ಏಷ್ಯನ್ ಗೇಮ್ಸ್ 2023 ರಲ್ಲಿ, ಭಾರತ ಫುಟ್ಬಾಲ್ ತಂಡ ಆರಂಭಿಕ ಆಘಾತವನ್ನು ಅನುಭವಿಸಿದೆ. ಮಂಗಳವಾರದಿಂದ ಆರಂಭವಾದ ಗೇಮ್ಸ್ ನಲ್ಲಿ ಭಾರತ ಪುರುಷರ ತಂಡ 1-5 ಗೋಲುಗಳ ಅಂತರದಿಂದ ಚೀನಾ ವಿರುದ್ಧ ಸೋಲು ಕಂಡಿತು.
ಹ್ಯಾಂಗ್‌ಝೌನಲ್ಲಿರುವ ಹುವಾಂಗ್‌ಲಾಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸುನಿಲ್ ಛೆಟ್ರಿ ನಾಯಕತ್ವದ ಟೀಂ ಇಂಡಿಯಾ ಚೀನಾ ವಿರುದ್ಧ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಯಿತು. ಭಾರತೀಯ ಫುಟ್ಬಾಲ್ ತಂಡವು 2014 ರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಆಡುತ್ತಿದೆ. ಆದರೆ ಸುನಿಲ್ ಛೆಟ್ರಿ ನಾಯಕತ್ವದ ಟೀಮ್ ಇಂಡಿಯಾ ಪ್ರಸಕ್ತ ಗೇಮ್ಸ್ ನಲ್ಲಿ ಕೆಟ್ಟ ಆರಂಭವನ್ನು ಪಡೆಯಿತು. ಭಾರತದ ಪರ ರಾಹುಲ್ ಕೆಪಿ ಮಾತ್ರ ಒಂದು ಗೋಲು ಗಳಿಸಿದರು.
ಇದಕ್ಕೂ ಮುನ್ನ ಎರಡೂ ತಂಡಗಳು 21 ವರ್ಷಗಳ ಹಿಂದೆ ಏಷ್ಯನ್ ಗೇಮ್ಸ್‌ನಲ್ಲಿ ಮುಖಾಮುಖಿಯಾಗಿದ್ದವು. ಚೀನಾ ಆರಂಭದಿಂದಲೂ ಭಾರತದ ಮೇಲೆ ಆಕ್ರಮಣಕಾರಿ ಆಟವಾಡುತ್ತಾ ನಡೆಸುತ್ತಾ ಸಾಗಿತು. ಪಂದ್ಯದ 17ನೇ ನಿಮಿಷದಲ್ಲಿ ಚೀನಾ ಮೊದಲ ಗೋಲು ದಾಖಲಿಸಿತು. ಟಿಯಾನಿ ಚೀನಾದ ಪರ ಗೋಲಿನ ಖಾತೆ ತೆರೆದರು.

ಚೀನಾದ ಮೊದಲ ಗೋಲಿಗೆ ಅದ್ಭುತ ಉತ್ತರ ನೀಡಿದ ಭಾರತದ ರಾಹುಲ್ ಕೆಪಿ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಟೀಂ ಇಂಡಿಯಾ ಪರ ಮೊದಲ ಗೋಲು ಬಾರಿಸಿ ಅಂತರವನ್ನು ಸಮನಾಗಿಸಿದರು. ಈ ಮೂಲಕ ಮೊದಲಾರ್ಧದಲ್ಲಿ ಭಾರತ ಮತ್ತು ಚೀನಾ 1-1ರಲ್ಲಿ ಸಮಬಲ ಸಾಧಿಸಿದವು.
ದ್ವಿತೀಯಾರ್ಧ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಅಂದರೆ 51ನೇ ನಿಮಿಷದಲ್ಲಿ ಚೀನಾದಿಂದ ಎರಡನೇ ಗೋಲು ದಾಖಲಾಯಿತು. ಚೀನಾ ಪರ ಡೈ ವೈಜುನ್ ಎರಡನೇ ಗೋಲು ದಾಖಲಿಸಿದರು. ಈ ಗೋಲಿನೊಂದಿಗೆ ಚೀನಾ 2-1 ಮುನ್ನಡೆ ಸಾಧಿಸಿತು. ಪಂದ್ಯದಲ್ಲಿ ಹಿಂದೆ ಬಿದ್ದಿದ್ದರೂ ಸುನಿಲ್ ಛೆಟ್ರಿ ಸಾರಥ್ಯದ ಭಾರತ ತಂಡಕ್ಕೆ ಚೀನಾವನ್ನು ತಡೆಯಲು ಸಾಧ್ಯವಾಗಲಿಲ್ಲ.
72ನೇ ನಿಮಿಷದಲ್ಲಿ ಚೀನಾ ಪರ ಟಾವೊ ಕಿಯಾಂಗ್‌ಲಾಂಗ್ ಮೂರನೇ ಗೋಲುಗಳಿಸಿದರು. ನಂತರ ಕೇವಲ ಮೂರು ನಿಮಿಷಗಳ ನಂತರ, ಪಂದ್ಯದ 75 ನೇ ನಿಮಿಷದಲ್ಲಿ, ಟಾವೊ ಕಿಯಾಂಗ್‌ಲಾಂಗ್ ತಮ್ಮ ಎರಡನೇ ಗೋಲು ಬಾರಿಸಿ ಅಬ್ಬರಿಸಿದರು.
ಫಿಫಾ ರ್‍ಯಾಂಕಿಂಗ್ ನಲ್ಲಿ 80ನೇ ಸ್ಥಾನದಲ್ಲಿರುವ ಚೀನಾ ತಂಡ 4 ಗೋಲು ಗಳಿಸಿದರೂ ಇದರ ದಾಹ ನಿಲ್ಲಲಿಲ್ಲ. ಪಂದ್ಯದ ಕೊನೆಯಲ್ಲಿ, ಇಂಜುರಿ ಟೈಮ್‌ನಲ್ಲಿ, ಚೀನಾ ಪರ ಹಾವೊ ಫಾಂಗ್ ತಂಡದ ಪರ 5 ನೇ ಗೋಲು ಗಳಿಸಿ 99 ನೇ ಶ್ರೇಯಾಂಕಿತ ಭಾರತ ತಂಡವನ್ನು ಹೀನಾಯವಾಗಿ ಸೋಲಿಸಿತು.
ಭಾರತ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಮಯನ್ಮಾರ್ ತಂಡವನ್ನು ಎದುರಿಸಲಿದ್ದು, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.