ಫುಟ್ಬಾಲ್ ಲೋಕದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಎರಡನೇ ದಿನದ ಭಾರತದ ಪ್ರವಾಸ ಮುಂದುವರೆದಿದೆ. ಭಾನುವಾರ ಮೆಸ್ಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ತವರಿಗೆ ಆಗಮಿಸಿದರು. ಈ ವೇಳೆ ಮೆಸ್ಸಿ ಅವರಿಗೆ ಹೃದಯ ಸ್ಪರ್ಶಿ ಸ್ವಾಗತ ನೀಡಲಾಯಿತು. ವಾಂಖೆಡೆ ಅಂಗಳ ಮೆಸ್ಸಿ ನೋಡಲು ಅಭಿಮಾನಿಗಳು ತುಂಬಿದ್ದರು. ಅರ್ಜೆಂಟೀನಾ ತಂಡದ ದಿಗ್ಗಜ ಆಟಗಾರನನ್ನು ಕಂಡು ಅಭಿಮಾನಿಗಳು ಫುಲ್ ಖುಷ್.
GOAT Tour of India ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ರೊಡ್ರಿಗೋ ಡಿ ಪಾಲ್ ಮತ್ತು ಲೂಯಿಸ್ ಸುವಾರೆಜ್ ಮೆಸ್ಸಿ ಅವರಿಗೆ ಸಾಥ್ ನೀಡಿದರು. ಮೆಸ್ಸಿ ಅವರನ್ನು ನೋಡಲು ಯುವ ಆಟಗಾರರು ಸಹ ಕಾತುರರಾಗಿದ್ದರು. ಮೆಸ್ಸಿ ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಇವರ ಖುಷಿ ಮುಗಿಲು ಮುಟ್ಟಿತ್ತು. ಅಲ್ಲದೆ ಇದೇ ವೇಳೆ ಯುವ ಆಟಗಾರರೊಂದಿಗೆ ಮೆಸ್ಸಿ ಫೋಟೋ ತೆಗೆಸಿಕೊಂಡರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಸಹ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಜೆರ್ಸಿಯನ್ನು ಮೆಸ್ಸಿ ಅವರಿಗೆ ಉಡುಗೊರೆಯಾಗಿ ನೀಡಿದರು. ಇನ್ನು ಮೆಸ್ಸಿ ಸಹ ತೆಂಡೂಲ್ಕರ್ ಅವರಿಗೆ ಫುಟ್ಬಾಲ್ ಚೆಂಡನ್ನು ನೀಡಿ ಗೌರವಿಸಿದರು.
ಸಚಿನ್ ಹೇಳಿದ್ದೇನು?
ಕಾರ್ಯಕ್ರಮದಲ್ಲಿ ಹಾಜರಿದ್ದ ಸಚಿನ್ ತೆಂಡೂಲ್ಕರ್ ಆರಂಭದಲ್ಲಿ ಮರಾಠಿಯಲ್ಲಿ ಮಾತನಾಡಿದರು. ಈ ವೇಳೆ ಸಚಿನ್, ಅಭಿಮಾನಿಗಳಿಗೆ ಮೆಸ್ಸಿ ಅವರಿಗೆ ಹೃದಯ ಪೂರ್ವಕ ಸ್ವಾಗತ ನೀಡಿದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಇದೇ ಅಂಗಳದಲ್ಲಿ ನಾನು ಸ್ಮರಣೀಯ ಕ್ಷಣಗಳನ್ನು ಕಳೆದಿದ್ದೇನೆ. ಈ ನಗರವನ್ನು ಕನಸಿನ ನಗರ ಎಂದೇ ಕರೆಯುತ್ತಾರೆ. ನಾವು ಏಕದಿನ ವಿಶ್ವಕಪ್‌ನ್ನು ಇದೇ ಅಂಗಳದಲ್ಲಿ ಗೆದ್ದಿದ್ದೆವು. ಈ ಮೂವರನ್ನು ಈ ಮೈದಾನದಲ್ಲಿ ನೋಡುವುದು ಈ ನಗರವಾಸಿಗಳಿಗೆ ಹಾಗೂ ದೇಶವಾಸಿಗಳಿಗೆ ಸ್ಮರಣೀಯ ಕ್ಷಣ. ಲಿಯೋನೆಲ್ ಮೆಸ್ಸಿ ತಮ್ಮ ಕ್ಷೇತ್ರದಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. ನಿಮ್ಮಂತಹ ಸಾಧಕರ ಆಗಮನದಿಂದ ಭಾರತದಲ್ಲಿ ಫುಟ್ಬಾಲ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಸಚಿನ್ ತಿಳಿಸಿದರು.
ಮೆಸ್ಸಿ ಅವರು ಮುಂಬೈನಲ್ಲಿ ಅಭಿಮಾನಿಗಳತ್ತ ಕೈ ಬೀಸಿ ಸಂಭ್ರಮಿಸಿದರು. ಈ ವೇಳೆ ಮೈದಾನದಲ್ಲಿ ಭಾರತ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಸಹ ಉಪಸ್ಥಿತರಿದ್ದರು. ಛೆಟ್ರಿ ಅವರಿಗೂ ಮೆಸ್ಸಿ ಅರ್ಜೆಂಟೀನಾ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಈ ಸುಂದರ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹ ಉಪಸ್ಥಿತರಿದ್ದರು.