ಚೆನ್ನೈನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಪಿ ಹಾಕಿ ಪಂದ್ಯಕ್ಕೆ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಸಾಕ್ಷಿಯಾಗಿದ್ದಾರೆ. ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಬಹು ನಿರೀಕ್ಷಿತ ಈ ಪಂದ್ಯದಲ್ಲಿ ಅಶ್ವಿನ್ ಭಾಗಿಯಾಗಿದ್ದರು. ಪಂದ್ಯದ ಆರಂಭಕ್ಕೂ ಮುನ್ನ ಅಶ್ವಿನ್ ಎರಡು ತಂಡಗಳ ಆಟಗಾರರ ಕೈಕುಲುಕಿ ಶುಭಹಾರೈಸಿದರು.
ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದು ಭರ್ಜರಿ 4-0 ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಮಗಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಿಯ ಲೀಗ್ ಹಂತದ ಅಗ್ರ ತಂಡವಾಗಿ ಭಾರತ ಹೊರಹೊಮ್ಮಿದೆ. ಇತ್ತ ಪಾಕಿಸ್ಥಾನ ತಂಡ ಸೋಲಿನಿಂದಿಗೆ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.

ಭಾರತ ಹಾಗೂ ಪಾಕಿಸ್ತಾನ ಹಾಕಿಯಲ್ಲಿಯೂ ಬದ್ಧ ಎದುರಾಳಿಗಳು ಎನಿಸಿಕೊಂಡಿದೆ. 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಹಾಕಿಯಲ್ಲಿ ಪರಸ್ಪರ ಮುಖಾಮುಖಿಯಾದ ಈ ಎರಡು ತಂಡಗಳ ಪೈಕಿ ಒಟ್ಟಾರೆಯಾಗೊ ನೋಡಿದರೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಪಾಕಿಸ್ತಾನ ಭಾರತದ ವಿರುದ್ಧ 82 ಪಂದ್ಯಗಳನ್ನು ಗೆದ್ದಿದ್ದರೆ ಭಾರತದ 64 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 32 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತವು ಪಾಕಿಸ್ಥಾನ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ತನ್ನ ಕೊನೆಯ 14 ಮುಖಾಮುಖಿಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅಜೇಯವಾಗಿಯೇ ಉಳಿದುಕೊಂಡಿದೆ ಎಂಬುದು ಗಮನಾರ್ಹ.
ಭಾರತ ಆರಂಭಿಕ ಆಡುವ XI: ಕ್ರಿಶನ್ ಬಹದ್ದೂರ್ ಪಾಠಕ್, ವರುಣ್ ಕುಮಾರ್, ಜರ್ಮನ್ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಮನ್‌ದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ಸುಖಜೀತ್ ಸಿಂಗ್.
ಪಾಕಿಸ್ತಾನ ಆರಂಭಿಕ ಆಡುವ XI: ಅಕ್ಮಲ್ ಹುಸೇನ್, ಅಹ್ತಿಶಮ್ ಅಸ್ಲಾಮ್, ಅಕೀಲ್ ಅಹ್ಮದ್, ಅರ್ಷದ್ ಲಿಯಾಕತ್, ಅಬ್ದುಲ್ ರಾಣಾ, ಅಬ್ದುಲ್ ಹನ್ನಾನ್, ಜಿಕ್ರಿಯಾ ಹಯಾತ್, ಉಸಾಮ ಬಶೀರ್, ಉಮರ್ ಭುಟ್ಟಾ, ಮಹಮ್ಮದ್ ಸುಫ್ಯಾನ್ ಖಾನ್, ಅಫ್ರಾಜ್.