ಮುಂಬರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಹಾಕಿ ಸ್ಪರ್ಧೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟದಲ್ಲಿ ಈ ಎರಡು ತಂಡಗಳು ಕೂಡ ಮುಖಾಮುಖಿಯಾಗುತ್ತಿದೆ. ಅದಾದ ಬಳಿಕ ಈ ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕದನ ಏಷ್ಯನ್ ಗೇಮ್ಸ್ ಟೂರ್ನಿಯ ಲೀಗ್ ಹಂತದಲ್ಲಿ ನಡೆಯಲಿದೆ.
ಏಷ್ಯನ್ ಚಾಂಪಿಯಮ್ಸ್ ಟ್ರೋಫಿಯಲ್ಲಿ ಭಾರತ ಪ್ರಸ್ತುತ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದು ಇದು ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅದ್ಭುತವಾದ ಸಿದ್ಧತೆ ಎಂದು ಬಣ್ಣಿಸಲಾಗುತ್ತಿದೆ. ಚೀನಾದ ಹಾಂಗ್‌ಜೂನಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾ ಕೂಡ ಆಯೋಜನೆಯಾಗಲಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಗ್ರೂಪ್ 'ಎ'ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಎರಡು ತಂಡಗಳಲ್ಲದೆ ಜಪಾನ್, ಬಾಂಗ್ಲಾದೇಶ, ಸಿಂಗಪೂರ್ ಮತ್ತು ಉಜ್ಬೇಕಿಸ್ತಾನ್ ಎ ಗುಂಪಿನಲ್ಲಿರವ ಉಳಿದ ನಾಲ್ಕು ತಂಡಗಳು. ಸೆಪ್ಟೆಂಬರ್ 24ರಂದು ಉಜ್ಬೇಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಇನ್ನು ಭಾರತದ ಎರಡನೇ ಪಂದ್ಯ ಸಿಂಗಾಪುರದ ವಿರುದ್ಧ ನಡೆಯಲಿದೆ. ಅದಾದ ಬಳಿಕ ಜಪಾನ್‌ನೊಂದಿಗೆ ಸೆಪ್ಟೆಂಬರ್ 28 ರಂದು ಮೂರನೇ ಪಂದ್ಯ ನಡೆಯಲಿದೆ. ಇನ್ನು ಭಾರತ vs ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 30 ರಂದು ಆಯೋಜನೆಯಾಗಲಿದೆ. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 2 ರಂದು ಆಡಲಿದೆ.
ಮಹಿಳಾ ಹಾಕಿ ತಂಡ ಕೂಡ 'ಎ' ಗುಂಪಿನಲ್ಲಿ
ಈ ಮಧ್ಯೆ ಭಾರತದ ವನಿತೆಯರ ತಂಡ ಕೂಡ ಗ್ರೂಪ್ 'ಎ'ನಲ್ಲಿ ಸ್ಥಾನ ಪಡೆದುಕೊಂಡಿದೆ. ಸವಿತಾ ಪುನಿಯಾ ನೇತೃತ್ವದ ಭಾರತ ತಂಡದ ಜೊತೆಗೆ ಈ ಗುಂಪಿನಲ್ಲಿ ಹಾಂಕಾಂಗ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳು ಇದೆ. ಭಾರತ ವನಿತೆಯರ ತಂಡ ಸೆಪ್ಟೆಂಬರ್ 27 ರಂದು ಸಿಂಗಾಪುರ ವಿರುದ್ಧ ಆಡುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಅಭಿಯಾನ ಆರಂಭಿಸಲಿದೆ.
ಸೆಪ್ಟೆಂಬರ್ 28 ಭಾರತ ಮಹಿಳಾ ತಂಡ ಜಪಾನ್ ಮಹಿಳೆಯರ ಸವಾಲು ಎದುರಿಸಲಿದೆ. ನಂತರ ಸೆಪ್ಟೆಂಬರ್ 29 ರಂದು ಮಲೇಷ್ಯಾ ವಿರುದ್ಧ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 1 ರಂದು ಕೊರಿಯಾ ವಿರುದ್ಧ ಭಾರತದ ಮಹಿಳೆಯರು ಸೆಣೆಸಾಡಲಿದ್ದು ನಂತರ ಅಕ್ಟೋಬರ್ 3 ರಂದು ಹಾಂಕಾಂಗ್ ವಿರುದ್ಧ ತಮ್ಮ ಕೊನೆಯ ಲೀಗ್ ಹಂತದ ಪಂದ್ಯವನ್ನು ಆಡಲಿದೆ.
ಇನ್ನು ಪ್ರಸ್ತಿತ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿರುವ ಭಾರತ ಟೂರ್ನಿಯಲ್ಲಿ ಈವರೆಗೆ ಅಜೇಯವಾಗಿ ಉಳಿದುಕೊಂಡಿದೆ. ಜಪಾನ್ ವಿರುದ್ಧದ ಪಂದ್ಯವನ್ನು ಡ್ರಾ ಪಾಡಿಕೊಂಡ ಬಳಿಕ ಮಲೇಷ್ಯಾ ವಿರುದ್ಧ 5-0 ಅಂತರದಿಂದ ಭಾರತ ಗೆದ್ದಿದ್ದು ನಂತರ ಕೊರಿಯಾ ವಿರುದ್ಧದ ಪಂದ್ಯದಲ್ಲಿ 3-2 ಅಂತರದಿಂದ ಗೆಲುವು ಸಾಧಿಸಿತ್ತು. ಇದೀಗ ಭಾರತ ಈ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.