ಇಂಡಿಯನ್ ಸೂಪರ್ ಲೀಗ್ 2019: ನಾರ್ತ್‌ಈಸ್ಟ್‌ನಲ್ಲಿ ಬೆಂಗಳೂರೇ ಬೆಸ್ಟ್

ಗುವಾಹಟಿ, ಡಿಸೆಂಬರ್ 18: ನಾಯಕ ಸುನಿಲ್ ಛೆಟ್ರಿ 68ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಹಾಗೂ ಆಲ್ಬರ್ಟ್ ಸರ್ರಾನ್ ಪೊಲೊ (81 ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನಕ್ಕೇರಿತು.
ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ಮನೆಯಂಗಣದಲ್ಲಿ ಸತತ ಎರಡನೇ ಸೋಲು ಅನುಭವಿಸಿತು. ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೋಲು ಅನುಭವಿಸಿ ಆತಂಕಕ್ಕೆ ಒಳಗಾಗಿದ್ದ ಬೆಂಗಳೂರು ಎಫ್ ಸಿ ಈ ಜಯದೊಂದಿಗೆ ಮತ್ತೆ ಲಯ ಕಂಡುಕೊಂಡು ಚಾಂಪಿಯನ್ ನಡೆ ಇಟ್ಟಿತು. ಮುಂಬೈ ಸಿಟಿ ಎಫ್ ಸಿ ವಿರುದ್ಧವೂ ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದ್ದರು.
ಒಂಬತ್ತನೇ ಪಂದ್ಯವನ್ನಾಡಿದ ಬೆಂಗಳೂರು ಒಟ್ಟು 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿತು.
ಗೋಲಿಲ್ಲದ ಪ್ರಥಮಾರ್ಧ
ಮೊದಲಾರ್ಧ ಗೋಲಿಲ್ಲದಿದ್ದರೂ ಸಾಕಷ್ಟು ಆಕ್ರಮಣಕಾರಿಯಾಗಿತ್ತು. ಬೆಂಗಳೂರು ಆರಂಭದಲ್ಲಿ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರೂ ನಾರ್ತ್ ಈಸ್ಟ್ ಗೋಲು ಗಳಿಕೆಗೆ ಯಾವುದೇ ಅವಕಾಶ ನೀಡಲಿಲ್ಲ. ಇತ್ತಂಡಗಳು ಗೋಲು ಗಳಿಸುವತ್ತ ಹೆಚ್ಚಿನ ಗುರಿ ಹೊಂದಿದ್ದರೂ ಗೋಲ್ ಕೀಪರ್ ಗಳ ಕೈ ಚಳಕ ಉತ್ತಮವಾಗಿತ್ತು. ಬೆಂಗಳೂರು ಪರ ಆಶಿಕ್ ಕುರುನಿಯನ್ ಉತ್ತಮ ಪಾಸನ್ನು ಉದಾಂತ್ ಸಿಂಗ್ ಗೆ ನೀಡಿದರೂ
ಮುಕ್ತ ಅವಕಾಶವನ್ನು ಸಿಂಗ್ ಕೈ ಚೆಲ್ಲಿದರು.

ಜಯದ ಹಂಬಲದಲ್ಲಿ ಇತ್ತಂಡಗಳು
ಇಂಡಿಯನ್ ಸೂಪರ್ ಲೀಗ್ ನ 40ನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ತಂಡವು ಬೆಂಗಳೂರು ಎಫ್ ಸಿ ಗೆ ಆತಿಥ್ಯ ನೀಡಿತು. ಇತ್ತಂಡಗಳು ತಾವು ಆಡಿರುವ ಹಿಂದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿ ಈ ಪಂದ್ಯಕ್ಕೆ ಸಜ್ಜಾದವು. ಐದನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಹಾಗೂ ಮೂರನೇ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕೆ ಇಲ್ಲಿ ಜಯ ಅನಿವಾರ್ಯವಾಗಿದೆ. ಆತಿಥೇಯ ತಂಡ ಜಯದ ಲಯ ಕಂಡುಕೊಳ್ಳುವಲ್ಲಿ ಕಠಿಣ ಶ್ರಮ ಪಡುತ್ತಿದೆ, ಮೂರು ಪಂದ್ಯಗಳಲ್ಲಿ ಈ ಯತ್ನ ನಡೆದಿದೆ. ಪ್ರಮುಖ ಆಟಗಾರ ಅಸ್ಯಾಮೋ ಗ್ಯಾನ್ ಇನ್ನೂ ಗಾಯದಿಂದ ಚೇತರಿಸಿಕೊಳ್ಳದಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇತರ ಅನುಭವಿ ಆಟಗಾರರು ತಮ್ಮ ಜವಾಬ್ದಾರಿಯ ಆಟ ಪ್ರದರ್ಶಿಸಬೇಕಾಗಿದೆ. ಫೆಡ್ರಿಕಾ ಗಲ್ಲೆಗೊ ಅವರು ತಂಡಕ್ಕೆ ಮರಳಿರುವುದು ನಾರ್ತ್ ಈಸ್ಟ್ ಗೆ ನೆಮ್ಮದಿಯ ಸಂಗತಿ. ಬಲಿಷ್ಠ ಬೆಂಗಳೂರು ವಿರುದ್ಧ ಯಶಸ್ಸು ಕಾಣಬೇಕಾದರೆ ತಮ್ಮ ನೈಜ ಪ್ರದರ್ಶನ ತೋರಬೇಕಾಗಿದೆ. ತಂಡ ಅದೇ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು.
ಇನ್ನೊಂದೆಡೆ ಬೆಂಗಳೂರು ತಂಡ ಕೊನೆಯ ಕ್ಷಣದಲ್ಲಿ ಮುಂಬೈ ಗೆ ಗೋಲು ಗಳಿಸುವ ಅವಕಾಶ ಕಲ್ಪಿಸಿ ಋತುವಿನ ಮೊದಲ ಸೋಲಿನ ಆಘಾತ ಅನುಭವಿಸಿ ಗುವಾಹಾಟಿಗೆ ಆಗಮಿಸಿತ್ತು. ಬೆಂಗಳೂರು ತನ್ನ ಮನೆಯಂಗಣದಲ್ಲಿ ಹಾಲಿ ಚಾಂಪಿಯನ್ನರಂತೆ ಆಡಲಿಲ್ಲ. ಗಳಿಸಿರುವ ಎರಡು ಗೋಲುಗಳಲ್ಲಿ ಒಂದು ಉಡುಗರೆ ಗೋಲಾಗಿತ್ತು. ಆದ್ದರಿಂದ ನಾರ್ತ್ ಈಸ್ಟ್ ತಂಡ ಸಮಯ, ಸಂದರ್ಭ ಅರಿತು ಆಡಿದರೆ ಬಲಿಷ್ಠ ಬೆಂಗಳೂರನ್ನು ಹಿಮ್ಮೆಟ್ಟಬಹುದು. ಬೆಂಗಳೂರಿನ ಡಿಫೆನ್ಸ್ ವಿಭಾಗ ಅಲುಗಾಡುತ್ತಿದ್ದು, ಹಿಂದಿನ ಪಂದ್ಯದಲ್ಲಿ ಮೂರು ಗೋಲು ನೀಡಿದೆ. ಆದ್ದರಿಂದ ಈ ದೌರ್ಬಲ್ಯ ಆತಿಥೇಯರಿಗೆ ಅನುಕೂಲವಾಗಬಹುದು. ಆದರೆ ಹಿಂದಿನ ಪಂದ್ಯದಿಂದ ಪಾಠ ಕಲಿತಿರುವ ಬೆಂಗಳೂರು ಪುಟಿದೇಳುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications