
ಮಸ್ಕತ್, ಅಕ್ಟೋಬರ್ 28 : ಹಾಲಿ ಚಾಂಪಿಯನ್ ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಅಂತಿಮ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಪುರುಷರ ಏಷ್ಯನ್ ಚಾಂಪಿಯನ್ ಟ್ರೋಫಿ ಯಾರು ಎತ್ತಲಿದ್ದಾರೆ ಎಂಬುದು ಇಂದು ನಿರ್ಧಾರವಾಗಲಿದೆ.
ಏಷ್ಯನ್ ಗೆಮ್ಸ್ ಚಿನ್ನದ ಪದಕ ವಿಜೇತ ಜಪಾನ್ ವಿರುದ್ಧ ಶನಿವಾರದಂದು ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ 3-2ರಲ್ಲಿ ಜಯ ದಾಖಲಿಸಿತು.
ಇದಕ್ಕೂ ಮುನ್ನ, ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಲೇಷಿಯಾ ಹಾಗೂ ಪಾಕಿಸ್ತಾನ 4-4ಡ್ರಾ ಸಾಧಿಸಿತ್ತು. ನಂತರ ನಡೆದ ಶೂಟೌಟ್ ನಲ್ಲಿ 3-1ರಲ್ಲಿ ಪಾಕಿಸ್ತಾನ ಗೆಲುವು ಪಡೆದುಕೊಂಡಿತು.
ಭಾನುವಾರದಂದು ರಾತ್ರಿ 10.40ಕ್ಕೆ (ಭಾರತೀಯ ಕಾಲಮಾನ) ಭಾರತ ಹಾಗೂ ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಜಪಾನ್ ಹಾಗೂ ಮಲೇಷಿಯಾ ತಂಡಗಳು ಮೂರನೇ ಸ್ಥಾನಕ್ಕಾಗಿ ಕಾದಾಡಲಿವೆ.