2010ರ ವಿಶ್ವ ಚಾಂಪಿಯನ್ ಗೋಲ್‌ಕೀಪರ್‌ಗೆ ಹೃದಯಾಘಾತ, ಅಪಾಯದಿಂದ ಪಾರು

ಲಿಸ್ಬನ್, ಮೇ 02: ಫಿಫಾ 2010ರ ವಿಶ್ವಕಪ್ ಚಾಂಪಿಯನ್ಸ್ ಸ್ಪೇನ್ ತಂಡದ ಅನುಭವಿ ಗೋಲ್‌ಕೀಪರ್ ಇಕರ್ ಕ್ಯಾಸಿಲಾಸ್ ಬುಧವಾರ ಹೃದಯಾಘಾತಕ್ಕೀಡಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಹೊಂದಿರುವ 37 ವರ್ಷದ ಗೋಲ್‌ಕೀಪರ್ ಕ್ಯಾಸಿಲಾಸ್, ಸದ್ಯ ಪೋರ್ಚುಗಲ್‌ನಲ್ಲಿ ಕಳೆದ 4 ವರ್ಷಗಳಿಂದ ಪೋರ್ಟೊ ಕ್ಲಬ್ ತಂಡದ ಪರ ಆಡುತ್ತಿದ್ದಾರೆ. ಅಂತೆಯೇ ಬುಧವಾರ ಪೋರ್ಟೊ ತಂಡದ ಪರ ಅಭ್ಯಾಸ ನಡೆಸುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ.
ಬಳಿಕ ತುರ್ತು ಚಿಕಿತ್ಸೆ ಸಲುವಾಗಿ ಅವರನ್ನು ತಕ್ಷಣಕ್ಕೆ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಅವರ ಹೃದಯ ಬಡಿತದ ಸ್ಥಿತಿ ಸುಧಾರಿಸಿದ್ದು, ಅಪಾಯದಿಂದ ಹೊರಬಂದಿದ್ದಾರೆ ಎಂದು ಪೋರ್ಟೊ ಕ್ಲಬ್ ತಂಡದ ಮೂಲಗಳು ಹೇಳಿವೆ. ಕ್ಯಾಸಿಲಾಸ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ ಫೋಟೊ ಶೇರ್ ಮಾಡಿ ತಾವು ಅಪಾಯದಿಂದ ಪಾರಾಗಿರುವುದಾಗಿ ಸೂಚಿಸಿದ್ದಾರೆ.
2019-2020ರವರೆಗೆ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕ್ಯಾಸಿಲಾಸ್, 2015ರಲ್ಲಿ ಪೋರ್ಟೊ ತಂಡ ಸೇರಿಕೊಂಡಿದ್ದರು. ಇದಕ್ಕೂ ಮುನ್ನ ಸ್ಪೇನ್‌ನ ದೈತ್ಯ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸಿ ತಂಡಕ್ಕೆ 5 ಬಾರಿ ಸ್ಪ್ಯಾನಿಷ್ ಲಾ ಲೀಗ ಮತ್ತು 3 ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2010ರ ಫಿಫಾ ವಿಶ್ವಕಪ್‌ನಲ್ಲಿ ಸ್ಪೇನ್ ತಂಡಕ್ಕೆ ತಮ್ಮ ನಾಯಕತ್ವದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟಿದ್ದ ಕ್ಯಾಸಿಲಾಸ್, 2008 ಮತ್ತು 2012ರ ಸಾಲಿನ ಯೂರೊ ಕಪ್ ಟೂರ್ನಿಯಲ್ಲಿ ಸ್ಪೇನ್‌ಗೆ ಜಯ ತಂದುಕೊಟ್ಟ ಕೀರ್ತಿ ಹೊಂದಿದ್ದಾರೆ.
ಇನ್ನು ಕ್ಯಾಸಿಲಾಸ್ ಅವರ ಭರ್ಜರಿ ಪ್ರದರ್ಶನದ ನೆರವಿನಿಂದ ಪೋರ್ಟೊ ತಂಡ ಕೂಡ ಪೋರ್ಚುಗೀಸ್ ಪ್ರೀಮಿಯರ್ ಲೀಗದಲ್ಲಿ ಕೇವಲ 2 ಅಂಕಗಳ ಅಂತರದಲ್ಲಿ ಅಂಕಪಟ್ಟಿಯ 2ನೇ ಸ್ಥಾನದಲ್ಲಿದೆ. ಬೆಫಿಕಾ ಅಗ್ರಸ್ಥಾನ ಹೊಂದಿದೆ. ಆದರೆ, ಇದೀಗ ಕ್ಯಾಸಿಲಾಸ್ ಅವರ ಹೃದಯಾಘಾತದಿಂದಾಗಿ ತಂಡದ ಬಲ ಕಡಿಮೆಯಾಗಿದ್ದು, ಉಳಿದ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿ ಪ್ರಶಸ್ತಿ ಗೆಲ್ಲುವ ಕನಸು ಕೊಂಚ ಕಮರಿದಂತಾಗಿದೆ.
ಪ್ರಾಣಾಪಾಯದಿಂದ ಪಾರಾಗಿರುವ ಕ್ಯಾಸಿಲಾಸ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ಮುಂದುವರಿಯಬಹುದೇ ಎಂಬುದರ ಕುರಿತಾಗಿ ಈವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪೋರ್ಟೊ ತಂಡದ ಪರ ಇನ್ನುಳಿದ ಪಂದ್ಯಗಳಿಂದ ಕ್ಯಾಸಿಲಾಸ್ ಹೊರಗುಳಿಯುವುದು ಖಾತ್ರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications