಿ ನಡೆದಿವೆ. ಈ ನಾಲ್ಕರಲ್ಲಿಯೂ ಅರ್ಜೆಂಟೀನಾ ಗೆಲುವು ಸಾಧಿಸಿತ್ತು.
* ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರ್ಜೆಂಟೀನಾ ಮೊದಲ ಸುತ್ತಿನಲ್ಲಿ ಗೆಲುವು ಕಂಡಿಲ್ಲ.
* 1998ರ ಬಳಿಕ ವಿಶ್ವಕಪ್‌ನಲ್ಲಿ ಸತತ ಎರಡು ಗೆಲುವು ಕಾಣಲು ನೈಜೀರಿಯಾ ಸಜ್ಜುಗೊಂಡಿದೆ. ಮೂರು ಅಂಕಗಳು ಅದರ ನಾಲ್ಕನೆಯ ನಾಕ್‌ಔಟ್ ಹಂತದ ಪ್ರವೇಶವನ್ನು ದೃಢಪಡಿಸಲಿದೆ.
* ಈ ಬಾರಿಯ ವಿಶ್ವಕಪ್‌ನಲ್ಲಿ ಮೆಸ್ಸಿ 12 ಶಾಟ್‌ಗಳನ್ನು ಬಾರಿಸಿದ್ದಾರೆ. ಆದರೆ, ಒಂದೂ ಗೋಲು ಪಡೆಯಲು ಯಶಸ್ವಿಯಾಗಿಲ್ಲ.
* ನೈಜೀರಿಯಾದ ಮೂಸಾ ವಿಶ್ವಕಪ್‌ನಲ್ಲಿ ನಾಲ್ಕು ಗೋಲ್ ಬಾರಿಸುವ ಮೂಲಕ ದೇಶದ ಸಾರ್ವಕಾಲಿಕ ಅತ್ಯಧಿಕ ಸ್ಕೋರರ್ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications