
ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಡೆದ 75ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಹಾಗೂ ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಎಟಿಕೆ ಮೋಹನ್ ಬಾಗನ್ 3-1 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ನಿಗದಿತ ಅವಧಿ ಪೂರ್ಣಗೊಂಡಾಗ 1-1 ಅಂತರದಿಂದ ಎರಡು ತಂಡಗಳು ಕೂಡ ಸಮಬಲ ಸಾಧಿಸಿದ್ದರೂ ಹೆಚ್ಚುವರಿ ಅವಧಿಯನ್ನು ಅದ್ಭುತವಾಗಿ ಬಳಸಿಕೊಂಡ ಮೋಹನ್ ಬಾಗನ್ ತಂಡ ಈ ಅವಧಿಯಲ್ಲಿ ಎರಡು ಗೋಲು ಸಿಡಿಸಿತು. ತಂಡದ ಪರ ಕಿಯಾನ್ ಗಿರಿ ಹ್ಯಾಟ್ರಿಕ್ ಗೋಲು ಸಿಡಿಸಿ ಮಿಂಚಿದರು.
ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ಸಂಪೂರ್ಣ ವಿಫಲವಾಗಿತ್ತು. ದ್ವಿತಿಯಾರ್ಧದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಮೊದಲ ಗೊಳು ಗಳಿಸಲು ಯಶಸ್ವಿಯಾಯಿತು. ಪಂದ್ಯದ 56ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ತಂಡದ ಪರವಾಗಿ ಡ್ಯಾರೆನ್ ಸಿಡೊಯೆಲ್ ಈ ಗೋಲು ಸಿಡಿಸುವಲ್ಲಿ ಯಶಸ್ವಿಯಾದರು. ಅದಾದ ಬಳಿಕ ಮೋಹನ್ ಬಾಗನ್ ಕೂಡ ತನ್ನ ಪೈಪೋಟಿಯನ್ನು ತೀವ್ರಗೊಳಿಸಿತು. 64ನೇ ನಿಮಿಷದಲ್ಲಿ ಮೋಹನ್ ಬಾಗನ್ ಕೂಡ ಮೊದಲ ಗೋಲು ಗಳಿಸಿತ್ತು. ಕಿಯಾನ್ ಗಿರಿ ಈ ಪಂದ್ಯದಲ್ಲಿ ಮೋಹನ್ ಬಾಗನ್ ಪರವಾಗೊ ಮೊದಲ ಗೋಲು ಗಳಿಸಿದ್ದರು.
ಅದಾದ ಬಳಿಕ ಪೂರ್ಣಾವಧಿ ಮುಕ್ತಾಯವಾಗುವವರೆಗೆ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿತ್ತು. ಹೀಗಾಗಿ ಹೆಚ್ಚವರಿ ಅವಧಿನ್ನು ನೀಡಲಾಗಿತ್ತು. ಈ ಹೆಚ್ಚುವರಿ ಅವಧಿಯಲ್ಲಿ ಮೋಹನ್ ಬಾಗನ್ ಅಮೊಘವಾಗಿ ಪ್ರದರ್ಶನ ನೀಡಿತ್ತು. ಅದರಲ್ಲೂ ತಂಡದ ಪರ ಮೊದಲ ಗೋಲು ಸಿಡಿಸಿದ್ದ ಕಿಯಾನ್ ಗಿರಿ ಈ ಹೆಚ್ಚುವರಿ ಅವಧಿಯಲ್ಲಿ ಒಂದಲ್ಲ ಭರ್ಜರಿ ಎರಡು ಗೋಲು ಸಿಡಿಸಿದರು. ಈ ಪ್ರದರ್ಶನ ಭಾರತೀಯ ಫುಟ್ಬಾಲ್ ಪ್ರಿಯರನ್ನು ದಂಗಾಗುವಂತೆ ಮಾಡಿತು. ಮೋಹನ್ ಬಾಗನ್ 3-1 ಅಂತರದ ಗೆಲುವು ಸಾಧಿಸಿದೆ.
ಇನ್ನು ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ ಎಟಿಕೆ ಮೋಹನ್ ಬಾಗನ್ 4ನೇ ಸ್ಥಾನಕ್ಕೇರಲು ಯಶಸ್ವಿಯಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳ ಪೈಪೋಟಿಯಲ್ಲಿ ತಾನು ಕೂಡ ಭಾಗಿಯಾಗಿದೆ. 11 ಪಂದ್ಯಗಳನ್ನು ಆಡಿರುವ ಮೋಹನ್ ಬಾಗನ್ ಐದು ಗೆಲುವು ಸಾಧಿಸಿದ್ದರೆ ನಾಲ್ಕು ಡ್ರಾ ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು ಟಾಪ್ 4 ಸ್ಥಾನದಲ್ಲಿ ಮುಂದುವರಿಯಲು ಪ್ರಯತ್ನವನ್ನು ಮುಂದುವರಿಸಲಿದೆ. ಇನ್ನು ಎಸ್‌ಸಿ ಈಸ್ಟ್ ಬೆಂಗಾಲ್ ಈ ಪಂದ್ಯದಲ್ಲಿಯೂ ಆಘಾತಕಾರಿ ರೀತಿಯಲ್ಲಿ ಸೋಲು ಅನುಭವಿಸುವವ ಮೂಲಕ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿಯೇ ಮುಂದುವರಿದಿದೆ.
ಎಸ್‌ಸಿ ಈಸ್ಟ್ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜಾ (ಗೋಲ್ ಕೀಪರ್), ಆದಿಲ್ ಖಾನ್ (ನಾಯಕ), ಹೀರಾ ಮೊಂಡಲ್, ಅಂಕಿತ್ ಮುಖರ್ಜಿ, ಫ್ರಾಂಜೊ ಪ್ರೈಸ್, ಡ್ಯಾರೆನ್ ಸಿಡೊಯೆಲ್, ವಾಹೆಂಗ್‌ಬಾಮ್ ಲುವಾಂಗ್, ಸೌರವ್ ದಾಸ್, ಆಂಟೋನಿಯೊ ಪೆರೊಸೆವಿಕ್, ಮಾರ್ಸೆಲೊ ರಿಬೇರೊ, ನವೊರೆಮ್ ಸಿಂಗ್.
ಎಟಿಕೆ ಮೋಹನ್ ಬಾಗನ್: ಅಮರಿಂದರ್ ಸಿಂಗ್ (ಗೋಲ್ ಕೀಪರ್), ತಿರಿ, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ಪ್ರಬೀರ್ ದಾಸ್, ಕಾರ್ಲ್ ಮೆಕ್‌ಹಗ್, ದೀಪಕ್ ತಂಗ್ರಿ, ಡೇವಿಡ್ ವಿಲಿಯಮ್ಸ್, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ಲಿಸ್ಟನ್ ಕೊಲಾಕೊ.