
ಸೇಂಟ್ ಪೀಟರ್ಸ್‌ಬರ್ಗ್, ಜೂನ್ 25: ಫುಟ್ಬಾಲ್ ಸಂಭ್ರಮದಲ್ಲಿ ಮುಳುಗಿರುವ ಅಭಿಮಾನಿಗಳು ರಷ್ಯಾಕ್ಕೆ ಬರುವ ಮುನ್ನ ವೀಸಾ ಮತ್ತು ಭದ್ರತಾ ತಪಾಸಣೆಗಾಗಿ ತಾಸುಗಟ್ಟಲೆ ನಿಂತಿದ್ದರು. ಆದರೆ, ಅವರ 'ನಿಲ್ಲುವ' ಗೋಳು ಇನ್ನೂ ಮುಗಿದಿಲ್ಲ.
ಮಾಸ್ಕೊ ಹಾಗೂ ಸೇಂಟ್ ಪೀಟರ್ಸ್‌ಬರ್ಗ್‌ಗಳಲ್ಲಿನ ಫೀಫಾ ಫ್ಯಾನ್ ಪಾರ್ಕ್ ಕೇಂದ್ರಗಳಲ್ಲಿ ಆಹಾರ, ಪಾನೀಯ ಮತ್ತು ಶೌಚಾಲಯಕ್ಕಾಗಿ ಸುಮಾರು ಅರ್ಧ ಕಿಲೋಮೀಟರ್‌ವರೆಗೂ ಉದ್ದನೆಯ ಸರತಿ ಸಾಲು ಕಾಣುವುದು ಸಾಮಾನ್ಯವಾಗಿದೆ.
ಟಿಕೆಟ್ ಖರೀದಿಸಿ ಮೈದಾನದೊಳಗೆ ಹೋಗಿ ಪಂದ್ಯ ವೀಕ್ಷಿಸಲು ಎಲ್ಲ ಅಭಿಮಾನಿಗಳಿಗೂ ಸಾಧ್ಯವಾಗುವುದಿಲ್ಲ. ಕ್ರೀಡಾಂಗಣದ ಸಾಮರ್ಥ್ಯದಷ್ಟು ಜನರಿಗೆ ಮಾತ್ರ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಇನ್ನು ಕೆಲವರು ದುಬಾರಿ ದರವನ್ನು ತೆತ್ತು ಪಂದ್ಯ ವೀಕ್ಷಿಸಲಾರರು.

ಅಂತಹವರಿಗಾಗಿಯೇ ಪಂದ್ಯಗಳ ಆತಿಥ್ಯ ವಹಿಸಿಕೊಂಡಿರುವ ಮಾಸ್ಕೊ, ಸೇಂಟ್ ಪೀಟರ್ಸ್‌ಬರ್ಗ್, ಸರಾಂಸ್ಕ್, ಸಮರಾ, ವೋಲ್ಗೋಗ್ರಾಡ್, ಕಲಿನಿಂಗ್ರಾಡ್, ಕಜಾನ್, ನಿಜ್ನಿ ನೋವ್ಗೊರೊಡ್, ಯೆಕೆಟೆರಿನ್‌ಬರ್ಗ್ ಮತ್ತು ರೊಸ್ತೊವ್ ನಗರಗಳಲ್ಲಿ ಫೀಫಾ ಫ್ಯಾನ್ ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ.
ಈ ತಾಣಗಳಲ್ಲಿ ಬೃಹತ್ ಪರದೆಗಳನ್ನು ಅಳವಡಿಸಲಾಗಿದ್ದು, ಇಲ್ಲಿಗೆ ಉಚಿತ ಪ್ರವೇಶಾವಕಾಶ ನೀಡಲಾಗಿದೆ. ಪ್ರತಿ ಫ್ಯಾನ್ ಪಾರ್ಕ್‌ಗೂ ನಿತ್ಯ ಕನಿಷ್ಠ 10 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಆಹಾರ ಮತ್ತು ಬಿಯರ್‌ಗೆ ಬೇಡಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ರಷ್ಯಾದ ದೊಡ್ಡ ನಗರಗಳಲ್ಲಿನ ಫ್ಯಾನ್ ಪಾರ್ಕ್‌ಗಳಲ್ಲಿ ಅಭಿಮಾನಿಗಳಿಗಾಗಿ ನಿರ್ಮಿಸಿರುವ ಆಹಾರ ಪದಾರ್ಥಗಳ ಮಳಿಗೆ ಮತ್ತು ಶೌಚಾಲಯಗಳ ಸಂಖ್ಯೆ ತೀರಾ ಕಡಿಮೆ ಇದೆ.
ಅಷ್ಟೂ ಅಭಿಮಾನಿಗಳಿಗೆ ಇರುವುದು ಕೇವಲ 10-15 ಮಳಿಗೆಗಳು. ಅದರಲ್ಲಿಯೂ ಟೋಕನ್ ತೆಗೆದುಕೊಳ್ಳುವ ಕೌಂಟರ್‌ಗಳು ಇರುವುದು 2-5 ಮಾತ್ರ. ತಿನಿಸು ಅಥವಾ ಪಾನೀಯ ಖರೀದಿಸಲು ಹೋದರೆ ಸರದಿಯಲ್ಲಿ ಅರ್ಧ ಗಂಟೆ ಕಾಯುವ ಕಿರಿಕಿರಿ ಅನುಭವಿಸುವುದು ಅನಿವಾರ್ಯ. ಇನ್ನು ಶೌಚಾಲಯಕ್ಕೆಂದು ತೆರಳಿದರೆ ಫುಟ್ಬಾಲ್ ಪಂದ್ಯದ ಮಹತ್ವದ ಗಳಿಗೆಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ.
'ಇಷ್ಟೊಂದು ಪ್ರಮಾಣದ ಜನರು ಬರುತ್ತಾರೆ ಎನ್ನುವುದು ತಿಳಿದಿದ್ದರೂ ಅವರು ಹೆಚ್ಚು ಸೌಲಭ್ಯಗಳ ವ್ಯವಸ್ಥೆ ಏಕೆ ಮಾಡಲಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಕ್ರೀಡಾಂಗಣದಲ್ಲಿ ಏಳು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಿರುವ ಅಭಿಷೇಕ್ ಪಾಠಕ್.
ಅಲ್ಲದೆ, ನೀವು ಪಾನೀಯ ಖರೀದಿಗೆ ಹಣ ನೀಡಲು ಮೊದಲು ಸರದಿಯಲ್ಲಿ ನಿಲ್ಲಬೇಕು. ಬಳಿಕ ಅದನ್ನು ಪಡೆದುಕೊಳ್ಳಲು ಮತ್ತೊಂದು ಸರದಿಯಲ್ಲಿ ನಿಲ್ಲಬೇಕು. ಹೀಗೆ ಎರಡೆರಡು ಕೆಲಸ ಮಾಡಬೇಕು ಎಂದು ಅವರು ಅಸಮಾಧಾನ ವೀಕ್ಷಿಸಿದರು.
ಸಮರಾ ಮತ್ತು ಸರಾಂಸ್ಕ್ ನಂತಹ ಸಣ್ಣ ನಗರಗಳಲ್ಲಿ ಪಂದ್ಯ ವೀಕ್ಷಿಸಲು ಬರುವ ಗುಂಪು ಕಡಿಮೆ ಇರುವುದರಿಂದ ಅಷ್ಟೇನೂ ತೊಂದರೆಯಾಗುತ್ತಿಲ್ಲ.
ಅರ್ಜೆಂಟೀನಾ ಮತ್ತು ಕ್ರೊವೇಷಿಯಾ ನಡುವಣ ಪಂದ್ಯವನ್ನು ಸಮರಾದ ಫ್ಯಾನ್ ಫೆಸ್ಟ್‌ನಲ್ಲಿ ನೋಡಿದ್ದೆ. ಅಲ್ಲಿ ಹೆಚ್ಚು ಜನರು ಇಲ್ಲದ ಕಾರಣ ಅಷ್ಟೇನೂ ಕಷ್ಟದ ಅನುಭವ ಆಗಿರಲಿಲ್ಲ ಎನ್ನುತ್ತಾರೆ 23 ವರ್ಷದ ಪಾವೆಲ್ ನಾರ್ನೋವ್.
ಅಂದು ಆಹಾರ ಮಳಿಗೆ ಎದುರು ದೊಡ್ಡದಾದ ಸರದಿ ಇರಲಿಲ್ಲ. ಆದರೆ, ರಷ್ಯಾ ಪಂದ್ಯ ಇರುವಾಗ ಈ ಸನ್ನಿವೇಶ ವಿಭಿನ್ನವಾಗಿರುತ್ತದೆ ಎನಿಸುತ್ತದೆ. ಏಕೆಂದರೆ, ರಷ್ಯಾದ ಪ್ರತಿ ಅಭಿಮಾನಿಯೂ ಉರುಗ್ವೆ ವಿರುದ್ಧದ ಪಂದ್ಯವನ್ನು ಪ್ರತಿ ಫ್ಯಾನ್ ಪಾರ್ಕ್‌ನಲ್ಲಿ ವೀಕ್ಷಿಸುತ್ತಾರೆ ಎಂದು ಹೇಳಿದರು.
ಫ್ಯಾನ್ ಪಾರ್ಕ್‌ಗಳ ವಾತಾವರಣ ಅದ್ಭುತವಾಗಿರುವುದರಿಂದ ಇಲ್ಲಿ ತಾಸುಗಟ್ಟಲೆ ಸರದಿಯಲ್ಲಿ ನಿಲ್ಲುವುದಕ್ಕೆ ಹೆಚ್ಚಿನ ಅಭಿಮಾನಿಗಳು ಬೇಸರಪಟ್ಟುಕೊಳ್ಳುವುದಿಲ್ಲ.
ಫ್ಯಾನ್ ಫೆಸ್ಟ್‌ಗಳನ್ನು ತುಂಬಾ ಚೆನ್ನಾಗಿ ಆಯೋಜಿಸಲಾಗಿದೆ ಎನ್ನುತ್ತಾರೆ ಮಾಸ್ಕೊ ಫ್ಯಾನ್ ಪಾರ್ಕ್‌ಗೆ ಭೇಟಿ ನೀಡಿದ್ದ ಬೆಂಗಳೂರಿನಿಂದ ಬಂದ ಅಬೆ ಡೇನಿಯಲ್ ಅಬ್ರಹಾಂ.
ಹೆಚ್ಚಿನ ಪ್ರವಾಸಿಗರು ಫ್ಯಾನ್ ಪಾರ್ಕ್‌ನಲ್ಲಿ ಕ್ಷಣಗಳನ್ನು ಕಳೆಯಲು ಬಯಸುತ್ತಿದ್ದಾರೆ. ಇಲ್ಲಿ ದೊಡ್ಡ ಪರದೆಯ ವೀಕ್ಷಣಾ ಸೌಲಭ್ಯದ ಜತೆಗೆ, ಮಿನಿ ಫುಟ್ಬಾಲ್ ಗೇಮ್ಸ್, ಟೇಬಲ್ ಐಸ್ ಹಾಕಿ, ವಿಆರ್ ಗೇಮ್ಸ್ ಮತ್ತು ಗೋಲ್‌ಕೀಪರ್ ಚಾಲೆಂಜ್‌ನಂತಹ ಆಟಗಳನ್ನು ಆಡಬಹುದು.
(ಮೈಖೇಲ್ ಪ್ರತಿನಿಧಿಯಾದ ಅರವಿಂದ ಎಸ್. ಅವರು ರಷ್ಯಾದಲ್ಲಿದ್ದು, ಫುಟ್ಬಾಲ್ ಅಭಿಮಾನಿಯ ದೃಷ್ಟಿಕೋನದಿಂದ ಲೇಖನಗಳನ್ನು ಬರೆಯುತ್ತಿದ್ದಾರೆ).