ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿಗೆ ತಲೆ ಬಾಗಿದ ಮೋಹನ್ ಬಗಾನ್

ಗೋವಾ: ಅಂಕಪಟ್ಟಿಯ ಅಗ್ರಸ್ಥಾನಕ್ಕಾಗಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅಪಾಯಕಾರಿ ಮೋಹನ್ ಬಗಾನ್ ತಂಡವನ್ನು ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ 55ನೇ ಲೀಗ್ ಪಂದ್ಯದಲ್ಲಿ 1-0 ಗೋಲ್‌ಗಳಿಂದ ಮಣಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ತನ್ನ ನಂ.1 ಸ್ಥಾನ ಕಾಯ್ದುಕೊಂಡಿದೆ. ಇಲ್ಲಿನ ಫತೋರ್ಡ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸ್ಟ್ರೈಕರ್ ಬಾರ್ತಲೋಮೆವ್ ಒಬೆಶೆ (69ನೇ ನಿಮಿಷ) ದಾಖಲಿಸಿದ ಏಕೈಕ ಗೋಲ್‌ನಿಂದ ಮೇಲುಗೈ ಪಡೆದ ಮುಂಬೈ ಸಿಟಿ ಎಫ್‌ಸಿ ತಂಡ ಮೋಹನ್ ಬಗಾನ್ ಎದುರು ಗೆದ್ದು ಬೀಗಿತು.
ಇದರೊಂದಿಗೆ ಟೂರ್ನಿಯಲ್ಲಿ ಈವರೆಗೆ ಆಡಿದ 10 ಪಂದ್ಯಗಳಲ್ಲಿ 8 ಜಯ 1 ಡ್ರಾ ಮತ್ತೊಂದು ಸೋಲಿನೊಂದಿಗೆ ಒಟ್ಟು 25 ಅಂಕಗಳನ್ನು ಕಳಿಸಿರುವ ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿನ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದೆ.

ಮೋಹನ್ ಬಗಾನ್ 2ನೇ ಸ್ಥಾನ
ಟೂರ್ನಿಯಲ್ಲಿ ತನ್ನ 10 ಪಂದ್ಯಗಳ ಅಂತ್ಯಕ್ಕೆ 2ನೇ ಸೋಲುಂಡ ಮೋಹನ್ ಬಗಾನ್ ತಂಡ 6 ಜಯ ಮತ್ತೆರಡು ಡ್ರಾ ಫಲಿತಾಂಶದೊಂದಿಗೆ ಒಟ್ಟು 20 ಅಂಕಗಳನ್ನು ದಾಖಲಿಸುವ ಮೂಲಕ 2ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಪ್ರಾಬಲ್ಯತೆ ಕಾಯ್ದುಕೊಂಡಿತ್ತು
ಪಂದ್ಯದಲ್ಲಿ ಚೆಂಡಿನ ಮೇಲಿನ ನಿಯಂತ್ರಣವನ್ನು ಶೇ. 68ರಷ್ಟು ಪಡೆದಿದ್ದ ಮುಂಬೈ ಸಿಟಿ ಎಫ್‌ಸಿ ತಂಡ ತನ್ನ ಪ್ರಾಬಲ್ಯತೆ ಕಾಯ್ದುಕೊಂಡಿತ್ತು. ಹೀಗಾಗಿ ಎರಡೂ ಅವಧಿಗಳಲ್ಲಿ ಗೋಲ್‌ಗಳಿಕೆಯ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿತ್ತು. 7 ಬಾರಿ ಗೋಲ್ ಗಳಿಸುವ ಅವಕಾಶ ಗಿಟ್ಟಿಸಿದ ಮುಂಬೈ ತಂಡ ಇದರಲ್ಲಿ 5 ಬಾರಿ ಚೆಂಡನ್ನು ಗುರಿ ಸಮೀಪಕ್ಕೆ ಕೊಂಡೊಯ್ದು ಒಮ್ಮೆ ಯಶಸ್ಸು ಕಂಡಿತು. ಈ ನಡುವೆ 7 ಕಾರ್ನರ್ ಕಿಕ್ ಅವಕಾಶಗಳನ್ನೂ ಗಿಟ್ಟಿಸಿಕೊಂಡಿತ್ತು.

ಆಕ್ರಮಣಕಾರಿ ಡಿಫೆನ್ಸ್
ಎದುರಾಳಿ ತಂಡದ ಸತತ ಆಕ್ರಮಣವನ್ನು ಭದ್ರ ಡಿಫೆನ್ಸ್‌ನೊಂದಿಗೆ ಕಾಪಾಡಿಕೊಂಡ ಬೋಹನ್ ಬಗಾನ್ ತಂಡ ಮಿಂಚಿನ ಆಟವನ್ನೇ ಆಡಿತ್ತು. ಬಿಟ್ಟುಕೊಟ್ಟ ಏಕೈಕ ಗೋಲ್‌ನ ಹೊರತಾಗಿ ಮೋಹನ್ ಬಗಾನ್ ತಂಡದ ಆಟ ಮೆಚ್ಚುವಂಥದ್ದಾಗಿತ್ತು. 7 ಬಾರಿ ಗೋಲ್ ಗಳಿಸುವ ಅವಕಾಶ ಸಿಕ್ಕಿತ್ತಾದರೂ ಕೇವಲ ಒಮ್ಮೆಯಷ್ಟೇ ಚೆಂಡನ್ನು ಗುರಿ ಕಡೆಗೆ ಮುನ್ನುಗ್ಗುವಂತೆ ಮಾಡಿದ್ದು, ಎಟಿಕೆ ತಂಡದ ಸೋಲಿಗೆ ಮುಖ್ಯ ಕಾರಣಗಳಲ್ಲಿ ಒಂದಾಯಿತು. ಇನ್ನು ಆಕ್ರಮಣಕಾರಿ ಡಿಫೆನ್ಸ್ ವೇಳೆ 3 ಬಾರಿ ಹಳದಿ ಕಾರ್ಡ್ ಸ್ವೀಕರಿಸಿ 10 ಬಾರಿ ಫೌಲ್ ಎಸಗಿತ್ತು.
ಪಂದ್ಯದ ದ್ವಿತೀಯಾರ್ಧದಲ್ಲಿ ಸಹ ಆಟಗಾರ ಬೌಮೋಸ್ ನೀಡಿದ ಪಾಸ್‌ನ ನೆರವಿನಿಂದ ಮುಂಬೈ ಸಿಟಿ ಎಫ್‌ಸಿ ತಂಡದ ಪರ ಗೆಲುವಿನ ಗೋಲ್ ಬಾರಿಸಿದ ಸ್ಟ್ರೈಕರ್ ಒಬೆಶೆ ಪಂದ್ಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications