
ಮಾಸ್ಕೋ, ಜೂ. 17: ಫೀಫಾ ವಿಶ್ವಕಪ್ 2018ರ ಭಾನುವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಮೆಕ್ಸಿಕೋ 1-0 ಅಂತರದ ಜಯ ಸಾಧಿಸಿದೆ. ಹಿರ್ವಿಂಗ್ ಲೊಜಾನೊ ಅವರು 35ನೇ ನಿಮಿಷದಲ್ಲಿ ಗೋಲ್ ಸಿಡಿಸಿ ಮೆಕ್ಸಿಕೋ ಗೆಲುವನ್ನು ಬರೆದರು.
ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಎಫ್ ಗ್ರೂಪಿನ ಈ ಬಲಿಷ್ಟ ತಂಡಗಳ ಪಂದ್ಯದಲ್ಲಿ ಎರಡೂ ತಂಡಗಳು ಗೋಲ್ ಖಾತೆ ತೆರೆಯಲು ತೀವ್ರ ಸೆಣಸಾಟ ನಡೆಸಿದವು. ಮೊದಲ ಗೋಲ್ ಬಾರಿಸಿದ್ದು ಮೆಕ್ಸಿಕೋ. ಹಿರ್ವಿಂಗ್ ಲೊಜಾನೊ ಅವರು 35ನೇ ನಿಮಿಷದಲ್ಲಿ ಗೋಲ್ ಸಿಡಿಸಿ ಜರ್ಮನಿಗೆ ಒತ್ತಡ ಹೇರಿದರು.
ಇದಾಗಿ ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳು ಗೋಲ್ ಗಾಗಿ ಕಾದಾಡಿದವು. 38ನೇ ನಿಮಿಷದಲ್ಲಿ ಜರ್ಮನಿಗೆ ಪೆನಾಲ್ಟಿ ಶೂಟ್ ಗೆ ಅವಕಾಶ ಸಿಕ್ಕಿತ್ತು. ಜರ್ಮನಿಯ ಟೋನಿ ಕ್ರೂಸ್ ಅವರು ಎದುರಾಳಿ ಗೋಲ್ ಪೋಸ್ಟ್ ನ ಮೂಲೆಗೆ ಗುರಿಯಿಟ್ಟು ಚೆಂಡು ಒದ್ದರು. ಆದರೆ ಮೆಕ್ಸಿಕೋ ಗೋಲ್ ಕೀಪರ್ ಗಿಲ್ಲೆರ್ಮೊ ಒಕೊವಾ ಅವರು ಮಿಂಚಿನಂತೆ ಜಿಗಿದು ಚೆಂಡನ್ನು ಹೊರ ಚೆಲ್ಲಿದರು.
ಮಾಸ್ಕೋದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎರಡೂ ತಂಡಗಳ ಗೋಲ್ ಕೀಪರ್ ಗಳು ಜೊತೆಗೆ ಆಟಗಾರರೂ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡಿದ್ದು ಸುಳ್ಳಲ್ಲ. ಮೆಕ್ಸಿಕೋ ಮುನ್ನಡೆಯೊಂದಿಗೆ ಪಂದ್ಯದ ಮೊದಲಾರ್ಧ ಅಂತ್ಯಗೊಂಡಿತು. ಪಂದ್ಯದಲ್ಲಿ ಜರ್ಮನಿ ಪ್ರಾಬಲ್ಯ ಮೆರೆಯುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಮೆಕ್ಸಿಕೋ ಉತ್ತಮ ಆಟವನ್ನು ಪ್ರದರ್ಶಿಸಿತು.
55ನೇ ನಿಮಿಷಗಳವರೆಗೆ ಮತ್ತೆ ಗೋಲ್ ಸಿಡಿಯಲಿಲ್ಲ. ಜರ್ಮನಿಯ ಆಟವನ್ನು ಪ್ರತೀಸಾರಿಯೂ ಮೆಕ್ಸಿಕೊ ಹಿಮ್ಮೆಟ್ಟಿಸುತ್ತ ಸಾಗಿತು. 56ನೇ ನಿಮಿಷದಲ್ಲಿ ಮೆಕ್ಸಿಕೋ ಮತ್ತೊಂದು ಗೋಲ್ ಗೆ ಪ್ರಯತ್ನಿಸಿತಾದರೂ ಚೆಂಡು ಗೋಲ್ ಪೋಸ್ಟ್ ಮೇಲಿನಿಂದ ಹಾದುಹೋಯಿತು.
58ನೇ ನಿಮಿಷದಲ್ಲಿ ಮೆಕ್ಸಿಕೋ ಮೊದಲಿಗೆ ಆಟಗಾರನನ್ನು ಬದಲಿಸಿಕೊಂಡಿತು. ಕಾರ್ಲೋಸ್ ವೇಲಾ ಬದಲಿಗೆ ಎಡ್ಸನ್ ಮೈದಾನಕ್ಕಿಳಿದರು. 60ನೇ ನಿಮಿಷದಲ್ಲಿ ಜರ್ಮನಿ ಆಟಗಾರನನ್ನು ಬದಲಿಸಿಕೊಂಡಿತು. 66ನೇ ನಿಮಿಷಲ್ಲಿ ಮೆಕ್ಸಿಕೋ ಗೋಲ್ ಖಾತೆ ತೆರೆದಿದ್ದ ಹಿರ್ವಿಂಗ್ ಲೊಜಾನೊ ಅವರು ಮೈದಾನದಿಂದ ಹೊರ ನಡೆದರು. ಮೆಕ್ಸಿಕೋದ ತೆರವಾದ ಸ್ಥಾನವನ್ನು ಜಿಮೆನೆಜ್ ತುಂಬಿದರು.
81ನೇ ನಿಮಿಷದಲ್ಲಿ ಮೆಕ್ಸಿಕೋ ಕಡೆಯಿಂದ ಮತ್ತೊಂದು ಗೋಲ್ ದಾಖಲಾಗುವುದರಲ್ಲಿತ್ತು. ಆದರೆ ಆ ಗೋಲ್ ಪ್ರಯತ್ನ ಸಫಲವಾಗಲಿಲ್ಲ. ಪಂದ್ಯಾವಧಿ ಮುಗಿಯುತ್ತ ಬಂದಂತೆ ಜರ್ಮನಿ ಒತ್ತಡಕ್ಕೀಡಾಗುತ್ತಾ ಬಂತು. ಪಂದ್ಯಕ್ಕೆ 3 ನಿಮಿಷಗಳ ಹೆಚ್ಚುವರಿ ಸಮಯವನ್ನು ಸೇರಿಸಲಾದರೂ ಅಂತಿಮವಾಗಿ ಜರ್ಮನಿ ಸೋಲೊಪ್ಪಿಕೊಂಡಿತು.