
ಇಂಡಿಯನ್ ಸೂಪರ್ ಲೀಗ್‌ನ 39ನೇ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತೀವ್ರ ಪೈಪೋಟಿಯ ಸೆಣೆಸಾಟ ನಡೆಸಿದ್ದು ಅಂತಿಮವಾಗಿ ಪಂದ್ಯ 1-1 ಅಂತರದಿಂದ ಡ್ರಾಗೊಂಡಿದೆ.
ಟೂರ್ನಿಯಲ್ಲಿ ಈವರೆಗೆ ಒಂದೂ ಗೆಲುವು ಸಾಧಿಸಲು ವಿಫಲವಾಗಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಮತ್ತೊಂದು ಪಂದ್ಯದಲ್ಲಿಯೂ ಗೆಲುವು ಪಡೆಯಲು ಸಾಧ್ಯವಾಗದೆ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಹೈದರಾಬಾದ್ ಎಫ್‌ಸಿ ವಿರುದ್ಧದ ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡ 20ನೇ ನಿಮಿಷದಲ್ಲಿ ಗೋಲನ್ನು ಗಳಿಸಿ ಖಾತೆಯನ್ನು ತೆರೆಯಿತು. ಈ ಮೂಲಕ ಪಂದ್ಯದಲ್ಲು ಮೇಲುಗೈ ಸಾಧಿಸಿತು. ತಂಡದ ಆಟಗಾರ ಅಮೀರ್ ಡೆರ್ವಿಸೆವಿಕ್ ಈ ಗೋಲು ದಾಖಲಿಸುವ ಮೂಲಕ ಮೇಲುಗೈಗೆ ಕಾರಣವಾದರು.
ಆದರೆ ಈಸ್ಟ್ ಬೆಂಗಾಲ್ ತಂಡ ಈ ಮುನ್ನಡೆ ಹೆಚ್ಚು ಹೊತ್ತು ಮುಂದುವರಿಯಲಿಲ್ಲ. ನಂತರ ಐದೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಕೂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಬಾರ್ತಲೋಮಿವ್ ಓಗ್ಬೆಚೆ ಹೈದರಾಬಾದ್ ತಂಡದ ಪರವಾಗಿ ಗೋಲು ದಾಖಲಿಸಿ ಸಮಬಲ ಸಾಧಿಸಲು ಕಾರಣವಾದರು. ಈ ಮೂಲಕ ಮೊದಲಾರ್ಧದಲ್ಲಿ ಎರಡು ತಮಡಗಳು ಕೂಡ 1-1 ಅಂತರದಿಂದ ಸಮಬಲವನ್ನು ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದರು ಕೂಡ ಯಾವ ತಂಡಕ್ಕೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.
ಇನ್ನು ಈ ಡ್ರಾ ಫಲಿತಾಂಶದ ಹೊರತಾಗಿಯೂ ಹೈದರಾಬಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಹೈದರಾಬಾದ್ ತಂಡ ಎರಡನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಮಹತ್ವದ ಮೇಲುಗೈ ಸಾಧಿಸಿದೆ. ಹೈದರಾಬಾದ್ ಎಫ್‌ಸಿ ತಂಡ ಈವರೆಗೆ 7 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಮೂರು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಆದರೆ ಈಸ್ಟ್ ಬೆಂಗಾಲ್ ತಂಡ ಟೂರ್ನಿಯಲ್ಲಿ ಗೆಲುವಿನ ರುಚಿಯನ್ನು ಕಾಣಲು ಇನ್ನೂ ವಿಫಲವಾಗಿದೆ. ಈ ಬಾರಿ ಇನ್ನೂ ಗೆಲುವು ಕಾಣದ ಏಕೈಕ ತಂಡವಾಗಿ ಈಸ್ಟ್ ಬೆಂಗಾಲ್ ತಮಡ ಮುಂದುವರಿದಿದೆ. ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿ ಮುಂದುವರಿದಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಒಟ್ಟು 8 ಪಂದ್ಯಗಳಲ್ಲಿ ಆಡಿದ್ದು ನಾಲ್ಕು ಪಂದ್ಯದಲ್ಲಿ ಸೋಲು ಹಾಗೂ ನಾಲ್ಕು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಕೇವಲ ನಾಲ್ಕು ಅಂಕಗಳೊಂದಿಗೆ ಕೊನೇಯ ಸ್ಥಾನ ಪಡೆದುಕೊಂಡಿದೆ.
ಎಸ್‌ಸಿ ಈಸ್ಟ್ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜ (ಗೋಲ್ ಕೀಪರ್/ ನಾಯಕ), ಟೊಮಿಸ್ಲಾವ್ ಮ್ರ್ಸೆಲಾ, ಜಾಯ್ನರ್ ಲೌರೆಂಕೊ, ಹೀರಾ ಮೊಂಡಲ್, ರಾಜು ಗಾಯಕ್ವಾಡ್, ಮೊಹಮ್ಮದ್ ರಫೀಕ್, ಸೌರವ್ ದಾಸ್, ಅಮೀರ್ ಡೆರ್ವಿಸೆವಿಕ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ಅಮರ್ಜಿತ್ ಕಿಯಾಮ್, ಡೇನಿಯಲ್ ಚುಕ್ವು.
ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್ ಕೀಪರ್), ಚಿಂಗ್ಲೆನ್ಸನಾ ಸಿಂಗ್, ಆಕಾಶ್ ಮಿಶ್ರಾ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಎಡು ಗಾರ್ಸಿಯಾ, ಹಿತೇಶ್ ಶರ್ಮಾ, ನಿಖಿಲ್ ಪೂಜಾರಿ, ಜೋಯಲ್ ಚಿಯಾನೀಸ್, ಬಾರ್ತಲೋಮಿವ್ ಓಗ್ಬೆಚೆ, ರೋಹಿತ್ ದಾನು.