
ಇಂಡಿಯನ್ ಸೂಪರ್ ಲೀಗ್‌ನ 28ನೇ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಅಮೋಘ ಪ್ರದರ್ಶನ ನೀಡಿದ್ದು ನಾರ್ಥ್‌ಈಸ್ಟ್ ಯುನೈಟೆಡ್ ತಂಡದ ವಿರುದ್ಧ ಗೋಲುಗಳ ಸುರಿಮಳೆಗೈದಿದೆ. ಭರ್ಜರಿ 5-1 ಅಂತರದಿಂದ ಹೈದರಾಬಾದ್ ಎಫ್‌ಸಿ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ ಐದು ಪಂದ್ಯಗಳ ಪೈಕಿ ಹೈದರಾಬಾದ್ ಎಫ್‌ಸಿ ತಂಡ ಮೂರನೇ ಗೆಲುವು ಸಾಧಿಸಿದೆ.
ಪಂದ್ಯದ ಆರಂಭದಿಂದಲೇ ಹೈದರಾಬಾದ್ ಎಫ್‌ಸಿ ತಂಡ ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಮೇಲುಗೈ ಸಾಧಿಸುತ್ತಾ ಸಾಗಿತ್ತು. 12ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಾಗಿತ್ತು. ಚಿಂಗ್ಲೆನ್ಸನಾ ಸಿಂಗ್ ಹೈದರಾಬಾದ್ ತಂಡ ಪರವಾಗಿ ಮೊದಲ ಗೋಲು ಬಾರಿಸಿದರು. ಅದಾದ ಬಳಿಕ 27ನೇ ನಿಮಿಷದಲ್ಲಿ ಹೈದರಾಬಾದ್ ಪರವಾಗಿ ಮತ್ತೊಂದು ಗೋಲು ದಾಖಲಾಗಿತ್ತು. ಬಾರ್ತಲೋಮಿವ್ ಓಗ್ಬೆಚೆ ಹೈದರಾಬಾದ್ ತಂಡಕ್ಕೆ ಎರಡನೇ ಗೋಲು ದಾಖಲಿಸಿದರು. ಬಳಿಕ 43ನೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ತನ್ನ ಗೋಲಿನ ಖಾತೆ ತೆರೆಯಿತು. ಲಾಲ್ದನ್ಮಾವಿಯಾ ರಾಲ್ಟೆ ತಂಡಕ್ಕೆ ಗೋಲು ಗಳಿಸುವ ಮೂಲಕ ಪೈಪೋಟಿಗೆ ಕಾರಣವಾದರು.
ನಂತರ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿತ್ತು. ಆದರೆ ಗೋಲು ದಾಖಲಾಗಲಿಲ್ಲ. ಆದರೆ ಪಂದ್ಯದ ಅಂತಿಮ ಘಟ್ಟದಲ್ಲಿ ಹೈದರಾಬಾದ್ ಮತ್ತೊಮ್ಮೆ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಯಶಸ್ಸು ಪಡೆಯಿತು. 78ನೇ ನಿಮಿಷದಲ್ಲಿ ಮತ್ತೊಮ್ಮೆ ಬಾರ್ತಲೋಮಿವ್ ಓಗ್ಬೆಚೆ ಹೈದರಾಬಾದ್ ಪರವಾಗಿ ಗೋಲಿ ಸಿಡಿಸಿ ತಂಡದ ಮುನ್ನಡೆಯನ್ನು ಏರಿಸಿದರು. ಬಳಿಕ 90ನೇ ನಿಮಿಷದಲ್ಲಿ ಹೈದರಾಬಾದ್ ಪರವಾಗು ಅನಿಕೇತ್ ಅನಿಲ್ ಜಾಧವ್ ಗೋಲು ದಾಖಲಿಸಿ ಗೋಲಿನ ಸಂಖ್ಯೆಯನ್ನು 4ಕ್ಕೆ ಏರಿಸಿದರು. ಬಳಿಕ ಹೆಚ್ಚುವರಿ ಅವಧಿಯಲ್ಲಿ ಹೈದರಾಬಾದ್ ತಂಡ ಮತ್ತೊಂದು ಗೋಲು ಸಿಡಿಸಿತ್ತು, ಈ ಮೂಲಕ ಗೋಲಿನ ಸಂಖ್ಯೆ ಐದಕ್ಕೆ ಏರಿತ್ತು. ಅಂತಿಮವಾಗಿ ಹೈದರಾಬಾದ್ ಎಫ್‌ಸಿ ತಂಡ 5-1 ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಇನ್ನು ಈ ಗೆಲುವಿನೊಂದಿಗೆ ಹೈದರಾಬಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ಐದನೇ ಸ್ಥಾನದಲ್ಲಿತ್ತು. ಇನ್ನು ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಮತ್ತೊಂದು ಸೋಲು ಅನುಭವಿಸುವ ಮೂಲಕ ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲು ಅನುಭವಿಸಿದಂತಾಗಿದೆ. ಒಂದು ಗೆಲುವು ಪಡೆದಿರುವ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ಇನ್ನು ಅಂಕಪಟ್ಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದರೆ ಎರಡನೇ ಸ್ಥಾನದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿ ಒಡಿಶಾ ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡಗಳಿದೆ. ಬೆಂಗಳುರು ಎಫ್‌ಸಿ ತಂಡ 9ನೇ ಸ್ಥಾನದಲ್ಲಿದೆ.
ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಆಡುವ ಬಳಗ: ಸುಭಾಶಿಶ್ ರಾಯ್ (ನಾಯಕ ಹಾಗೂ ಗೋಲ್ ಕೀಪರ್), ಪ್ಯಾಟ್ರಿಕ್ ಫ್ಲೋಟ್‌ಮನ್, ತೊಂಡೊನ್ಬಾ ಸಿಂಗ್, ಮೊಹಮ್ಮದ್ ಇರ್ಷಾದ್, ಜೋ ಜೊಹೆರ್ಲಿಯಾನಾ, ಹೆರ್ನಾನ್ ಸಂತಾನಾ, ಪ್ರಗ್ಯಾನ್ ಗೊಗೊಯ್, ಇಮ್ರಾನ್ ಖಾನ್, ಲಾಲ್ದನ್ಮಾವಿಯಾ ರಾಲ್ಟೆ, ಮಥಿಯಾಸ್ ಕೊರೇರ್ ಮತ್ತು ಸುಹೇರ್ ವಡಕ್ಕೆಪೀಡಿಕಾ.
ಹೈದರಾಬಾದ್ ಎಫ್‌ಸಿ ಆಡುವ ಬಳಗ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್ ಕೀಪರ್), ಆಸಿಶ್ ರೈ, ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಹಿತೇಶ್ ಶರ್ಮಾ, ಜೋವೊ ವಿಕ್ಟರ್ (ನಾಯಕ), ನಿಖಿಲ್ ಪೂಜಾರಿ, ಎಡು ಗಾರ್ಸಿಯಾ, ರೋಹಿತ್ ದಾನು ಮತ್ತು ಬಾರ್ತಲೋಮಿವ್ ಓಗ್ಬೆಚೆ.