ಐಎಸ್‌ಎಲ್: ಚೆನ್ನೈಯಿನ್ ವಿರುದ್ಧ ಜಯದ ಖಾತೆ ತೆರೆದ ಬೆಂಗಳೂರು

ಗೋವಾ, ಡಿಸೆಂಬರ್ 4: ನಾಯಕ ಸುನಿಲ್ ಛೆಟ್ರಿ (56ನೇ ನಿಮಿಷ) ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್ ಎಫ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಮೊದಲ ಜಯ ಗಳಿಸಿ ಸಂಭ್ರಮಿಸಿದೆ. ಬಿಎಫ್ ಸಿ ಪೆನಾಲ್ಟಿ ವಲಯದಲ್ಲಿ ಚೆನ್ನೈ ಆಟಗಾರ ಮಾಡಿದ ಪ್ರಮಾದವನ್ನು ಗುರುತಿಸುವಲ್ಲಿ ರೆಫರಿ ಯಶಸ್ವಿಯಾದರು.
ಇದರಿಂದ ಬಿಎಫ್ ಸಿಗೆ ಪೆನಾಲ್ಟಿ ಅವಕಾಶ. ನಾಯಕ ಸುನಿಲ್ ಛೆಟ್ರಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಕೊಂಡು 56ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಚೆನ್ನೈಯಿನ್ ಗೋಲ್ ಕೀಪರ್ ವಿಶಾಲ್ ಖೈತ್ ಚೆಂಡು ತಮ್ಮ ಎಡಭಾಗಕ್ಕೆ ಬರಬಹುದು ಎಂದು ಊಹಿಸಿದ್ದರು, ಆದರೆ ಸುನಿಲ್ ಛೆಟ್ರಿ ಬಲಭಾಗಕ್ಕೆ ಚೆಂಡನ್ನು ತುಳಿದು ನೆಟ್ ತಲುಪಿಸುವಲ್ಲಿ ಯಶಸ್ವಿಯಾದರು.
ಇದು ಛೆಟ್ರಿ ಅವರ ಋತುವಿನ ಮೊದಲ ಗೋಲು. 60ನೇ ನಿಮಿಷದಲ್ಲಿ ಬೆಂಗಲೂರಿಗೆ ಮತ್ತು 64ನೇ ನಿಮಿಷದಲ್ಲಿ ಚೆನ್ನೈಯಿನ್ ಗೆ ನೇರವಾಗಿ ಗೋಲು ಗಳಿಸುವ ಅವಕಾಶವಿದ್ದಿತ್ತು, ಖೈತ್ ಮತ್ತು ಸಂಧೂ ಅವರ ಸಾಹಸ ಗೋಲನ್ನು ನಿಯಂತ್ರಿಸಿತ್ತು.

ಗೋಲಿಲ್ಲದ ಸಮಬಲದ ಹೋರಾಟ
ಬೆಂಗಳೂರು ಮತ್ತು ಚೆನ್ನೈಯಿನ್ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ ಸಮಬಲದ ಹೋರಾಟದಲ್ಲಿ ನಡೆಯಿತು, ಚೆಂಡನ್ನು ನಿಯಂತ್ರಣದಲ್ಲಿರಿಸಿಕೊಳ್ಳುವಲ್ಲಿ ಹಾಗೂ ಟಾರ್ಗೆಟ್ ಸಾಧನೆಯಲ್ಲಿ ಬೆಂಗಳೂರು ಮೇಲುಗೈ ಸಾಧಸಿತ್ತು. ಆದರೆ ಗೋಲು ಗಳಿಸಲು ಚೆನ್ನೈಯಿನ್ ಗೋಲ್ ಕೀಪರ್ ಅವಕಾಶ ನೀಡಲಿಲ್ಲ. ಇತ್ತಂಡಗಳ ಹೋರಾಟ ಉತ್ತಮವಾಗಿದ್ದರೂ ಗೋಲು ಗಳಿಸುವಲ್ಲಿ ವಿಫಲವಾದಾಗ ಆ ಹೋರಾಟದ ಕ್ಷಣಗಳು ಕೂಡಲೇ ಇತಿಹಾಸವಾಗಿಬಿಡುತ್ತವೆ. 15 ನಿಮಿಷಗಳ ಅವಧಿಯಲ್ಲೇ ಅನಿರುಧ್ ಥಾಪಾ ಗಾಯಗೊಂಡು ಹೊರನಡೆದದ್ದು ಚೆನ್ನೈಯಿನ್ ತಂಡದ ಬಲದ ಮೇಲೆ ಪರಿಣಾಮವಾಗಿತ್ತು. ಇತ್ತಂಡಗಳ ಬ್ಯಾಕ್ ಲೈನ್ ಆಟಗಾರರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರ ಪರಿಣಾಮ ಅವಕಾಶಗಳು ಗೋಲಾಗಿ ಪರಿವರ್ತನೆಗೊಂಡಿಲ್ಲ.

ಬಲಿಷ್ಠರ ಹೋರಾಟ
ಹೀರೋ ಇಂಡಿಯನ್ ಸೂಪರ್ ಲೀಗ್ ನ 16ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ನರಾದ ಬೆಂಗಳೂರು ಎಫ್ ಸಿ ಮತ್ತು ಚೆನ್ನೈಯಿನ್ ಎಫ್ ಸಿ ಮುಖಾಮುಖಿಯಾದವು. ಇದು ದಕ್ಷಿಣ ಭಾರತದ ಡರ್ಬಿ, ಇಂಡಿಯನ್ ಸೂಪರ್ ಲೀಗ್ ನ ಬದ್ಧ ಎದುರಾಳಿಗಳು ಪ್ರಸಕ್ತ ಋತುವಿನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಇತ್ತಂಡಗಳು ಐಎಸ್ಎಲ್ ನಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿದ್ದು, ತಲಾ ಮೂರು ಜಯ ಗಳಿಸಿವೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಚೆನ್ನೈಯಿನ್ ತಂಡ ಎರಡು ಪಂದ್ಯಗಳಲ್ಲಿ ಕೇವಲ ಒಂದು ಗೋಲನ್ನು ನೀಡುವ ಮೂಲಕ ಈ ಋತುವನ್ನು ಉತ್ತಮ ರೀತಿಯಲ್ಲಿಯೇ ಆರಂಭಿಸಿದೆ. ರಫಾಯಿಲ್ ಕ್ರಿವೆಲ್ಲರೊ, ಅನಿರುಧ್ ಥಾಪಾ ಮತ್ತು ಲಾಲಿಯಾನ್ಜುವಾಲಾ ಚಾಂಗ್ಟೆ ಮಿಡ್ ಫೀಲ್ಡ್ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದಾರೆ.

ಹೆಗ್ಗಳಿಕೆಗೆ ಪಾತ್ರರಾದ ಥಾಪಾ
ಥಾಪಾ ಐಎಸ್ಎಲ್ ನಲ್ಲಿ ಈ ಬಾರಿ ಗೋಲು ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಬಾರಿ ಕಾರ್ಲ್ಸ್ ಕ್ಯುಡ್ರಾಟ್ ಪಡೆ ಉತ್ತಮ ರೀತಿಯ ಆರಂಭ ಕಂಡಿಲ್ಲ. ಎದುರಾಳಿ ತಂಡದ ಗೋಲ್ ಕೀಪರ್ ಗಳ ಸಾಮರ್ಥ್ಯವನ್ನು ಪರೀಕ್ಷಿಸುವಲ್ಲಿ ಬೆಂಗಳೂರು ವಿಫಲವಾಗಿದೆ. ಇದುವರೆಗೂ ನಡೆದ ಋತುಗಳಲ್ಲಿ ಬಂಗಳೂರಿನ ಅತ್ಯಂತ ಕಳಪೆ ಆರಂಭ ಎಂದರೆ ತಪ್ಪಾಗಲಾರದು,. ಸುನಿಲ್ ಛೆಟ್ರಿ, ಆಶಿಖ್ ಕುರುನಿಯಾನ್, ಕ್ರಿಸ್ಟಟಿಯನ್ ಆಪ್ಸೆತ್, ಡೆಶಾರ್ನ್ ಬ್ರೌನ್ ಮತ್ತು ಉದಾಂತ್ ಸಿಂಗ್ ಇದುವರೆಗೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿರುವುದು ತಂಡದ ಯಶಸ್ಸಿಗೆ ಅಡ್ಡಿಯಾಗಲು ಪ್ರಮುಖ ಕಾರಣವಾಗಿದೆ. ಆದರೆ ಈ ಪಂದ್ಯದಿಂದ ಜಯದ ಆರಂಭ ಕಾಣುವ ಉದ್ದೇಶ ಹೊತ್ತು ಬೆಂಗಳೂರು ಅಂಗಣಕ್ಕಿಳಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications