ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು
ರಿಯೋ ಡಿ ಜನೈರೋ, ಜು. 14 : ಇಪ್ಪತ್ನಾಲ್ಕು ವರ್ಷಗಳಿಂದ ಫೀಫಾ ವಿಶ್ವಕಪ್ ಗೆಲ್ಲಬೇಕೆಂಬ ಕನಸನ್ನು ನನಸಾಗಿಸಿಕೊಂಡಿರುವ ಜರ್ಮನಿ ಮುಂದಿನ ನಾಲ್ಕು ವರ್ಷಗಳ ಕಾಲ ಫೀಫಾ ಕಪ್ ನೊಂದಿಗೆ ಸಂಭ್ರಮಿಸಲಿದೆ. 113ನೇ ನಿಮಿಷದಲ್ಲಿ ಮಾರಿಯೋ ಗೋಟ್ಜೆ ಗಳಿಸಿದ ಅದ್ಭುತ ಗೋಲಿನಿಂದ ಅರ್ಜೆಂಟಿನಾದ ಕನಸನ್ನು ನುಚ್ಚು ನೂರು ಮಾಡಿದ ಜರ್ಮನಿ ಈಗ ಚಾಂಪಿಯನ್.
ಬ್ರಜಿಲ್ ನ ಮರಾಕಾನಾ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ನಂತರ ಅಭಿಮಾನಿಗಳ ಹರ್ಷೋದ್ಘಾರ, ಬಾಣಬಿರುಸುಗಳ ಪ್ರದರ್ಶನದ ಜೊತೆಗೆ ಜರ್ಮನಿ ತಂಡಕ್ಕೆ ವಿಶ್ವಕಪ್ ಮತ್ತು ಹಲವಾರು ವೈಯಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಗೋಲ್ಡನ್ ಬೂಟ್, ಗೋಲ್ಡನ್ ಬಾಲ್, ಗೋಲ್ಡನ್ ಗ್ಲೋವ್, ಫೇರ್ ಪ್ಲೇ ಟ್ರೋಫಿ ಮತ್ತು ಫೈನಲ್ ಪಂದ್ಯದ ಪುರುಷೋತ್ತಮ ಪ್ರಶಸ್ತಿಯನ್ನು ವಿತರಿಸಲಾಯಿತು. ಯಾರ್ಯಾರು ಯಾವ್ಯಾವ ಪ್ರಶಸ್ತಿ ಗೆದ್ದಿದ್ದಾರೆ ಮುಂದಿನ ಚಿತ್ರ ಮೆರವಣಿಗೆಯಲ್ಲಿ ನೋಡಿಕೊಳ್ಳಿ. [ಜರ್ಮನಿಗೆ ಫೀಫಾ ವಿಶ್ವಕಪ್]

ಟ್ರೋಫಿಯೊಂದಿಗೆ ಸಂಭ್ರಮಿಸುತ್ತಿರುವ ಜರ್ಮನಿ ಆಟಗಾರರು
ಹೆಚ್ಚುವರಿ 30 ನಿಮಿಷಗಳ ನಂತರ ಕೊನೆಯ ವಿಷಲ್ ಬಾರಿಸುತ್ತಿದ್ದಂತೆ ಜರ್ಮನಿ ತಂಡದ ಆಟಗಾರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಟ್ರೋಫಿ ಕೈಗೆ ಬರುತ್ತಿದ್ದಂತೆ ಇಡೀ ವಿಶ್ವವನ್ನೇ ಹಿಡಿದೆತ್ತಿದಂತೆ ಸಂಭ್ರಮಿಸಿದರು.

ಅರ್ಜೆಂಟಿನಾದ ನಾಯಕ ಮೆಸ್ಸಿಗೆ ಗೋಲ್ಡನ್ ಬಾಲ್
ಅರ್ಜೆಂಟಿನಾದ ಲಿಯೋನೆಲ್ ಮೆಸ್ಸಿ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಆದರೆ, ಅವರಿಗಿಂತ ಬೇರೆಯವರು ಅರ್ಹರಿದ್ದರು ಎಂಬ ಮಾತುಗಳು ಕೂಡ ಕೇಳಿಬಂದವು.

ಮ್ಯಾನ್ಯುಯೆಲ್ ನ್ಯೂಯೆರ್ ಗೆ ಗೋಲ್ಡನ್ ಗ್ಲೋವ್
ಟೂರ್ನಿಯಾದ್ಯಂತ ಒಟ್ಟು 25 ಗೋಲ್ ಆಗುವುದನ್ನು ಕಾಪಾಡಿದ ಅಪದ್‌ಬಾಂಧವ ಜರ್ಮನಿ ತಂಡದ ಗೋಲ್ ಕೀಪರ್ ಮ್ಯಾನ್ಯುಯೆಲ್ ನ್ಯೂಯೆರ್‌ಗೆ ಗೋಲ್ಡನ್ ಗ್ಲೋವ್ ಟ್ರೋಫಿ.

ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ ಮಾರಿಯೋ
ಮುಂಪಡೆ ಆಟಗಾರ ಮಾರಿಯೋ ಗೋಟ್ಜೆ ಈಗ ಹೀರೋ. ಮೆಸ್ಸಿ ಕೂಡ ಮಾಡಲಾಗದ ಮ್ಯಾಜಿಕ್ಕನ್ನು ಮಾರಿಯೋ ಮಾಡಿದ್ದಾನೆ. 113ನೇ ನಿಮಿಷಯಲ್ಲಿ ಮಾರಿಯೋ ಬಾರಿಸಿದ ಏಕೈಕ ಗೋಲ್ ಜರ್ಮನಿಯನ್ನು ವಿಶ್ವವಿಜಯಿಯನ್ನಾಗಿಸಿತು.

ಅತ್ಯುತ್ತಮ ಯುವ ಆಟಗಾರ ಟ್ರೋಫಿ
ಅತ್ಯುತ್ತಮ ಯುವ ಆಟಗಾರ ಟ್ರೋಫಿಯನ್ನು ಫ್ರಾನ್ಸ್‌ನ ಪಾಲ್ ಪೊಗ್ಬಾ (ಬಲಗಡೆ) ಅವರು ಬಾಚಿಕೊಂಡರು.

ರಾಡ್ರಿಗ್ಸ್ ಮಡಿಲಿಗೆ ಗೋಲ್ಡನ್ ಬೂಟ್ ಟ್ರೋಫಿ
ಅತಿ ಹೆಚ್ಚು, ಅಂದರೆ 6 ಗೋಲು ಹೊಡೆದ ಕೊಲಂಬಿಯಾ ತಂಡದ ಯುವ ಆಟಗಾರ ಜೇಮ್ಸ್ ರಾಡ್ರಿಗ್ಸ್ ಅವರು ಗೋಲ್ಡನ್ ಬೂಟ್ ಟ್ರೋಫಿ ಪಡೆದರು.

ಕೊಲಂಬಿಯಾ ತಂಡಕ್ಕೆ ಫೇರ್ ಪ್ಲೇ ಟ್ರೋಫಿ
ನ್ಯಾಯಯುತವಾಗಿ ಆಡಿ ಕ್ವಾರ್ಟರ್ ಫೈನಲ್ ನಲ್ಲಿ ಬ್ರಜಿಲ್ ವಿರುದ್ಧ ಸೋತ ಕೊಲಂಬಿಯಾದ ತಂಡ ಫೇರ್ ಪ್ಲೇ ಟ್ರೋಫಿ ಗೆದ್ದುಕೊಂಡಿತು. ಅಭಿನಂದನೆಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications