
ಇಂಡಿಯನ್ ಸೂಪರ್ ಲೀಗ್‌ನ 38ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ 3-0 ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಕೇರಳ ಬ್ಲಾಸ್ಟರ್ಸ್ ಟಾಪ್ 4ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಆರಂಭದಿಂದಲೇ ಕೇರಳ ಬ್ಲಾಸ್ಟರ್ಸ್ ತಂಡ ಮೇಲುಗೈ ಸಾಧಿಸುತ್ತಾ ಮುನ್ನುಗ್ಗಿತ್ತು. ಅಂತಿಮ ಘಟ್ಟದವರೆಗೂ ಚೆನ್ನೈಯಿನ್ ಎಫ್‌ಸಿ ತಮಡಕ್ಕೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಈ ಮೂಲಕ ಭರ್ಜರಿಯಾದ ಗೆಲುವು ಸಾಧಿಸಿದೆ. ಕೇರಳ ಬ್ಲಾಸ್ಟರ್ಸ್ ಪರವಾಗಿ ಮೊದಲ ಗೋಲು 9ನೇ ನಿಮಿಷದಲ್ಲಿ ದಾಖಲಾಗಿತ್ತು. ಪೆರೇಯ್ರಾ ಡಯಾಜ್ ಕೃಎರಳ ಪರವಾಗಿ ಖಾತೆ ತೆರೆದರು. ನಂತರ ಪಂದ್ಯದ 38ನೇ ನಿಮಿಷದಲ್ಲಿ ಕೇರಳ ಪರವಾಗಿ ಎರಡನೇ ಗೋಲು ದಾಖಲಾಗಿತ್ತು. ಈ ಮೂಲಕ ಮೊದಲಾರ್ಧದಲ್ಲಿ ಎರಡನೇ ಗೋಲನ್ನು ಕೇರಳ ದಾಖಲಿಸಿ ಮೇಲುಗೈ ಸಾಧಿಸಿತ್ತು. ಅಬ್ದುಲ್ ಸಮದ್ ಕೆರಳ ಪರವಾಗಿ ಎರಡನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.
ದ್ವಿತಿಯಾರ್ಧದಲ್ಲಿಯೂ ಕೇರಳ ಬ್ಲಾಸ್ಟರ್ಸ್ ತಂಡ ಅದ್ಭುತವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಪಂದ್ಯದ 79ನೇ ನಿಮಿಷದಲ್ಲಿ ಮತ್ತೊಂದು ಗೋಲನ್ನು ದಾಖಲಿಸಿತ್ತು ಕೇರಳ. ಆಡ್ರಿಯನ್ ಲೂನಾ ಈ ಬಾರಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಪಂದ್ಯದಲ್ಲಿ ಕೇರಳ ಒಟ್ಟು ಮೂರು ಗೋಲನ್ನು ದಾಖಲಸಿತು. ಆದರೆ ಚೆನ್ನೈಯಿನ್ ಎಫ್‌ಸಿ ತಂಡ ಇಡೀ ಪಂದ್ಯದಲ್ಲಿ ಒಂದು ಗೋಲು ದಾಖಲಿಸಲೂ ಸಫಲವಾಗಲಿಲ್ಲ. ಈ ಮೂಲಕ ಕೇರಳಾ ಬ್ಲಾಸ್ಟರ್ಸ್ ತಂಡಕ್ಕೆ ಶರಣಾಗಿದೆ.
ಇನ್ನು ಈ ಪಂದ್ಯದಲ್ಲಿನ ಗೆಲುವಿನೊಂದಿಗೆ ಕೇರಳ ಬ್ಲಾಸ್ಟರ್ಸ್ ತಂಡ ಅಂಕಪಟ್ಟಿಯಲ್ಲಿ ಭಾರೀ ಏರಿಕೆ ಕಂಡಿದೆ. ಆಡಿದ 7 ಪಂದ್ಯಗಳಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ 3ನೇ ಗೆಲುವು ಸಾಧಿಸಿದೆ. 3 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರೆ 1 ಪಂದ್ಯದಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಕೆಬಿಎಫ್‌ಸಿ ತಂಡದ ಖಾತೆಯಲ್ಲಿ ಈಗ 12 ಅಂಕಗಳಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ ಟಾಪ್ 4 ತಂಡಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.
ಮತ್ತೊಂದೆಡೆ ಈ ಪಂದ್ಯದಲ್ಲಿ ಸೋಲು ಕಂಡ ಚೆನ್ನೈಯಿನ್ ಎಫ್‌ಸಿ ತಂಡ ಸೋಲಿನೊಂದಿಗೆ ಈ ಟೂರ್ನಿಯಲ್ಲಿ 2ನೇ ಸೋಲನ್ನು ಅನುಭವಿಸಿದೆ. ಆಡಿದ 7 ಪಂದ್ಯಗಳಲ್ಲಿ ಚೆನ್ನೈಯಿನ್ ಪಡೆ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಎರಡು ಪಂದ್ಯಗಳಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಮೂಲಕ 11 ಅಂಕಗಳನ್ನು ಖಾತೆಯಲ್ಲಿ ಹೊಂದಿದ್ದು 6ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೂ ಮುನ್ನ 4ನೇ ಸ್ಥಾನದಲ್ಲಿತ್ತು ಚೆನೈಯಿನ್ ತಂಡ.
ಕೇರಳ ಬ್ಲಾಸ್ಟರ್ಸ್ ಆಡುವ ಬಳಗ: ಪ್ರಭುಸುಖಾನ್ ಗಿಲ್ (ಗೋಲ್ ಕೀಪರ್), ರುವಾಹ್ ಹಾರ್ಮಿಪಮ್, ಲಾಲ್ತತಂಗ ಖೌಲ್ಹ್ರಿಂಗ್, ಹರ್ಮನ್ಜೋತ್ ಖಬ್ರಾ, ಜೆಸೆಲ್ ಕಾರ್ನೆರೊ (ನಾಯಕ), ಸಹಲ್ ಸಮದ್, ಆಡ್ರಿಯನ್ ಲೂನಾ, ಜೀಕ್ಸನ್ ಸಿಂಗ್, ಜಾರ್ಜ್ ಡಯಾಜ್, ಮಾರ್ಕೊ ಲೆಸ್ಕೋವಿಕ್ ಮತ್ತು ಅಲ್ವಾರೊ ವಾಜ್ಕ್ವೆಜ್
ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಗೋಲ್ ಕೀಪರ್), ರೇಗನ್ ಸಿಂಗ್, ಲಾಲಿಯನ್ಜುವಾಲಾ ಚಾಂಗ್ಟೆ, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ಮಿರ್ಲಾನ್ ಮುರ್ಜೇವ್, ಜೆರ್ರಿ ಲಾಲ್ರಿಂಜುಲಾ, ನಾರಾಯಣ್ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ಜರ್ಮನ್ಪ್ರೀತ್ ಸಿಂಗ್ ಮತ್ತು ವ್ಲಾಡಿಮಿರ್ ಕೋಮನ್