
ಕೋಲ್ಕತಾ, ನವೆಂಬರ್ 9: ಶನಿವಾರ ಇಲ್ಲಿನ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಎಫ್ ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ ಆತಿಥೇಯ ಎಟಿಕೆ ತಂಡ ಸಂಪೂರ್ಣ ಮೂರು ಅಂಕ ಗಳಿಸಿ ಪುಟಿದೇಳುವ ಗುರಿ ಹೊಂದಿದೆ.
ಪುಣೆ ಸಿಟಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಕೇವಲ 2 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪುಣೆ ತಂಡ, ಈ ಆಘಾತದಿಂದ ಹೊರ ಬರುವ ತವಕದಲ್ಲಿದೆ.
ಇನ್ನೂ ಜಯದ ಖಾತೆ ತೆರೆಯದ ಪ್ರದ್ಯುಮ್ನ ರೆಡ್ಡಿ ಅವರ ಪಡೆ ಮೂರು ಅಂಕ ಗಳಿಸುವ ಪ್ರಯತ್ನ ನಡೆಸಲಿದೆ. ಡಿಯಾಗೋ ಕಾರ್ಲೋಸ್ ಹಾಗೂ ಮಾರ್ಸೆಲಿನೋ ಅಮಾನತುಗೊಂಡಿರುವುದು ಪುಣೆ ತಂಡಕ್ಕೆ ಮತ್ತೊಂದು ನುಂಗಲಾರದ ತುತ್ತು. ಇದರ ಜತೆಯಲ್ಲಿ ಮಾರ್ಕೋ ಸ್ಟಾನ್ಕೋವಿಕ್ ಗಾಯಗೊಂಡಿರುವುದು ತಂಡದ ಬಲವನ್ನು ಕುಸಿಯುವಂತೆ ಮಾಡಿದೆ.
'ನಾವು ವಿದೇಶಿ ಆಟಗಾರರ ಸೇವೆಯಿಂದ ವಂಚಿತರಾಗುತ್ತಿದ್ದೇವೆ, ನಮ್ಮ ತಂಡದಲ್ಲಿ ಆರು ಗೋಲು ಗಳಿಸುವವರು ಆರು ವಿಭಾಗಗಳಲ್ಲಿ ಆಡುತ್ತಿದ್ದಾರೆ. ನಾಳೆಯ ಪಂದ್ಯದಲ್ಲಿ ಅವರಲ್ಲಿ ಮೂವರು ಹೊರಗುಳಿಯಲಿದ್ದಾರೆ. ನಮ್ಮ ತಂಡದ ಪರಿಸ್ಥಿತಿಗೆ ಸೂಕ್ತವಾಗಿಲ್ಲ, ಆದರೂ ಆತ್ಮವಿಶ್ವಾಸದ ಆಟವಾಡಲಿದ್ದೇವೆ' ಎಂದು ರೆಡ್ಡಿ ಹೇಳಿದ್ದಾರೆ.

'ಲೀಗ್‌ನ ಬೇರೆ ಹಂತಗಳಲ್ಲಿ ಆಗಿದ್ದರೆ ನಾವು ಒಂದು ಅಂಕಕ್ಕೆ ತೃಪ್ತಿಪಡುತ್ತಿದ್ದೆವು. ಆದರೆ ಈಗ ನಾವಿರುವ ಸ್ಥಿತಿಯನ್ನು ಗಮನಿಸಿದಾಗ ಮೂರು ಅಂಕಗಳ ಅಗತ್ಯವಿದೆ. ಧನಾತ್ಮಕ ಆಟವಾಡಿ ಮೂರು ಅಂಕಗಳನ್ನು ಗಳಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಗಳಿಸುವ ಮೂರು ಅಂಕ ನಮ್ಮ ಮುನ್ನಡೆಗೆ ಪ್ರೇರಣೆ ನೀಡಲಿದೆ' ಎಂದು ಹೇಳಿದರು.
ಆದರೆ ಪುಣೆ ವಿರುದ್ಧದ ಪಂದ್ಯ ಅಷ್ಟು ಸಲಭವಾದುದಲ್ಲ ಎಂದು ಎಟಿಕೆ ಕೋಚ್ ಸ್ಟೀವ್ ಕೊಪ್ಪೆಲ್ ತಂಡವನ್ನು ಎಚ್ಚರಿಸಿದ್ದಾರೆ.
'ಮಾರ್ಸೆಲಿನೋ ಹಾಗೂ ಡಿಯಾಗೋ ಇಬ್ಬರೂ ಅತ್ಯಂತ ಅಪಾಯಕಾರಿ ಆಟಗಾರರು. ಆದರೆ ಅವರ ಲಭ್ಯತೆ ಇಲ್ಲ. ಅವರು ಇದ್ದರೂ ನಾವು ಪಂದ್ಯದಲ್ಲಿ ಕಠಿಣ ಹೋರಾಟ ನೀಡುವೆವು. ನಮಗೆ ಜಯದ ಅಗತ್ಯವಿದೆ. ಯಾರೂ ನಮಗೆ ಜಯವನ್ನು ತಂದುಕೊಡುವುದಿಲ್ಲ, ನಮ್ಮ ಪ್ರಯತ್ನದಲ್ಲೇ ಜಯ ಗಳಿಸಬೇಕು. ನಾವು ನಮಗಾಗಿ ಗೆಲ್ಲಬೇಕಾಗಿದೆ' ಎಂದು ಕೊಪ್ಪೆಲ್ ಹೇಳಿದರು.
ಸ್ನಾಯು ಹರಿದ ಕಾರಣ ಗಾಯಗೊಂಡಿರುವ ಕಲು ಅಚೆ ಕ್ರಿಸ್ಮಸ್ ಕೂಡ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಆರು ಪಂದ್ಯಗಳಲ್ಲಿ ಎರಡು ಜಯ ಕಂಡಿರುವ ಎಟಿಕೆ ತಂಡ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಕೋಲ್ಕತಾ ಗಳಿಸಿರುವ ಎಲ್ಲ ಗೋಲುಗಳು ಪ್ರಥಮಾರ್ಧದಲ್ಲಿ ದಾಖಲಾಗಿದ್ದವು. ರೆಡ್ಡಿ ಪಡೆ ಡಿಫೆನ್ಸ್ ವಿಭಾಗದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಪುಣೆ ತಂಡ ಒಂಬತ್ತು ಗೋಲುಗಳನ್ನು ಗಳಿಸಲು ಅವಕಾಶ ನೀಡಿದೆ. ಮ್ಯಾಟ್ ಮಿಲ್ಸ್ ಹಾಗೂ ಗುರ್ಜೀತ್ ಸಿಂಗ್ ಅತ್ಯಂತ ಎಚ್ಚರಿಕೆಯಿಂದ ಆಡಬೇಕಾಗಿದೆ.
ಚೆನ್ನೆ ವಿರುದ್ಧದ ಪಂದ್ಯದಲ್ಲಿ ಪುಣೆ ತಂಡ ಆರಂಭದಲ್ಲಿ ಗೋಲು ಗಳಿಸಿದರೂ ನಂತರ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಿ ಪಂದ್ಯದಲ್ಲಿ ಸೋಲನುಭವಿಸಿತ್ತು. ದ್ವಿತಿಯಾರ್ಧದಲ್ಲಿ ಎಟಿಕೆ ತಂಡ ಮಿಂಚಿನ ಆಟ ಪ್ರದರ್ಶಿಸುತ್ತದೆ. ಇದರಿಂದಾಗಿ ಪುಣೆಯ ಆಟಗಾರರ ನಿಜವಾದ ಶಕ್ತಿ ಇಲ್ಲಿ ಪ್ರದರ್ಶನಗೊಳ್ಳಲಿದೆ.
ಯುವ ಆಟಗಾರ ಕೋಮಲ್ ಥಟಾಲ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ತಂಡದ ಆರಂಭಿಕ ಮುನ್ನಡೆಗೆ ಕಾರಣರಾಗಿದ್ದರು. ಆದರೆ ವಿರಾಮದ ನಂತರ ಹಾಗೂ ಮೊದಲು ಗೋಲು ಗಳಿಸುವ ಮೂಲಕ ಬೆಂಗಳೂರು ಪಂದ್ಯ ಗೆದ್ದುಕೊಂಡಿತ್ತು. ಸ್ಟಾರ್ ಸ್ಟ್ರೈಕರ್ ಅನುಪಸ್ಥಿತಿಯಲ್ಲಿ ಪುಣೆ ತಂಡ ತನ್ನ ನಿಜವಾದ ಹೋರಾಟ ನೀಡಬೇಕಾದರೆ. ಎಟಿಕೆ ತಂಡ ಈ ಅವಕಾಶವನ್ನು ಸದುಪಯೋಪಡಿಸಿಕೊಂಡು ಗೆಲ್ಲುವ ಹಂಬಲದಲ್ಲಿದೆ.