
ಮಾಸ್ಕೋ, ಜುಲೈ 16: ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಕುಣಿದು ಕುಪ್ಪಳಿಸುವ ಮೂಲಕ ಗಮನ ಸೆಳೆದರು. ತಮ್ಮ ದೇಶದ ತಂಡ ಪ್ರಶಸ್ತಿ ಬಾಚಿಕೊಂಡ ಖುಷಿಯನ್ನು ಕ್ರೀಡಾಭಿಮಾನಿಯಾಗಿ ಅವರು ಸಂಭ್ರಮಾಚರಿಸಿದರು.
ಹೆಚ್ಚಿನ ಸಾರಿ ದೇಶದ ಪ್ರಧಾನಿ ಅಥವಾ ಅಧ್ಯಕ್ಷರಂಥ ಗಣ್ಯರು ಸಂಭ್ರಮಾಚರಿಸಿಕೊಳ್ಳುವಾಗ ದೇಶದ ಘನತೆ ಬಗ್ಗೆ ಮುಲಾಜು ಮಾಡುತ್ತಾರೆ. ಹೇಗೆಂದರೇಗೆ ಸಂಭ್ರಮಾಚರಿಸಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಮ್ಯಾಕ್ರಾನ್ ತಾನು ಫ್ರಾನ್ಸ್ ಅಧ್ಯಕ್ಷ ಎನ್ನುವುದನ್ನು ಮರೆತು ಅಪ್ಪಟ ಕ್ರೀಡಾಭಿಮಾನಿ ರೀತಿಯಲ್ಲಿ ಫೀಫಾ ಸಂಭ್ರಮವನ್ನು ಆಚರಿಸಿದ್ದು ವಿಶೇಷವೆನಿಸಿತು.
ಪ್ರಶಸ್ತಿ ಸುತ್ತಿನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾವನ್ನು 4-2 ಅಂತರದಿಂದ ಸೋಲಿಸಿದ ಬಳಿಕ ಪ್ರಶಸ್ತಿ ವಿಜೇತ ತಂಡದ ಆಟಗಾರರ ರೂಮಿಗೆ ಭೇಟಿ ನೀಡಿದ ಎಮ್ಯಾನುಯೆಲ್ ಮಿಡ್ ಫೀಲ್ಡರ್ ಪೌಲ್ ಪೋಗ್ಬಾ ಅವರೊಂದಿಗೆ ವಿಡಿಯೋ ಚಿತ್ರೀಕರಿಸಿದರು. ಡಿಫೆಂಡರ್ ಬೆಂಜಮಿನ್ ಮೆಂಡಿ ಅವರೊಂದಿಗೆ ಡಾಬ್ ಪೋಸ್ (ಎಡಗೈಯನ್ನು ಭುಜದೆಡೆಗೆ ತರುವ ಒಂದು ವಿಧದ ಭಂಗಿ) ನೀಡಿದರು.
ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್, ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ಕ್ರೊವೇಷಿಯಾ ಅಧ್ಯಕ್ಷೆ ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಮೊದಲಾದ ಗಣ್ಯರ ನಡುವೆ ಹೆಚ್ಚು ಹುರುಪಿನಿಂದ ಓಡಾಡಿಕೊಂಡಿದ್ದ ಎಮ್ಯಾನುಯೆಲ್ ಮಳೆಯಲ್ಲಿ ನನೆದು ಆಟಗಾರರೊಂದಿಗೆ ಸಂಭ್ರಮಿಸಿದರು ಕೂಡ.
ಇಷ್ಟೇ ಅಲ್ಲ, ಕ್ರೊವೇಷಿಯಾ ಅಧ್ಯಕ್ಷೆ ಕೊಲಿಂಡಾ ಗ್ರಾಬರ್-ಕಿಟಾರ್ವಿಕ್ ಕೆನ್ನೆಗೆ ಮುತ್ತಿಕ್ಕಿದರು. ಫ್ರಾನ್ಸ್ ಆಟಗಾರರಾದ ಎಂಬಾಪೆ, ಗ್ರೀಜ್ಮನ್ ಹಣೆಗೆ, ಚಿನ್ನದ ವಿಶ್ವಕಪ್ ಟ್ರೋಫಿಗೂ ಮ್ಯಾಕ್ರಾನ್ ಮುತ್ತಿಕ್ಕಿ ತಮ್ಮೊಳಗಿನ ಖುಷಿ ವಿನಿಮಯ ಮಾಡಿಕೊಂಡಿದ್ದು ಫೀಫಾ ಸಮಾರೋಪದ ವೇಳೆ ಕಂಡುಬಂತು.