ಫುಟ್ಬಾಲ್ ನೆಪದಲ್ಲಿ ರಷ್ಯಾದೊಳಗೆ ಅರಳಿತು ಜಗತ್ತು! ಈ ವಿಡಿಯೋ ನೋಡಿ

ಬೆಂಗಳೂರು, ಜುಲೈ 7: ವಿಶ್ವಕಪ್ ಫುಟ್ಬಾಲ್ ಎಂದರೆ ಕೇವಲ ಒಂದು ಕ್ರೀಡಾಕೂಟವಲ್ಲ. ಒಲಿಂಪಿಕ್ಸ್‌ನಂತೆಯೇ ರೋಚಕತೆ, ಕುತೂಹಲ, ಸಂಭ್ರಮ ಸಡಗರಗಳನ್ನು ತನ್ನ ಜತೆಯಲ್ಲಿ ಕೊಂಡೊಯ್ಯುವ ಒಂದು ತಿಂಗಳ ಉತ್ಸವ.
ಗೆಲ್ಲುವ ಛಲ, ತುಡಿತ, ಸಂಭ್ರಮ, ಹಟಮಾರಿತನ, ಸಿಟ್ಟು, ದ್ವೇಷ, ತುಂಟತನ, ಕಳ್ಳಾಟ, ಮೋಸ, ನೋವು, ದುಃಖ, ಹತಾಶೆ, ಹೀಗೆ ಎಲ್ಲ ಭಾವಗಳನ್ನೂ ಒಳಗೊಳ್ಳುವ ವಿಶಿಷ್ಟ ಸಂಗಮವಿದು.
ಫುಟ್ಬಾಲ್ ಅಂಗಳದಲ್ಲಿನ ಆಟದ ರೋಚಕತೆ ನೀಡುವ ಖುಷಿಯಂತೆಯೇ ಅದರ ಅಭಿಮಾನಿಗಳ ಹುಚ್ಚುತನ, ಕ್ರೀಡಾ ಪ್ರೀತಿಯೂ ಗಮನ ಸೆಳೆಯುತ್ತದೆ.
ಅದರಲ್ಲಿಯೂ ಫುಟ್ಬಾಲ್ ಪಂದ್ಯ ಎಂದಲ್ಲಿ ಹಾಡು ಕುಣಿತದ ಮೋಜು ಇರಲೇಬೇಕು. ನಮ್ಮಲ್ಲಿ ಐಪಿಎಲ್ ಕ್ರಿಕೆಟ್ ತಂಡಗಳ ಪ್ರಚಾರಕ್ಕಾಗಿ ತಂಡಗಳು ತಮ್ಮದೇ ಗೀತೆ ರಚಿಸಿ ಹಾಡಿ ಕುಣಿಯುವಂತೆ, ತಂಡಗಳನ್ನು ಹುರಿದುಂಬಿಸಲು ಬಹುತೇಕ ತಂಡಗಳು ಸೊಗಸಾದ ಸಂಗೀತ ಮತ್ತು ಹಾಡು ಸಂಯೋಜಿಸಿ ನೀಡುತ್ತವೆ.
ಇನ್ನು ಫುಟ್ಬಾಲ್ ವಿಶ್ವಕಪ್‌ನ ಅಧಿಕೃತ ಮಾನ್ಯತೆ ಪಡೆದ ಹಾಡುಗಳೂ ಬಲು ಜನಪ್ರಿಯ. 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಶಕೀರಾ 'ವಕಾ ವಕಾ' ಹಾಡಿಗೆ ಸೊಂಟ ಬಳುಕಿಸಿದ್ದು ಇನ್ನೂ ಹಸಿರಾಗಿದೆ.
'ದಿ ಟೈಮ್ ಆಫ್ ಅವರ್ ಲೈವ್ಸ್', 'ಲೆಟ್ಸ್ ಗೆಟ್ ಟುಗೆದರ್ ನೌ', 'ದಿ ಕಪ್ ಆಫ್ ಲೈಫ್', ಹೀಗೆ ಫುಟ್ಬಾಲ್ ವಿಶ್ವಕಪ್ ಇತಿಹಾಸದತ್ತ ಕಣ್ಣುಹಾಯಿಸಿದರೆ ಸಾಕಷ್ಟು ಜನಪ್ರಿಯವಾದ ಅಧಿಕೃತ ಹಾಡುಗಳು ಸಿಗುತ್ತವೆ.
ಇವುಗಳಲ್ಲದೆ, ಫುಟ್ಬಾಲ್ ಅಭಿಮಾನಿಗಳು ಸಹ ತಮ್ಮದೇ ಶೈಲಿಯಲ್ಲಿ ಸಂಗೀತ ಹೊಸೆದು ಸಾಹಿತ್ಯ ರಚಿಸಿ ಹಾಡುವುದರ ಜತೆಗೆ ವಿಡಿಯೋಗಳನ್ನೂ ಮಾಡಿ ಹಂಚಿಕೊಳ್ಳುತ್ತಿದ್ದಾರೆ.
ಫುಟ್ಬಾಲ್ ಹಬ್ಬದ ಈ ವೇಳೆ ಬಹುತೇಕ ಎಲ್ಲ ಹಾಡುಗಳೂ ವೈರಲ್ ಆಗುತ್ತವೆ. ಅವುಗಳಲ್ಲಿ ಅದ್ಭುತ ರಾಗ ಸಂಯೋಜನೆ-ಸಾಹಿತ್ಯದ ಹಾಡುಗಳು ಹೆಚ್ಚು ಜನಪ್ರಿಯವಾಗುತ್ತವೆ.
ಈಗ ಫುಟ್ಬಾಲ್ ಅಭಿಮಾನಿಯೊಬ್ಬರು ಮಟ್ಟು ಹಾಕಿದ ಸಂಗೀತವೊಂದು ಫುಟ್ಬಾಲ್ ಪ್ರಿಯರ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ. ಅದರ ಲಯ, ವಾದ್ಯಗಳ ಬಳಕೆಗೆ ಎಲ್ಲರೂ ಮಾರು ಹೋಗುತ್ತಿದ್ದಾರೆ.
ರಷ್ಯಾದ ಸ್ವತಂತ್ರ ಚಿತ್ರ ನಿರ್ದೇಶಕ ಅಲೆಕ್ಸ್ ಸೊಲೊವೀವ್ ಅಭಿಮಾನಿಗಳ ಫುಟ್ಬಾಲ್ ಹುಚ್ಚುತನಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಆಕರ್ಷಕ ಕಿರುಚಿತ್ರವೊಂದನ್ನು ಸಂಯೋಜಿಸಿದ್ದಾರೆ.
ಈ ಸಂಗೀತಮಯ ಕಿರುಚಿತ್ರ ಈಗ ಫುಟ್ಬಾಲ್ ಉತ್ಸವ ನಡೆಯುತ್ತಿರುವ ರಷ್ಯಾದ ಮೂಲೆಮೂಲೆಗಳಲ್ಲಿಯೂ ಅನುರಣಿಸತೊಡಗಿದೆ. ಬೇರೆ ದೇಶಗಳ ಫುಟ್ಬಾಲ್ ಅಭಿಮಾನಿಗಳೂ ಸಂಗೀತಕ್ಕೆ ಮತ್ತೆ ಮತ್ತೆ ಕಿವಿಗೊಡತೊಡಗಿದ್ದಾರೆ.
ಅಲೆಕ್ಸ್ ಅವರು ತಮ್ಮಲ್ಲಿನ ನಿರ್ದೇಶಕನ ಸೂಕ್ಷ್ಮತೆಯನ್ನು ಬಳಸಿಕೊಂಡು ಮಾಸ್ಕೊದ ಬೀದಿಗಳಲ್ಲಿ, ಬಸ್, ರೈಲು, ರೆಸ್ಟೋರೆಂಟ್ ಹೀಗೆ ಫುಟ್ಬಾಲ್ ಅಭಿಮಾನಿಗಳು ಇರುವಲ್ಲಿ ಅವರು ಸಂಗೀತಮಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.
ಅಭಿಮಾನಿಗಳು ಸಂಗೀತದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಇದನ್ನು ತಮ್ಮ ಕಿರುಚಿತ್ರ ಎಂದು ಕರೆದುಕೊಂಡಿರುವ ಅಲೆಕ್ಸ್, ಪದಗಳಿಗಿಂತ ಮೂರು ನಿಮಿಷದ ದೃಶ್ಯದಲ್ಲಿಯೇ ಒಂದು ಸಂಭ್ರಮದ ವಿವಿಧ ಆಯಾಮಗಳನ್ನು ಕಟ್ಟಿಕೊಟ್ಟಿದ್ದಾರೆ.
ಜಗತ್ತನ್ನು ರಷ್ಯಾದೊಳಗೆ ಒಂದುಗೂಡಿಸುವಲ್ಲಿ ಫುಟ್ಬಾಲ್ ಹೇಗೆ ನೆರವಾಗಿದೆ ಎಂಬುದನ್ನು ದೃಶ್ಯಗಳಲ್ಲಿ ಅವರು ತೋರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications