ಬಹುನಿರೀಕ್ಷಿತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನಲ್ಲಿ ಆಗಸ್ಟ್ 3 ಗುರುವಾರದಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಏಷ್ಯಾದ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕೂಡ ಭಾಗವಹಿಸಲಿದ್ದು ಇದಕ್ಕಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಅಠಾರಿ-ವಾಘಾ ಗಡಿ ಮೂಲಕ ಪ್ರವೇಶ ಪಡೆದಿದೆ.
ಏಷ್ಯನ್ ಹಾಕಿ ಫೆಡರೇಶನ್ 2011ರಿಂದ ವಾರ್ಷಿಕವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿದೆ. ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ರೌಂಡ್-ರಾಬಿನ್ ಸ್ವರೂಪದಲ್ಲಿ ನಡೆಯಲಿದ್ದು ಏಷ್ಯಾದ ಅಗ್ರ ಆರು ತಂಡಗಳು ಇಲ್ಲಿ ಸೆಣೆಸಾಟ ನಡೆಸಲಿದೆ. ಭಾರತ, ಪಾಕಿಸ್ತಾನ, ಮಲೇಷ್ಯಾ, ದಕ್ಷಿಣ ಕೊರಿಯಾ, ಚೀನಾ ಮತ್ತು ಜಪಾನ್ ಈ ಟೂರ್ನಿಯಲ್ಲಿ ಭಾಗವಹಿಸುವ ಆರು ತಂಡಗಳಾಗಿದೆ.

ಈ ಟೂರ್ನಿ ಸಾಕಷ್ಟು ಕುತೂಹಲ ಮೂಡಿಸಿದ್ದು ಏಷ್ಯಾದ ಬಲಿಷ್ಠ ತಂಡಗಳ ನಡುವಿನ ಈ ಕಾದಾಟವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ.
ಇನ್ನು ಭಾರತಕ್ಕೆ ಪ್ರವೇಶಿಸಿದ ಬಳಿಕ ಪಾಕಿಸ್ತಾನದ ಹಾಕಿ ಕೋಚ್ ಮೊಹಮ್ಮದ್ ಸಕ್ಲೈನ್ ಪ್ರತಿಕ್ರಿಯೆ ನೀಡಿದ್ದಾರೆ. "ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ನಮ್ಮ ತಂಡವು ಚೆನ್ನೈಗೆ ಪ್ರಯಾಣಿಸುತ್ತಿದೆ. ಏಷ್ಯಾದ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದೆ. ಕ್ರೀಡೆಗಳ ಮೂಲಕ ನಮ್ಮ ಸಂಬಂಧವನ್ನು ಗಟ್ಟಿಯಾಗಿಸಲು ನಾವು ಆಶಿಸುತ್ತೇವೆ" ಎಂದಿದ್ದಾರೆ ಪಾಕ್ ಹಾಕಿ ತಂಡದ ಕೋಚ್.
"ಕ್ರೀಡೆ ಮತ್ತು ಚಲನಚಿತ್ರೋದ್ಯಮದ ಮೂಲಕ ಭಾರತದೊಂದಿಗೆ ನಮ್ಮ ಸಂಬಂಧ ಬಲಗೊಳ್ಳುತ್ತವೆ ಎಂದು ನಾನು ನಂಬುತ್ತೇನೆ. ಎರಡೂ ದೇಶಗಳ ಜನರು ವಿಶಾಲ ಹೃದಯವನ್ನು ಹೊಂದಿದ್ದಾರೆ ಮತ್ತು ತಮ್ಮ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ" ಎಂದು ಪಾಕಿಸ್ತಾನದ ಕೋಚ್ ಮೊಹಮ್ಮದ್ ಸಕ್ಲೈನ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ಭುಟ್ಟಾ "ನಮ್ಮ ತಂಡ ಏಷ್ಯನ್ ಚಾಂಪಿಯನ್‌ಶಿಪ್ ಟ್ರೋಫಿಯಲ್ಲಿ ಆಡಲಿದೆ. ಆಗಸ್ಟ್3ರಿಂದ 12ರವರೆಗೆ ಇದು ಆಯೋಜನೆಯಾಗಲಿದೆ. ಕ್ರೀಡೆ ಬಹಳ ಅದ್ಭುತವಾದ ಸಂಗತಿಯಾಗಿದ್ದು ಇದು ನಮ್ಮ ಸಂಬಂಧ ವೃದ್ಧಿಸಲು ಕಾರಣವಾಗಲಿದೆ" ಎಂದಿದ್ದಾರೆ.
ಗಮನಾರ್ಹ ಅಂಶವೆಂದರೆ ಭಾರತ ಮತ್ತು ಪಾಕಿಸ್ತಾನ ಈ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳು ಎನಿಸಿಕೊಂಡಿದೆ. ಪಾಕಿಸ್ತಾನ ಹಾಲಿ ತಂಡ 2012 ಮತ್ತು 2013 ರಲ್ಲಿ ಗೆಲುವು ಸಾಧಿಸಿದ್ದು 2018ರಲ್ಲಿ ಭಾರತದೊಂದಿಗೆ ಟ್ರೋಫಿಯನ್ನು ಹಂಚಿಕೊಂಡಿತು. ಇನ್ನು ಈ ಟೂರ್ನಿಯಲ್ಲಿ ಭಾರತವು 2011 ರಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೆ 2016 ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು. ಇನ್ನು 2018 ರಲ್ಲಿ ಪಾಕಿಸ್ತಾನದೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿತು. 2021ರ ಆವೃತ್ತಿಯಲ್ಲಿ, ದಕ್ಷಿಣ ಕೊರಿಯಾ ವಿಜೇತ ತಂಡವಾಗಿ ಹೊರಹೊಮ್ಮಿತ್ತು.