ಐಎಸ್‌ಎಲ್ 2021: ಮೋಹನ್ ಬಾಗನ್‌ಗೆ ಭಾರೀ ಅಂತರದ ಸೋಲುಣಿಸಿದ ಮುಂಬೈ ಸಿಟಿ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನ ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಎಟಿಕೆ ಮೋಹನ್ ಬಾಗನ್ ಮೊದಲ ಆಘಾತವನ್ನು ಅನುಭವಿಸಿದೆ. ಈ ಬಾರಿಯ ಟೂರ್ನಿಯ 14ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ನಡೆದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಭಾರೀ ಅಂತರದಿಂದ ಸೋಲು ಕಂಡಿದೆ. ಅಮೋಘ ಪ್ರದರ್ಶನ ನೀಡಿದ ಮುಂಬೈ ತಂಡ 5-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ವಿರುದ್ಧ ಮುಂಬೈ ಸಿಟಿ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಪಂದ್ಯ ಆರಂಭವಾದ ನಾಲ್ಕೇ ನಿಮಿಷದಲ್ಲಿ ವಿಕ್ರಮ್ ಸಿಂಗ್ ಮೊದಲ ಗೋಲು ಬಾರಿಸಿ ತಂಡಕ್ಕೆ ಮೊದಲ ಮುನ್ನಡೆ ನೀಡಿದರು. ಅದಾದ ಬಳಿಕ ಎರಡನೇ ಗೋಲು 25ನೇ ನಿಮಿಷದಲ್ಲಿ ಮತ್ತೆ ವಿಕ್ರಮ್ ಸಿಂಗ್ ಅವರಿಂದಲೇ ಬಂದಿತ್ತು. ಅದಾದ ನಂತರ ಮೂರನೇ ಗೋಲು ಇಗೋರ್ ಆಂಗುಲೋ ಮೂಲಕ 38ನೇ ನಿಮಿಷದಲ್ಲಿ ಸಿಡಿದಿತ್ತು. ಈ ಮೂಲಕ ಮೊದಲಾರ್ಧದಲ್ಲಿಯೇ ಮುಂಬೈ ಸಿಟಿ 3-0 ಅಂತರದಿಂದ ಮುನ್ನಡೆಯನ್ನು ಸಾಧಿಸಿತ್ತು.
ನಂತರ ದ್ವಿತಿಯಾರ್ಧದಲ್ಲಿಯೂ ಮುಂಬೈ ತಂಡದ ಗೋಲಿನ ಬೇಟೆ ಮುಂದುವರಿದಿತ್ತು. ಮೌರ್ತಡಾ ಫೌಲ್ 47ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸುವ ಮೂಲಕ ಗೋಲಿನ ಅಂತರವನ್ನು 4-0ಗೆ ಏರಿಸಿದರು. ಬಳಿಕ 52ನೇ ನಿಮಿಷದಲ್ಲಿ ಬಿಪಿನ್ ಸಿಂಗ್ ಮುಂಬೈ ಸಿಟಿ ಎಫ್‌ಸಿ ಪರವಾಗಿ ಐದನೇ ಗೋಲು ಸಿಡಿಸುವಲ್ಲಿ ಯಶಸ್ವಿಯಾದರು. ಆದರೆ ನಂತರ ಪಮದ್ಯದ 60ನೇ ನಿಮಿಷದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಮೊದಲ ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಆದರೆ ಇದರಿಂದಾಗಿ ಹೆಚ್ಚಿನ ಲಾಭವೇನೂ ಆಗಲಿಲ್ಲ. ಅಂತಿಮವಾಗಿ ಪಂದ್ಯದ ಮುಕ್ತಾಯಕ್ಕೆ ಮುಂಬೈ ಸಿಟಿ ತಂಡ 5-1 ಅಂತರದ ಬೃಹತ್ ಗೆಲುವು ಸಾಧಿಸಿತು.
ಈ ಮೂಲಕ ಮುಂಬೈ ಸಿಟಿ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿದ್ದು ಒಂದು ಪಂದ್ಯದಲ್ಲಿ ಸೋಲಿನ ರುಚಿ ಕಂಡಿದೆ. ಹೀಗಾಗಿ 6 ಅಂಕಗಳನ್ನು ಹೊಂದಿದೆ. ಮೋಹನ್ ಬಾಗನ್ ತಂಡ ಕೂಡ ಆಡಿದ ಮೂರು ಪಂದ್ಯಗಳ ಪೈಕಿ 2 ಗೆಲುವು ಹಾಗೂ 1 ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಭಾರೀ ಪ್ರಗತಿ ಸಾಧಿಸಿದೆ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ಮುಂಬೂ ಸಿಟಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿದ್ದ ಎಟಿಕೆ ಮೋಹನ್ ಬಾಗನ್ ತಂಡ 4ನೇ ಸ್ಥಾನಕ್ಕೆ ಕುಸಿದಿದೆ. ಒಡಿಶಾ ಎಫ್‌ಸಿ ತಂಡ ಎರಡನೇ ಸ್ಥಾನದಲ್ಲಿದ್ದು ಚೆನ್ನೈಯಿನ್ ಎಫ್‌ಸಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ ತಂಡ 6ನೇ ಸ್ಥಾನಕ್ಕೆ ಕುಸಿದಿದೆ.
ಮುಂಬೈ ಸಿಟಿ ಎಫ್‌ಸಿ ಆಡುವ ಬಳಗ: ಮೊಹಮ್ಮದ್ ನವಾಜ್ (ಗೋಲ್ ಕೀಪರ್), ರಾಹುಲ್ ಭೇಕೆ, ಅಮಿ ರಾನವಾಡೆ, ಮೌರ್ತಡಾ ಫಾಲ್ (ನಾಯಕ), ಮಂದರ್ ದೇಸಾಯಿ, ಕ್ಯಾಸಿಯೊ ಗೇಬ್ರಿಯಲ್, ಅಹ್ಮದ್ ಜಹೌಹ್, ಲಾಲೆಂಗ್ಮಾವಿಯಾ, ವಿಕ್ರಮ್ ಸಿಂಗ್, ಇಗೊರ್ ಅಂಗುಲೋ ಮತ್ತು ಬಿಪಿನ್ ಸಿಂಗ್.
ಎಟಿಕೆ ಮೋಹನ್ ಬಾಗನ್ ಆಡುವ ಬಳಗ: ಅಮರಿಂದರ್ ಸಿಂಗ್ (ಗೋಲ್ ಕೀಪರ್), ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ಜೋನಿ ಕೌಕೊ, ಕಾರ್ಲ್ ಮೆಕ್‌ಹಗ್, ದೀಪಕ್ ತಂಗ್ರಿ, ಲೆನ್ನಿ ರೋಡ್ರಿಗಸ್, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ಲಿಸ್ಟನ್ ಕೊಲಾಕೊ ಮತ್ತು ರಾಯ್ ಕೃಷ್ಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications