
ಇಂಡಿಯನ್ ಸೂಪರ್ ಲೀಗ್‌ನ 31ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿಯೂ ಬೆಂಗಳೂರು ತಂಡ ಗೆಲುವು ಕಾಣಲು ವಿಫಲವಾಗಿದ್ದು ಮತ್ತೊಮ್ಮೆ ನಿರಾಸೆ ಅನುಭವಿಸಿದೆ. ಆದರೆ ಸೋಲಿನಿಂದ ತಪ್ಪಿಸಿಕೊಂಡಿದ್ದು ಮಾತ್ರ ಈ ಪಂದ್ಯದಲ್ಲಿ ಬಿಎಫ್‌ಸಿ ಪಾಲಿಗೆ ಸಮಾಧಾನಕರ ಸಂಗತಿ. ಎರಡು ತಂಡಗಳು ಕೂಡ ತಲಾ ಮೂರು ಗೋಲು ಗಳಿಸುವ ಮೂಲಕ ಡ್ರಾ ಸಾಧಿಸಿದೆ.
ಪಂದ್ಯದ ಆರಂಭದಿಂದಲೂ ಎರಡೂ ತಂಡಗಳು ಕೂಡ ಜಿದ್ದಿಗೆ ಬಿದ್ದು ಪೈಪೋಟಿ ನಡೆಸಿದವು. ಇದರ ಪರಿಣಾಮವಾಗಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ತಲಾ ಎರಡು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಬಳಿಕ ದ್ವಿತೀಯಾರ್ಧದಲ್ಲಿ ಕೂಡ ಎರಡು ತಂಡಗಳು ಒಂದೊಂದು ಗೋಲು ಗಳಿಸಿದವು. ಹೀಗಾಗಿ ಪಂದ್ಯ 3-3 ಗೋಲುಗಳೊಂದಿಗೆ ಡ್ರಾಗೊಂಡಿದೆ.
ಪಂದ್ಯ ಆರಂಭವಾದ 13ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಎಟಿಕೆ ಮೋಹನ್ ಭಾಗನ್ ಪಂದ್ಯದಲ್ಲಿ ಆರಂಭಿಕ ಮೇಲುಗೈ ಸಾಧಿಸಿತು. ಸುಭಾಸಿಶ್ ಬೋಸ್ ಎಟಿಕೆ ಪರ ಪ್ರಥಮ ಗೋಲು ದಾಖಲಿಸಿದರು. ಅದಾದ ಬಳಿಕ 18ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿತ್ತು. ಅದಾದ ಬಳಿಕ ಪಂದ್ಯದ 26ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿ ಪರವಾಗಿ ದಾನೀಶ್ ಫಾರೂಕ್ ಎರಡನೇ ಗೋಲು ಬಾರಿಸಿದರು. ಈ ಮೂಲಕ ಬಿಎಫ್‌ಸಿ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.
ಆದರೆ ಈ ಮುನ್ನಡೆ ಬಿಎಫ್‌ಸಿ ಪಾಲಿಗೆ ಹೆಚ್ಚು ಹೊತ್ತು ಇರಲಿಲ್ಲ. ಎಟಿಕೆ ಮೋಹನ್ ಬಾಗನ್ ಪರವಾಗಿ ಹ್ಯೂಗೋ ಬೌಮಸ್ 38ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಪಂದ್ಯದಲ್ಲಿ ಮತ್ತೊಮ್ಮೆ ಸಮಬಲ ಸಾಧಿಸುವಲ್ಲಿ ಮೋಹನ್ ಬಾಗನ್ ಯಶಸ್ವಿಯಾಯಿತು. ಈ ಮೂಲಕ ಮೊದಲಾರ್ಧದಲ್ಲಿ ಬೆಂಗಳೂರು ಎಫ್‌ಸಿ ತಂಡ ಹಾಗೂ ಮೋಹನ್ ಬಾಗನ್ ತಂಡಗಳು 2-2 ಅಂತರದಿಂದ ಸಮಬಲದ ಪ್ರದರ್ಶನ ನೀಡಿದವು.
ನಂತರ ದ್ವಿತೀಯಾರ್ಧದಲ್ಲಿ ಮೋಹನ್ ಬಾಗನ್ ಮತ್ತೊಂದು ಗೋಲು ಗಳಿಸಿತು. ರಾಯ್ ಕೃಷ್ಣ ಮೋಹನ್ ಬಾಗನ್ ಪರವಾಗಿ ಮೂರನೇ ಗೋಲು ದಾಖಲಿಸಿದರು. ಅದಾದ ಬಳಿಕ ಸಾಕಷ್ಟು ಪೈಪೋಟಿ ಎರಡು ತಮಡಗಳ ಮಧ್ಯೆ ಮುಂದುವರಿದಿತ್ತು. ಅಂತಿಮವಾಗಿ 72ನೇ ನಿಮಿಷದಲ್ಲಿ ಬಿಎಫ್‌ಸಿ ತಂಡ ಕೂಡ ಮೂರನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪಂದ್ಯದಲ್ಲಿ ಮತ್ತೊಮ್ಮೆ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಎರಡು ತಂಡಗಳು ಕೂಡ 3-3 ಗೋಲುಗಳ ಅಂತರದಿಂದ ಡ್ರಾಗೆ ತೃಪ್ತಿ ಪಟ್ಟುಕೊಂಡಿದೆ.
ಇನ್ನು ಈ ಡ್ರಾ ಫಲಿತಾಂಶದೊಂದಿಗೆ ಬಿಎಫ್‌ಸಿ ತಂಡ ಆಡಿದ 7 ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಲು ಮಾತ್ರವೇ ಸಫಲವಾಗಿದೆ. ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರೆ ಉಳಿದ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಮುಂದುವರಿದಿದೆ. ಇನ್ನು ಎಟಿಕೆ ಮೋಹನ್ ಬಾಗನ್ ತಂಡ ಆಡಿದ 6 ಪಂದ್ಯಗಳಲ್ಲಿ 2 ಗೆಲುವು 2 ಡ್ರಾ ಹಾಗೂ 2 ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಸತತ ಎರಡನೇ ದಿನ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಗಳು ಕೂಡ ಆಗದೆ ಮುಂದುವರಿದಿದೆ.
ಎಟಿಕೆ ಮೋಹನ್ ಬಾಗನ್ ಆಡುವ ಬಳಗ: ಅಮರಿಂದರ್ ಸಿಂಗ್ (ಗೋಲ್ ಕೀಪರ್), ತಿರಿ, ಅಶುತೋಷ್ ಮೆಹ್ತಾ, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ದೀಪಕ್ ತಂಗ್ರಿ, ಜೋನಿ ಕೌಕೊ, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ಲಿಸ್ಟನ್ ಕೊಲಾಕೊ ಮತ್ತು ರಾಯ್ ಕೃಷ್ಣ.
ಬೆಂಗಳೂರು ಎಫ್‌ಸಿ ಆಡುವ ಬಳಗ: ಗುರುಪ್ರೀತ್ ಸಂಧು (ಗೋಲ್ ಕೀಪರ್) (ನಾಯಕ), ರೋಶನ್ ನೊರೆಮ್, ಪರಾಗ್ ಶ್ರೀವಾಸ್, ಆಶಿಕ್ ಕುರುನಿಯನ್, ಅಜಿತ್ ಕಾಮರಾಜ್, ಅಲನ್ ಕೋಸ್ಟಾ, ಡ್ಯಾನಿಶ್ ಫಾರೂಕ್, ಬ್ರೂನೋ ಸಿಲ್ವಾ, ಜಯೇಶ್ ರಾಣೆ, ಪ್ರಿನ್ಸ್ ಇಬಾರಾ ಮತ್ತು ಕ್ಲಿಟನ್ ಸಿಲ್ವಾ.