
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಮೂಲದ ಫುಟ್ಬಾಲ್ ಕ್ಲಬ್ ಬೆಂಗಳೂರು ಎಫ್‌ಸಿ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದೆ. ಇಂದು ನಡೆದ ಈ ಬಾರಿಯ ಆವೃತ್ತಿಯ ಸೆಮಿಫೈನಲ್ ಪಂದ್ಯದ ಮೊದಲ ಹಂತದಲ್ಲಿ ಮುಂಬೈ ಸಿಟಿ ತಂಡದ ವಿರುದ್ಧ ಸೆಣೆಸಾಡಿದ ಬೆಂಗಳೂರು ಎಫ್‌ಸಿ ಭರ್ಜರಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದೆ. ಈ ಮೂಲಕ ಚಾಂಪಿಯನ್ ಪಟ್ಟಕ್ಕೇರಲು ಮತ್ತಷ್ಟು ಸನಿಹಕ್ಕೆ ತಲುಪಿದೆ.
ಈ ಪಂದ್ಯದಲ್ಲಿಯೂ ಬೆಂಗಳೂರು ಎಫ್‌ಸಿ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿ ಮಿಂಚಿದ್ದು ಸುನಿಲ್ ಛೇಟ್ರಿ!. ಸಾಕಷ್ಟು ಜಿದ್ದಾಇದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಎರಡು ತಮಡಗಳು ಕೂಡ ಸಮಾನ ಪೈಪೋಟಿ ನೀಡಿದ್ದಾಗ ಬಿಎಫ್‌ಸಿ ತಂಡದ ಮೇಲುಗೈಗೆ ಕಾರಣವಾಗಿದ್ದು ಛೇಟ್ರಿ. 78ನೇ ನಿಮಿಷದಲ್ಲಿ ಸಿಡಿಸಿದ ಗೋಲಿನಿಂದಾಗಿ 1-0 ಅಂತರದ ಮುನ್ನಡೆ ಪಡೆದ ಬಿಎಫ್‌ಸಿ ಬಳಿಕ ಈ ಅಂತರವನ್ನು ಅಂತಿಮ ಹಂತದವರೆಗೂ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಬಲಿಷ್ಠ ಮುಂಬೈ ಸಿಟಿ ವಿರುದ್ಧ ಅಮೋಘ ಗೆಲುವು ಸಾಧಿಸಿದೆ.
ಪಂದ್ಯ ಕೊನೆಯ ಹಂತವನ್ನು ತಲುಪುತ್ತಿದ್ದಾಗ ಕಾರ್ನರ್‌ನಿಂದ ಅದ್ಭುತ ವಾಗಿ ಬಂದ ಚೆಂಡನ್ನು ಛೇಟ್ರಿ ಹೆಡರ್ ಮೂಲಕ ಗೋಲು ಪೋಸ್ಟಿಗೆ ತಳ್ಳಿ ಮುಂಬೈ ಸಿಟಿ ತಂಡದ ಲೆಕ್ಕಾಚಾರವನ್ನು ತಲೆಕೆಳಕಾಗಿಸಿದರು.
ಇನ್ನು ಈ ಗೆಲುವಿನೊಂದಿಗೆ ಬೆಂಗಳುರು ಎಫ್‌ಸಿ ತಂಡ ಐಎಸ್‌ಎಲ್‌ನಲ್ಲಿ ಪ್ರಮುಖ ದಾಖಲೆಯೊಂದನ್ನು ಸರಿಗಟ್ಟಿದೆ. ಮುಂಬೈ ಸಿಟಿ ವಿರುದ್ಧ ಮೊದಲ ಲೆಗ್‌ನಲ್ಲಿ ಸಾಧಿಸಿ ಗೆಲುವು ಈ ಆವೃತ್ತಿಯಲ್ಲಿ ಬೆಂಗಳೂರು ಎಫ್‌ಸಿ ತಂಡದ ಸತತ 10ನೇ ಗೆಲುವಾಗಿದೆ. ಈ ಮೂಲಕ ಒಂದೇ ಆವೃತ್ತಿಯಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯ ಗೆದ್ದ ಉಂಬೈ ಸಿಟಿ ತಂಡದ ದಾಖಲೆಯನ್ನು ಬಿಎಫ್‌ಸಿ ಸರಿಗಟ್ಟಿದೆ.