ರಷ್ಯಾ ಟೂರ್ ಡೈರಿ: ಫೀಫಾ ವಿಶ್ವಕಪ್ ಕುರಿತು ಅಜ್ಜನ ಮಾತು ಕೇಳಿ ಅಚ್ಚರಿಯಾಯ್ತು!

ಮಾಸ್ಕೋ, ಜೂ. 15: ಮಿಕ್ಕಿ ಸ್ಟ್ಯಾನಿಸ್ಲಾವ್ ಎನ್ನುವ ಸುಮಾರು 60-70ರ ಹರೆಯದ ಸರ್ಬಿಯನ್ ಮುದುಕ ಬಹಳ ಖುಷಿಯಲ್ಲಿದ್ದರು. ಯಾಕೆಂದರೆ 2018ರ ಫೀಫಾ ವಿಶ್ವಕಪ್ ಗಾಗಿ ಬೆಲ್ಗ್ರೇಡ್ ನಿಂದ ಮಾಸ್ಕೋಗೆ ಪಯಣಿಸಲು ಅವರಿಗೆ ಕೇವಲ 3 ಗಂಟೆ ಹಿಡಿದಿತ್ತಂತೆ.
ಅದೇ ನಾಲ್ಕು ವರ್ಷಗಳಿಗೆ ಹಿಂದೆ ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದಿದ್ದ ಪ್ರತಿಷ್ಠಿತ ಫೀಫಾ ಫುಟ್ಬಾಲ್ ಪಂದ್ಯಾಟದಲ್ಲಿಗೆ ತೆರಳಲು ಇವರು ಬರೋಬ್ಬರಿ 22 ಗಂಟೆಗಳ ಕಾಲ ವಿಮಾನದಲ್ಲಿ ಕುಳಿತುಕೊಳ್ಳಬೇಕಾಗಿ ಬಂದಿತ್ತಂತೆ.
ಗಮ್ಮತ್ತೂಂದ್ರೆ ಸ್ಟ್ಯಾನಿಸ್ಲಾವ್ ಅವರು ಪ್ರಯಾಣ ವಿಚಾರವಾಗಿ ಈ ಬಾರಿ ಉಳಿಸಿಕೊಂಡಿದ್ದ ಅಷ್ಟೂ ಸಮಯ ಕ್ಯೂನಲ್ಲಿ ಸರಿಹೋಯ್ತು. ಮಾಸ್ಕೋದ ಲೂಜ್ನಿಕಿ ಸ್ಟೇಡಿಯಂನಲ್ಲಿ ರಷ್ಯಾ-ಸೌದಿ ಅರೆಬಿಯಾ ನಡುವಿನ ಆರಂಭಿಕ ಪಂದ್ಯದ ಟಿಕೇಟ್ ಕೊಳ್ಳುವುದಕ್ಕಾಗಿ ಕ್ಯೂನಿಂತು ಸ್ಟ್ಯಾನಿಸ್ಲಾವ್ ಬಹಳ ಸಮಯ ವ್ಯಯಿಸಬೇಕಾಯಿತು.

ಮಾಸ್ಕೋದಲ್ಲಿ ಎಲ್ಲೆಂದರಲ್ಲಿ ಪೆರು ಬೆಂಬಲಿಗರೇ ಕಾಣಿಸುತ್ತಿದ್ದರು. (ಚಿತ್ರ: ಅರವಿಂದ್ ಎಸ್)
ಇಷ್ಟಾದರೂ ಮಿಕ್ಕಿ ಅವರನ್ನು ಮಾತನಾಡಿಸಿದಾಗ ಅವರ ಪ್ರತಿಕ್ರಿಯೆ ಕೇಳಿ ನನಗೆ ಅಚ್ಚರಿಯಾಯ್ತು. 'ಇದು ವಿಶ್ವ ಕಪ್. ಇಲ್ಲಿ ಕಡಿಮೆ ಜನಸಂದಣಿಯನ್ನು ಅಪೇಕ್ಷಿಸಲಾದೀತೆ? ಅಷ್ಟಕ್ಕೂ ನನಗಂತೂ ಕ್ಯೂ ನಿಂತಿದ್ದಕ್ಕಾಗಿ ಕಿಂಚಿತ್ತೂ ಬೇಜಾರು ಅನ್ನಿಸಲಿಲ್ಲ' ಎಂದು ಮಿಕ್ಕಿ ಹೇಳಿದ್ದು ಕೇಳಿ ಈ ಇಳಿ ವಯಸ್ಸಿನಲ್ಲೂ ಅವರೊಳಗಿದ್ದ ಫುಟ್ಬಾಲ್ ಪ್ರೇಮ ಕಂಡು ಖುಷಿಯೆನಿಸಿತು.
ಮಿಕ್ಕಿ ಅವರು ಟಿಕೇಟ್ ಕೌಂಟರ್ ನಿಂದ ತೆರಳಿದ ಮೇಲೆ ಸುತ್ತಲೊಮ್ಮೆ ಕಣ್ಣಾಯಿಸಿದೆ. ಟಿಕೇಟ್ ಕೇಂದ್ರದಲ್ಲಿ ಶುರುಗೊಂಡ ಕ್ಯೂ ಹನುಮಂತನ ಬಾಲದ ಹಾಗೆ ಸುಮಾರು 1 ಕಿ.ಮೀ. ಉದ್ದಕ್ಕೆ ಬೆಳೆದು ಮಾಸ್ಕೋದ ಝಿಟ್ನಯಾ ಸ್ಟ್ರೀಟ್ ವರೆಗೂ ಬಂದಿತ್ತು.
ಅಲ್ಲಿ ಕಿಕ್ಕಿರಿದು ನೆರೆದಿದ್ದ ಕ್ರೀಡಾಭಿಮಾನಿಗಳಲ್ಲಿ ಹೆಚ್ಚಿನವರು ಲ್ಯಾಟೀನ್ ಅಮೇರಿಕನ್ನರು. ಮುಖ್ಯವಾಗಿ ಪೆರುವಿನಿಂದ ಬಹಳಷ್ಟು ಫುಟ್ಬಾಲ್ ಅಭಿಮಾನಿಗಳು ಬಂದಿದ್ದರು. ಪೆರು ರಾಷ್ಟ್ರೀಯ ತಂಡದ ನಾಯಕ ಪಾವೊಲೊ ಗೆರೆರೊ ಅವರ ಮೊದಲ (ಜೊತೆಗೆ ಬಹುಶಃ ಕೊನೆಯ) ವಿಶ್ವಕಪ್ ಫುಟ್ಬಾಲ್ ಪಂದ್ಯಾಟ ನೋಡುವುದಕ್ಕಾಗಿ ಅವರೆಲ್ಲಾ ಕಾತರರಾಗಿದ್ದುದು ಇದಕ್ಕೆ ಕಾರಣ.
ಅಂತೂ ಅಲ್ಲಿ ನೆರೆದಿದ್ದವರಲ್ಲಿನ ಫುಟ್ಬಾಲ್ ಪ್ರೇಮ ನನ್ನನ್ನು ಅನೇಕಸಾರಿ ಚಕಿತಗೊಳಿಸಿದ್ದು ಸುಳ್ಳಲ್ಲ. ಹೇಳಿ ಕೇಳಿ ಇದು ವಿಶ್ವಕಪ್ ಫುಟ್ಬಾಲ್ ಪಂದ್ಯಾಟ ನೋಡಿ!
(ನಮ್ಮ myKhel.com ಪ್ರತಿನಿಧಿ ಅರವಿಂದ್ ಎಸ್ ಅವರು ರಷ್ಯಾದಲ್ಲಿದ್ದು, ಫುಟ್ಬಾಲ್ ಅಭಿಮಾನಿಗಳ ದೃಷ್ಟಿಕೋನದಿಂದ ಲೇಖನಗಳನ್ನು ರಚಿಸುತ್ತಿದ್ದಾರೆ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications