ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಪಲೇಷ್ಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಒಳದು ಹಂತದಲ್ಲಿ 1-3 ಅಂತರದ ಹಿನ್ನಡೆಯಲ್ಲಿತ್ತು. ಆದರೆ ದ್ವಿತಿಯಾರ್ಧದಲ್ಲಿ ಅಮೋಘ ಆಟವನ್ನು ಪ್ರದರ್ಶಿಸಿದ ಭಾರತ ಹಾಕಿ ತಂಡ ಅಮೋಘವಾಗಿ ಕಮ್‌ಬ್ಯಾಕ್ ಮಾಡಿದೆ. ದ್ವಿತಿಯಾರ್ಧದಲ್ಲಿ ಭಾರತ ಒಟ್ಟು ಮೂರು ಗೋಲುಗಳನ್ನು ಸಿಡಿಸುವ ಮೂಲಕ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅಂತಿಮವಾಗಿ ಭಾರತ ಈ ಪಂದ್ಯದಲ್ಲಿ 4-3 ಅಂತರದಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲ ಗೋಲು ಗಳಿಸಿದ್ದು ಭಾರತ. 8ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡ ಭಾರತ ಮೊದಲ ಗೋಲು ಸಿಡಿಸಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ ಅದಾದ ಬಳಿಕ ಭಾರತ ಅನುಭವಿಸಿದ್ದು ಅನಿರೀಕ್ಷಿತ ಹಿನ್ನೆಡೆ. 14ನೇ ನಿಮಿಷದಲ್ಲಿ ಮಲೇಷ್ಯಾ ತಂಡ ಮೊದಲ ಗೋಲು ಸಿಡಿಸಿ ಸಮಬಲಗೊಳಿಸುವಲ್ಲಿ ಯಶಸ್ವಿಯಾಯಿತು.

18ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆದುಕೊಂಡ ಮಲೇಷ್ಯಾ ಅದನ್ನು ಕೂಡ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಮೊದಲಾರ್ಧದ ಕೊನೆಯ ಹಂತದಲ್ಲಿ ಮಲೇಷ್ಯಾ ಮತ್ತೊಂದು ಪೆನಾಲ್ಟಿ ಕಾರ್ನರ್ ಗಿಟ್ಟಿಸಿಕೊಂಡಿತ್ತು. ಆ ಅವಕಾಶವನ್ನು ಕೂಡ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮೊದಲಾರ್ಧ ಮುಗಿಯುವ ಹಂತದಲ್ಲಿ ಮಲೇಷ್ಯಾ 3-1 ಅಂತರದಿಂದ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತ್ತು.
ದ್ವಿತಿಯಾರ್ಧದ ಆರಂಭ ಕೂಡ ಭಾರತಕ್ಕೆ ಹೇಳಖಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ. ಆದರೆ ಪಂದ್ಯದ 45ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಭಾರತ ತನ್ನ ಹಿನ್ನಡೆಯನ್ನು 2-3ಕ್ಕೆ ತಗ್ಗಿಸಿಕೊಂಡಿತು. ಅದಾದ ಮರುಕ್ಷಣದಲ್ಲಿಯೇ ಭಾರತ ಮತ್ತೊಂದು ಗೋಲು ಸಿಡಿಸಿ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗನದಲ್ಲಿ ಅಭಿಮಾನಿಗಳ ಕರತಾಡತನ ಮುಗಿಲು ಮುಟ್ಟುವಂತೆ ಮಾಡಿತು. ಗುರ್ಜಂತ್ ಸಿಂಗ್ ಬಾರಿಸಿದ ಈ ಗೋಲು ಭಾರತ ಪಂದ್ಯದಲ್ಲಿ ಸಮಬಲ ಸಾಧಿಸುವಂತೆ ಮಾಡಿತು.
ಪಂದ್ಯದ 56ನೇ ನಿಮಿಷದಲ್ಲಿ ಭಾರತದ ಪರವಾಗಿ ಆಕಾಶ್‌ದೀಪ್ ಸಿಂಗ್ ಚೆಂಡನ್ನು ಗೋಲು ಪೆಟ್ಟಿಗೆಗೆ ಬಾರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ಪಂದ್ಯದಲ್ಲಿ ರೋಚಕ ರೀತಿಯಲ್ಲಿ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ 4-3 ಅಂತರದಿಂದ ಮುನ್ನಡೆ ಸಾಧಿಸಿತು. ಅಂತಿಮವಾಗಿ ಭಾರತ ಇದೇ ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ 4ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಂತಾಗಿದೆ.
ಭಾರತ ಆರಂಭಿಕ XI: ಕ್ರಿಶನ್ ಬಹದ್ದೂರ್ ಪಾಠಕ್, ವರುಣ್ ಕುಮಾರ್, ಜರ್ಮನ್‌ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಗುರ್ಜಂತ್ ಸಿಂಗ್, ಮನ್‌ದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್.
ಮಲೇಷ್ಯಾ ಆರಂಭಿಕ XI: ಹಫೀಜುದ್ದೀನ್ ಒತ್ಮಾನ್, ಮುಜಾಹಿರ್ ಅಬ್ದು, ಮರ್ಹಾನ್ ಜಲೀಲ್, ಅಶ್ರಾನ್ ಹಮ್ಸಾಮಿ, ಫೈಝಲ್ ಸಾರಿ, ರಜೀ ರಹೀಮ್, ಫೈಜ್ ಜಲಿ, ಅಜುವಾನ್ ಹಸನ್, ಅಬು ಕಮಾಲ್ ಅಜ್ರೈ, ನಜ್ಮಿ ಜಜ್ಲಾನ್, ಅಮೀರುಲ್ ಅಜಹರ್.