ಚೆನ್ನೈನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಟೂರ್ನಿಯಲ್ಲಿ ಈವರೆಗೆ ಆಡಿರುವ ಪಂದ್ಯಗಳಲ್ಲಿ ಅಜೇಯವಾಗಿರುವ ಭಾರತ ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಆತ್ಮವಿಶ್ವಾಸದಲ್ಲಿದೆ. ಇದೀಗ ಪಾಕಿಸ್ತಾನ ವಿರುದ್ಧದ ಪೈಪೋಟಿಯ ಪಂದ್ಯದಲ್ಲಿ ಕಣಕ್ಕಿಳಿದಿದೆ.
ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಚೀನಾದ ವಿರುದ್ಧ 7-2 ಅಂತರದ ಭರ್ಜರಿ ಜಯದೊಂದಿಗೆ ಈ ಟೂರ್ನಿಯಲ್ಲಿ ಅಭುಯಾನ ಆರಂಭಿಸಿದ ಭಾರತ ತಂಡ ಜಪಾನ್ ವಿರುದ್ಧ ಏಕೈಕ ಡ್ರಾ ಹೊರತುಪಡಿಸಿದರೆ ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮಲೇಷ್ಯಾ ವಿರುದ್ಧ 5-0 ಗೆಲುವು ಸಾಧಿಸಿದ್ದು ಕೊರಿಯಾ ವಿರುದ್ಧ 3-2 ಅಂತರದಿಂದ ಗೆಲುವು ಕಂಡಿತ್ತು.

ಮತ್ತೊಂದೆಡೆ ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಪ್ರಯಾಣ ಸಾಕಷ್ಟು ಏರಿಳಿತಗಳಿಮದ ಕೂಡಿದೆ. ಪಾಕ್ ತಂಡ ಅಂಕಪಟ್ಟಿಯಲ್ಲಿ ಪ್ರಸ್ತುತ ಐದು ಅಂಕಗಳನ್ನು ಪಡೆದುಕೊಂಡಿದ್ದು ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಟೂರ್ನಿಯಲ್ಲಿ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಭಾರತ ವಿರುದ್ಧ ಗೆಲುವು ಅಥವಾ ಡ್ರಾ ಸಾಧಿಸಿದರೆ ಸೆಮಿಫೈನಲ್‌ನಲ್ಲಿ ಪ್ರವೇಶ ಪಡೆಯುವ ಅವಕಾಶ ಹೊಂದಿದೆ. ಆದರೆ ಚೀನಾ ಹಾಗೂ ಜಪಾನ್ ವಿರುದ್ಧದ ಫಲಿತಾಂಶ ಕೂಡ ಪಾಕಿಸ್ತಾನ ತಂಡಕ್ಕೆ ನಿರ್ಣಾಯಕವಾಗಲಿದೆ.
ಭಾರತ ಹಾಗೂ ಪಾಕಿಸ್ತಾನ ಹಾಕಿಯಲ್ಲಿಯೂ ಬದ್ಧ ಎದುರಾಳಿಗಳು ಎನಿಸಿಕೊಂಡಿದೆ. 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಹಾಕಿಯಲ್ಲಿ ಪರಸ್ಪರ ಮುಖಾಮುಖಿಯಾದ ಈ ಎರಡು ತಂಡಗಳ ಪೈಕಿ ಒಟ್ಟಾರೆಯಾಗೊ ನೋಡಿದರೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಪಾಕಿಸ್ತಾನ ಭಾರತದ ವಿರುದ್ಧ 82 ಪಂದ್ಯಗಳನ್ನು ಗೆದ್ದಿದ್ದರೆ ಭಾರತದ 64 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 32 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತವು ಪಾಕಿಸ್ಥಾನ ವಿರುದ್ಧ ಸಂಪೂರ್ಣ ಮೇಕುಗೈ ಸಾಧಿಸಿದೆ. ತನ್ನ ಕೊನೆಯ 14 ಮುಖಾಮುಖಿಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅಜೇಯವಾಗಿಯೇ ಉಳಿದುಕೊಂಡಿದೆ ಎಂಬುದು ಗಮನಾರ್ಹ.
ಭಾರತ ಆರಂಭಿಕ ಆಡುವ XI: ಕ್ರಿಶನ್ ಬಹದ್ದೂರ್ ಪಾಠಕ್, ವರುಣ್ ಕುಮಾರ್, ಜರ್ಮನ್ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಮನ್‌ದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ಸುಖಜೀತ್ ಸಿಂಗ್.
ಪಾಕಿಸ್ತಾನ ಆರಂಭಿಕ ಆಡುವ XI: ಅಕ್ಮಲ್ ಹುಸೇನ್, ಅಹ್ತಿಶಮ್ ಅಸ್ಲಾಮ್, ಅಕೀಲ್ ಅಹ್ಮದ್, ಅರ್ಷದ್ ಲಿಯಾಕತ್, ಅಬ್ದುಲ್ ರಾಣಾ, ಅಬ್ದುಲ್ ಹನ್ನಾನ್, ಜಿಕ್ರಿಯಾ ಹಯಾತ್, ಉಸಾಮ ಬಶೀರ್, ಉಮರ್ ಭುಟ್ಟಾ, ಮಹಮ್ಮದ್ ಸುಫ್ಯಾನ್ ಖಾನ್, ಅಫ್ರಾಜ್.