ಬ್ಲಾಸ್ಟರ್ಸ್‌ನ ಬಗ್ಗುಬಡಿದ ಒಡಿಶಾಗೆ ಮೊದಲ ಗೆಲುವಿನ ಸಂಭ್ರಮ

ಗೋವಾ: ದ್ವಿತೀಯಾರ್ದಧದಲ್ಲಿ ಸುರಿದ ಗೋಲ್‌ಗಳ ಸುರಿಮಳೆಯಲ್ಲಿ ಮೇಲುಗೈ ಸಾಧಿಸಿದ ಒಡಿಶಾ ಎಫ್‌ಸಿ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ 50ನೇ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ತನ್ನ ಮೊತ್ತ ಮೊದಲ ಗೆಲುವು ದಾಖಲಿಸಿತು. ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಒಡಿಶಾ ಎಫ್‌ಸಿ ತಂಡ 4-2 ಗೋಲ್‌ಗಳಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯ ಗೆದ್ದು ಸಂಪೂರ್ಣ ಮೂರು ಅಂಕಗಳನ್ನು ಒಡಿಶಾ ತನ್ನ ಖಾತೆಗೆ ಸೇರಿಸಿಕೊಂಡಿತಾದರೂ ಅಂಕಪಟ್ಟಿಯ ಕೊನೆಯ ಸ್ಥಾನದಿಂದ ಮೇಲೇಳಲು ಸಾಧ್ಯವಾಗಿಲ್ಲ. ಒಟ್ಟು 5 ಅಂಕಗಳೊಂದಿಗೆ ಅಂಕಪಟ್ಟಿಯ ಕೊನೆಯ 11ನೇ ಸ್ಥಾನದಲ್ಲೇ ಉಳಿಯುವಂತ್ತಾಗಿದೆ. ಮತ್ತೊಂದೆಡೆ ಟೂರ್ನಿಯಲ್ಲಿ ತನ್ನ ಐದನೇ ಸೋಲುಂಡ ಕೇರಳ ಬ್ಲಾಸ್ಟರ್ಸ್ ತಂಡ ಆಡಿದ 9 ಪಂದ್ಯಗಳಿಂದ 6 ಅಂಕಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಹೀನಾಯ ಸೋಲ ತಪ್ಪಿಸಲು ಸಾಧ್ಯವಾಗಲಿಲ್ಲ
ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಪರ ಸ್ಟ್ರೈಕರ್‌ಗಳಾದ ಜಾರ್ಡನ್ ಮರ್ರೆ (7ನೇ ನಿಮಿಷ) ಮತ್ತು ಗ್ಯಾರಿ ಹೂಪರ್ (79ನೇ ನಿ.) ಗೋಲ್ ಗಳಿಸಿದರಾದರೂ ತಂಡಕ್ಕೆ ಎದುರಾದ ಹೀನಾಯ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಕೇರಳ ತಂಡದ ಮಿಡ್‌ಫೀಲ್ಡರ್ ಜಾಕ್ಸನ್ ಸಿಂಗ್ 22ನೇ ನಿಮಿಷದಲ್ಲಿ ನೀಡಿದ ಉಡುಗೊರೆಯ ಗೋಲ್‌ನಿಂದ ಮುನ್ನಡೆ ಗಳಿಸಿದ ಒಡಿಶಾ ತಂಡದ ಪರ ಸ್ಟ್ರೈಕರ್ ಡಿಯೇಗೊ ಮೌರಿಸಿಯೊ (50ನೇ ಮತ್ತು 60ನೇ ನಿ.) ಡಬಲ್ ಗೋಲ್ ಬಾರಿಸಿದರೆ, ಮೊದಲಾರ್ಧದಲ್ಲಿ ಡಿಫೆಂಡರ್ ಸ್ಟೀಫನ್ ಟೇಲರ್ (42ನೇ ನಿ.) ಮೇಲುಗೈ ಒದಗಿಸಿದ್ದರು.

ಪ್ರಥಮಾರ್ಧದಲ್ಲೇ ಹಳಿತಪ್ಪಿದ ಕೇರಳ
ಪಂದ್ಯ ಶುರುವಾದ ಏಳೇ ನಿಮಿಷದಲ್ಲಿ ಕೇರಳ ತಂಡ ಗೋಲ್ ಬಾರಿಸಿತ್ತು. ಸ್ಟ್ರೈಕರ್ ಜಾರ್ಡನ್ ಮರ್ರೆ ತಮ್ಮ ಕಾಲ್ಚಳಕ ಪ್ರದರ್ಶಿಸಿ ಕೇರಳ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ, 22ನೇ ನಿಮಿಷದಲ್ಲಿ ಪ್ರಮಾದವೊಂದು ನಡೆದಿತ್ತು. ಮಿಡ್‌ಫೀಲ್ಡರ್ ಜಾಕ್ಸನ್ ಸಿಂಗ್ ಎದುರಾಳಿ ತಂಡದ ಪ್ರಯತ್ನವನ್ನು ವಿಫಲವನ್ನಾಗಿಸುವ ಪ್ರಯತ್ನದಲ್ಲಿ ತಮ್ಮ ತಂಡದ ವಿರುದ್ಧ ತಾವೇ ಗೋಲ್ ಬಾರಿಸಿಬಿಟ್ಟರು.
ಪರಿಣಾಮ ಪಂದ್ಯ 1-1 ಅಂತರದಲ್ಲಿ ಸಮಬಲದಲ್ಲಿತ್ತು. ಆದರೆ, ಪ್ರಥಮಾರ್ಧದ ಅಂತ್ಯದ ಹೊತ್ತಿಗೆ ಈ ಅಂತರವನ್ನು ಒಡಿಶಾ ತಂಡ 2-1ಕ್ಕೆ ಹಿಗ್ಗಿಸುವಲ್ಲಿ ಯಶಸ್ವಿಯಾಯಿತು. ಡಿಫೆಂಡರ್ ಸ್ಟೀಫನ್ ಟೇಲರ್ ಸಹ ಆಟಗಾರ ಮಹಿವಿಂಗ್‌ತಾಂಗ ನೀಡಿದ ಪಾಸ್ ಸಂಪೂರ್ಣ ಲಾಭ ಪಡೆದು ಚೆಂಡನ್ನು ಗೋಲ್ ಪೆಟ್ಟಿಗೆಯೊಳಗೆ ಸೇರಿಸಿದ್ದರು.

ದ್ವಿತೀಯಾರ್ಧದಲ್ಲೂ ಮೂರು ಗೋಲ್
ಪಂದ್ಯದ ಮೊದಲಾರ್ಧ ಭರಪೂರ ಮನೋರಂಜನೆ ನೀಡಿತ್ತು. ಅಂತೆಯೇ ದ್ವಿತೀಯಾರ್ಧವೂ ಕೂಡ ಅಷ್ಟೇ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಯಿತು. ಎರಡೂ ತಂಡಗಳು ಸಂಪೂರ್ಣ 3 ಅಂಕಗಳನ್ನು ಬಾಕಿಕೊಳ್ಳಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸುತ್ತಿದ್ದವು. ಈ ನಡುವೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಹೊರತಂದ ಸ್ಟ್ರೈಕರ್ ಡಿಯೇಗೊ ಮೌರಿಸಿಯೊ ಡಬಲ್ ಗೋಲ್ ಮೂಲಕ ಒಡಿಶಾ ಗೆಲುವಿನ ರೂವಾರಿಯಾದರು.
ಮತ್ತೊಮ್ಮೆ ಮಹಿವಿಂಗ್‌ತಾಂಗ ಮನಮೋಹಕ ಪಾಸ್ ನೀಡುವ ಮೂಲಕ 50ನೇ ನಿಮಿಷದಲ್ಲಿ ಡಿಯೇಗೊ ಮೊದಲ ಗೋಲ್ ಬಾರಿಸಲು ನೆರವಾದರು. ಇದಾದ 10 ನಿಮಿಷಗಳ ನಂತರ ಎನ್ ಕುಮಾರ್ ಕೊಟ್ಟ ಪಾಸ್‌ನ ಲಾಭ ತೆಗೆದುಕೊಂಡ ಡಿಯೇಗೊ ಎದುರಾಳಿ ಡಿಫೆಂಡರ್ ಮತ್ತು ಕೀಪರ್‌ನ ವಂಚಿಸಿ ಚೆಂಡನ್ನು ಗೋಲ್ ಪೆಟ್ಟಿಗೆಗೆ ಸೇರಿಸಿಬಿಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications