
ಕೋಲ್ಕತ್ತಾ, ನವೆಂಬರ್ 9: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉತ್ತಮ ಆರಂಭ ಕಂಡಿರುವ ಎಟಿಕೆ ಹಾಗೂ ಜೇಮ್ಶೆಡ್ಪುರ ತಂಡಗಳು ಅದೇ ಹಾದಿಯಲ್ಲಿ ಮುನ್ನಡೆಯುವ ಗುರಿಯನ್ನಿರಿಸಿಕೊಂಡು ಶನಿವಾರ ಇಲ್ಲಿನ ವಿವೆಯಾಕಾನಂದಯುವ ಭಾರತಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಇತ್ತಂಡಗಳು ಈಗಾಗಲೇ ಅಗ್ರ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆದಿವೆ. ಏಳು ಅಂಕಗಳನ್ನು ಗಳಿಸಿರುವ ಟಾಟಾ ಪಡೆ ಮೂರನೇ ಸ್ಥಾನದಲ್ಲಿದ್ದರೆ, ಅಷ್ಟೇ ಪಂದ್ಯಗಳನ್ನಾಡಿರುವ ಎಟಿಕೆ ಆರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಎರಡು ಬಾರಿ ಚಾಂಪಿಯನ್ ಎಟಿಕೆ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ಚೇತರಿಸಿಕೊಂಡು ಉತ್ತಮ ಆರಂಭ ಕಂಡಿತು. ಐಎಸ್ ಎಟಿಕೆ ತಂಡದ ಉತ್ತಮ ಆರಂಭ ಇದಾಗಿದೆ. ಮೂರನೇ ಋತುವಿನಲ್ಲಿ ಆಡುತ್ತಿರುವ ಜೇಮ್ಶೆಡ್ಪುರ ಆಡಿರುವ ಮೂರು ಪಂದ್ಯಗಳಲ್ಲಿ ಜಯಗಳಿಸಿದೆ. ಇದು ಟಾಟಾ ಪಡೆಯ ಉತ್ತಮ ಆರಂಭವಾಗಿದೆ.
ಎಟಿಕೆ ತಂಡ ಇದುವರೆಗೂ ಎರಡು ಗೋಲುಗಳನ್ನು ನೀಡಿದ್ದು, ತಂಡದ ದಾಳಿ ವಿಭಾಗ ಉತ್ತಮವಾಗಿದೆ. ಮೂರು ಗೋಲುಗಳನ್ನು ಗಳಿಸಿ ಗಮನ ಸೆಳೆದಿರುವ ಡೇವಿಡ್ ವಿಲಿಯಮ್ಸ್ ತಂಡಕ್ಕೆ ಆಧಾರವೆನಿಸಿದ್ದಾರೆ. ರಾಯ್ ಕೃಷ್ಣ ಅವರ ನೆರವಿನಿಂದ ಎಟಿಕೆ ಏಳು ಗೋಲುಗಳನ್ನು ಗಳಿಸಿದ್ದು, ಇದು ಈ ಹಂತದಲ್ಲಿ ಕ್ಲಬ್ ನ ಇದುವರೆಗಿನ ದಾಖಲೆಯಾಗಿದೆ.

''ಈಗ ನಾವು ಪ್ರತಿಯೊಂದು ತಂಡವನ್ನು ಗೌರವಿಸುತ್ತೇವೆ. ನನ್ನ ಪ್ರಕಾರ ಜೇಮ್ಶೆಡ್ಪುರ ಉತ್ತಮ ತಂಡ, ಅದೇ ರೀತಿ ಉತ್ತಮ ತಂಡವನ್ನು ಹೊಂದಿದೆ. ನಾವು ಜೇಮ್ಶೆಡ್ಪುರ ತಂಡದ ವಿರುದ್ಧ ಎಚ್ಚರಿಕೆಯಿಂದ ಆಡಬೇಕು. ಆ ತಂಡದಲ್ಲಿ ಒಬ್ಬ ನಿರ್ಧಿಷ್ಟ ಆಟಗಾರನ ಮೇಲೆ ಗುರಿ ಇಡುವಂತಿಲ್ಲ, '' ಎಂದು ಎಟಿಕೆ ಕೋಚ್ ಅಂಟೋನಿಯೋ ಹಬ್ಬಾಸ್ ಹೇಳಿದ್ದಾರೆ.
ಯಾವುದೇ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ಎಟಿಕೆ ತಂಡದ ನೈಜ ರಣತಂತ್ರ. ಹೈದರಾಬಾದ್ ವಿರುದ್ಧ ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಗೆದ್ದಿತ್ತು. ನಂತರ ಚೆನ್ನೈಯಿನ್ ಎಫ್ ಸಿ ವಿರುದ್ಧ 1-0 ವಿರುದ್ಧ ಜಯ ಗಳಿಸಿತ್ತು,
''ಫುಟ್ಬಾಲ್ ಆಟವೆಂದರೆ ಆಕ್ರಮಣ ಮತ್ತು ಡಿಫೆಂಡ್ ಮಾಡುವುದು. ಚೆನ್ನೈಯಿನ್ ವಿರುದ್ಧದ ಪಂದ್ಯ ಎಟಿಕೆಯ ಉತ್ತಮ ಪಂದ್ಯವಾಗಿರಲಿಲ್ಲ, ಆದರೂ ನಾವು ಗೆದ್ದಿರುತ್ತೇವೆ. ಕೆಲವೊಮ್ಮೆ ಉತ್ತಮವಾಗಿ ಆಡದೆಯೂ ಜಯ ಗಳಿಸಲಾಗುತ್ತದೆ,'' ಎಂದು ಹಬ್ಬಾಸ್ ಹೇಳಿದ್ದಾರೆ.
ಜಾವೀರ್ ಹೆರ್ನಾಂಡೀಸ್ ಮತ್ತು ಮೈಕೆಲ್ ಸೂಸೈರಾಜ್ ಅವರು ದಾಳಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಎದುರಾಳಿ ತಂಡವು ಎಷ್ಟೇ ಬಲಿಷ್ಠವಾಗಿದ್ದರೂ, ಅದರ ರಕ್ಷಣಾ ಕೋಟೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿದ್ದಾರೆ. ಟಾಟಾ ಪಡೆಗೆ ಈ ಅಪಾಯದ ಅರಿವಿದೆ.
ಅಂಟೋನಿಯೋ ಇರಿಯೊಂಡೋ ಅವರ ತಂಡ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸುವ ಸಾಮರ್ಥ್ಯ ಹೊಂದಿದೆ. ಪಿಟಿ ಹಾಗೂ ಏಟೋರ್ ಮೊನ್ರೋಯ್ ಮಿಡ್ ಫೀಲ್ಡ್ ವಿಭಾಗದಲ್ಲಿ ಆಟವನ್ನು ನಿಯಂತ್ರಿಸಬಲ್ಲರು. ಸರ್ಗಿಯೋ ಕ್ಯಾಸ್ಟಲ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
''ಈಗ ನಾವು ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ಇದು ಅತ್ಯಂತ ಗಂಭೀರ ತಂಡ. ನಾನು ಗಂಭೀರದ ವಿಷಯ ತಿಳಿಸುತ್ತಿರುವೆನೆಂದರೆ, ಅವರ ತಂಡದಲ್ಲಿ ಉತ್ತಮ ಗುಣಮಟ್ಟದ ಆಟಗಾರರಿದ್ದಾರೆ. ಉತ್ತಮ ಗುಣಮಟ್ಟದ ಆಟವನ್ನೂ ಪ್ರದರ್ಶಿಸಬಲ್ಲರು, ಆಕ್ರಮಣಕಾರಿ ಆಟಕ್ಕೆ ತಂಡ ಹೆಸರಾಗಿದೆ,'' ಎಂದು ಜೇಮ್ಶೆಡ್ಪುರ ಕೋಚ್ ಹೇಳಿದ್ದಾರೆ. ಜೇಮ್ಶೆಡ್ಪುರ ತಂಡದ ವಿದೇಶಿ ಆಟಗಾರರು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದಾರೆ. ಅದೇ ರೀತಿ ಭಾರತದ ಆಟಗಾರರೂ ಮಿಂಚಿದ್ದಾರೆ. ಫಾರುಖ್ ಚೌಧರಿ ಹಾಗೂ ಅನಿಕೇತ್ ಜಾಧವ್ ಗೋಲು ಗಳಿಸಿ ತಂಡಕ್ಕೆ ಯಶಸು ತಂದಿದ್ದಾರೆ.