
ಮಾಸ್ಕೋ, ಜುಲೈ 14: ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ತೃತೀಯ ಸ್ಥಾನಿಗರ ಆಯ್ಕೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೆಲ್ಜಿಯಂ 2-0 ಅಂತರದ ಗೆಲುವು ದಾಖಲಿಸಿದೆ. ಪಂದ್ಯದ ಪ್ರಥಮಾರ್ಧದಲ್ಲಿ ಮತ್ತು ದ್ವೀಯಾರ್ಧದಲ್ಲಿ ಸಿಡಿಸಿದ ಗೋಲ್ ನೆರವಿನಿಂದ ಬೆಲ್ಜಿಯಂ, ಇಂಗ್ಲೆಂಡ್ ತಂಡವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿತು.
ಪಂದ್ಯಾರಂಭದಲ್ಲೇ ಬೆಲ್ಜಿಯಂ ಗೋಲ್ ಖಾತೆ ತೆರೆಯಿತು. ಬೆಲ್ಜಿಯಂ ನ ಥಾಮಸ್ ಮೌನಿಯರ್ ಅವರು 4ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಪಂದ್ಯದ ಮುಕ್ತಾಯ ವೇಳೆ ಅಂದರೆ 82ನೇ ನಿಮಿಷದಲ್ಲಿ ಈಡನ್ ಹಜಾರ್ಡ್ ಅವರು ಮತ್ತೊಂದು ಗೋಲ್ ಬಾರಿಸಿ ಬೆಲ್ಜಿಯಂ ಗೆಲುವನ್ನು ಬರೆದರು.
ಪಂದ್ಯದ ಪ್ರಥಮಾರ್ಧದಲ್ಲಿ 2 ಮತ್ತು ದ್ವಿತೀಯಾರ್ಧದಲ್ಲಿ 3 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಇಂಗ್ಲೆಂಡ್ ನಿಂದ ಗೋಲ್ ದಾಖಲಾಗಲಿಲ್ಲ. ಇಂಗ್ಲೆಂಡ್ ಸಾಕಷ್ಟು ಸಾರಿ ಗೋಲ್ ಗಾಗಿ ಪ್ರಯತ್ನಿಸಿತು. ಹರಿಕೇನ್ ಅವರು 23 ನಿಮಿಷದಲ್ಲಿ ಗೋಲ್ ಗಾಗಿ ಮಾಡಿದ ಪ್ರಯತ್ನವೂ ವ್ಯರ್ಥವಾಯಿತು.
ಪಂದ್ಯದ ವೇಳೆ ಇಂಗ್ಲೆಂಡ್ ಪರ ಎರಡು ಬಾರಿ, ಬೆಲ್ಜಿಯಂ ಪರ ಒಂದು ಬಾರಿ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಇತ್ತಂಡಗಳು ಒಟ್ಟು ಆರು ಬಾರಿ ಆಟಗಾರನ್ನು ಬದಲಿಸಿಕೊಂಡವು.