
ಸೋಚಿ, ಜೂನ್ 18: ಬ್ರೆಜಿಲ್‌ನಲ್ಲಿ 2014ರ ಫೀಫಾ ವಿಶ್ವಕಪ್ ವೇಳೆ ಬಳಕೆಯಾಗಿದ್ದ ಅನೇಕ ಮೈದಾನಗಳು ದೂಳು ಹಿಡಿಯುತ್ತಿವೆ.
ಆದರೆ, ಬಳಕೆಯಾದ ಸಾಮಗ್ರಿಗಳನ್ನು ಹೇಗೆ ಸೃಜನಾತ್ಮಕವಾಗಿ ಬಳಸಿಕೊಂಡು ಮನಮೋಹಕ ಕಲಾಕೃತಿಗಳನ್ನು ಸೃಷ್ಟಿಸುವ ಮೂಲಕ ಅವುಗಳನ್ನು ಜೀವಂತವಾಗಿರಿಸಬಹುದು ಎಂಬುದಕ್ಕೆ ರಷ್ಯಾದ ಸೋಚಿಯ ಕ್ರೀಡಾಂಗಣ ಸಾಕ್ಷಿಯಾಗಿದೆ.
ಫೀಫಾ ವಿಶ್ವಕಪ್: ಬ್ರೆಜಿಲ್ vs ಸ್ವಿಟ್ಜರ್ ಲ್ಯಾಂಡ್ ಪಂದ್ಯ 1-1ರಿಂದ ಡ್ರಾ
2014ರ ಚಳಿಗಾಲದ ಒಲಿಂಪಿಕ್ಸ್ ನಡೆದಿದ್ದ ರಷ್ಯಾದಲ್ಲಿ ಬಹುತೇಕ ಮೂಲಸೌಕರ್ಯದ ಕಟ್ಟಡಗಳನ್ನು ಐಷಾರಾಮಿ ಹೋಟೆಲ್‌ಗಳು ಮತ್ತು ಕ್ಯಾಸಿನೊಗಳಾಗಿ ಪರಿವರ್ತನೆಯಾಗಿವೆ.
ಇವು ಯಾವಾಗಲೂ ತುಂಬಿಕೊಂಡಿರದೆ ಇದ್ದರೂ, ರಷ್ಯಾದ ಕುಟುಂಬಗಳಿಗೆ ಒಲಿಂಪಿಕ್ ಪಾರ್ಕ್ ಅದ್ಭುತ ಮನರಂಜನೆಯ ತಾಣವಾಗಿದೆ.
ಸ್ಕೀ ಟ್ರ್ಯಾಕ್‌ಗಳಿಂದ ಬೆಟ್ಟದ ಬೈಕ್ ಸವಾರಿಗಳವರೆಗೆ ಇಲ್ಲಿ ಅನೇಕ ತರಹದ ಮೋಜಿನ ಮತ್ತು ಸಾಹಸ ಕ್ರೀಡೆಗಳಿವೆ.
2014ರ ಚಳಿಗಾಲದ ಒಲಿಂಪಿಕ್ಸ್‌ನ ಮುಖ್ಯ ಸ್ಕೀ ಗ್ರಾಮವಾಗಿದ್ದ ರೋಸಾ ಖುಟೊರ್ ತನ್ನ ಆಹ್ಲಾದಕರ ಪ್ರೇಕ್ಷಣೀಯ ತಾಣಗಳು ಮತ್ತು ಮೌಂಟೇನ್ ಬೈಕ್ ಟ್ರಯಲ್‌ಗಳ ಕಾರಣ ಅಪಾರ ಪ್ರಮಾಣದ ಪ್ರವಾಸಿಗರನ್ನು ತನ್ನತ್ತ ಕರೆಸಿಕೊಳ್ಳುತ್ತಿದೆ.
ಕ್ರೀಡಾ ಗ್ರಾಮದ ಸೊಗಸನ್ನು ಅನುಭವಿಸುವುದಕ್ಕಾಗಿಯೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎನ್ನುತ್ತಾರೆ ಮಾಸ್ಕೊದ 23 ವರ್ಷದ ಎಂಜಿನಿಯರ್ ಪವೆಲ್ ನರ್ನೊವ್.

ಸುಂದರವಾದ ವೀಕ್ಷಣಾ ಸ್ಥಳಗಳು, ಜಲಪಾತಗಳು, ಕಣಿವೆಗ ಹೀಗೆ ಈ ಪ್ರದೇಶದಲ್ಲಿ ಎಲ್ಲವೂ ಇವೆ. ಈಗ ಬೇಸಿಗೆ ಕಾಲವಾಗಿರುವುದರಿಂದ ಇಲ್ಲಿ ಹಸಿರನ್ನು ಕಾಣಲು ಸಾಧ್ಯ. ಉಳಿದ ಸಮಯದಲ್ಲಿ ಇಡೀ ಪರ್ವತವನ್ನು ಹಿಮ ಆವರಿಸಿರುತ್ತದೆ.
ಈ ಬಗೆಯ ಪರಿಸರವನ್ನು ನಾವು ಸಂಭ್ರಮಿಸಲು ಬರುತ್ತೇವೆ. ಏಕೆಂದರೆ ಇದನ್ನು ಮಾಸ್ಕೊದಲ್ಲಿ ನೋಡಲು ಸಾಧ್ಯವಿಲ್ಲ. ಇದಲ್ಲದೆ, ಗ್ರಾಮದಲ್ಲಿ ಒಲಿಂಪಿಕ್ಸ್ ರಿಂಗ್‌ಗಳ ಜತೆಗೆ ಫೋಟೊಗಳನ್ನು ಕೂಡ ತೆಗೆಸಿಕೊಳ್ಳಬಹುದು ಎಂದು ಅವರು ವಿವರಿಸುತ್ತಾರೆ.
12 ಡಿಗ್ರಿ ಸೆಲ್ಸಿಯಸ್‌ನ ಮರಗಟ್ಟಿಸುವ ಚಳಿಯ ನಡುವೆಯೂ ಮಕ್ಕಳು ಐಸ್ ಕ್ರೀಂ ಕೊಡಿಸುವಂತೆ ಪೋಷಕರಿಗೆ ದುಂಬಾಲು ಬೀಳುತ್ತಿದ್ದರು. ಈ ವೇಳೆ ಜೋರು ಮಳೆ ಬರುತ್ತಿದ್ದ ಕಾರಣ ರೋಸಾ ಪೀಕ್‌ಗೆ ಸಂಪರ್ಕ ಕಲ್ಪಿಸುವ ಕೇಬಲ್ ಕಾರ್ ಸ್ಥಗಿತಗೊಂಡಿತ್ತು.
ಮಳೆ ನಿಲ್ಲುತ್ತಿದ್ದಂತೆಯೇ ಆ ಗ್ರಾಮ ಮತ್ತೆ ಎಂದಿನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತದೆ. ಇಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆದು ನಾಲ್ಕು ವರ್ಷ ಕಳೆದಿದ್ದರೂ ಅಲ್ಲಿ ಆ ಐದು ರಿಂಗ್‌ಗಳ ಉತ್ಸಾಹ ಇನ್ನೂ ಉಳಿದಿದೆ.
ಸ್ಕೀ ವಿಲೇಜ್‌ಗೆ ಬಸ್ ಮತ್ತು ರೈಲು ಸಂಪರ್ಕವಿದೆ. ರೈಲಿನಲ್ಲಿ ಕೆಲವು ಸುರಂಗಮಾರ್ಗಗಳನ್ನು ದಾಟಿದ ಬಳಿಕ ಕಾಶ್ಮೀರದಂತೆ ಕಾಣುವ ಬೆಟ್ಟ ಸಾಲು ಮತ್ತು ಕಣಿವೆಗಳು ಕಾಣಿಸುತ್ತವೆ.
ಕಪ್ಪು ಸಮುದ್ರ ಸುತ್ತುವರಿದಿರುವ ಕಾರಣ, ಸೋಚಿಯು ತುಸು ಬೆಚ್ಚಗಿದೆ. ಆದರೆ, ರಷ್ಯಾ ಬೇಸಿಗೆಯಲ್ಲಿಯೂ ಹಿಮಚ್ಛಾದಿತ ಬೆಟ್ಟಗಳು ಇನ್ನೊಂದು ಭಾಗವನ್ನು ಆವರಿಸಿರುತ್ತದೆ. ಸೋಚಿಯ ತುದಿಯಲ್ಲಿರುವ ಆಡ್ಲೆರ್‌ನ ಬಿಸಿಯನ್ನು ತಾಳಲಾರದವರಿಗೆ ಇದು ಅತ್ಯುತ್ತಮ ತಾಣ.
ರೋಸಾ ಖುಟೊರ್‌ನಲ್ಲಿನ ಅತಿ ವಿರಳ ಬಳಕೆಯಲ್ಲಿರುವ ಮಾನುಸ್ ಕ್ರೀಡಾಂಗಣದ ತಂತ್ರವನ್ನು ಬ್ರೆಜಿಲ್ ಕೂಡ ಅಳವಡಿಸಿಕೊಳ್ಳಬಹುದು. ರೋಸಾ ಖುಟೊರ್ ಸ್ಕೀ ರೆಸಾರ್ಟ್ ಉಪಯೋಗಕ್ಕೆ ಬರುತ್ತಿರುವ ಬಗೆ ಎಲ್ಲ ಪಂದ್ಯಗಳ ತಾಣಗಳಿಗೂ ಉತ್ತಮ ಉದಾಹರಣೆಯಾಗಿದೆ.
(ಮೈಖೇಲ್ ಪ್ರತಿನಿಧಿಯಾಗಿರುವ ಅರವಿಂದ ಎಸ್. ಅವರು ಫುಟ್ಬಾಲ್ ಹಬ್ಬದ ಕುರಿತು ಅಭಿಮಾನಿಗಳ ದೃಷ್ಟಿಕೋನದಲ್ಲಿ ರಷ್ಯಾದಿಂದ ವರದಿ ಮಾಡುತ್ತಿದ್ದಾರೆ)