ಭಾರತ ಮಹಿಳಾ ಹಾಕಿ ತಂಡವು ಮಂಗಳವಾರ, ಸೆಪ್ಟೆಂಬರ್ 19ರ ರಾತ್ರಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ಕ್ರೀಡಾ ಗ್ರಾಮಕ್ಕೆ ಪ್ರಯಾಣ ಬೆಳೆಸಿದೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕೊರಿಯಾ, ಮಲೇಷ್ಯಾ, ಹಾಂಕಾಂಗ್ ಚೀನಾ ಮತ್ತು ಸಿಂಗಾಪುರದೊಂದಿಗೆ ಪೂಲ್ ಎ ನಲ್ಲಿ ಸ್ಥಾನ ಪಡೆದಿದೆ.

2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಕಿ ತಂಡವು ಉತ್ತಮ ಸಿದ್ಧತೆ ನಡೆಸಿದೆ. ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ ಸ್ಥಾನಕ್ಕೆ ಮುದ್ರೆಯೊತ್ತಲು ಎದುರು ನೋಡುತ್ತಿದೆ ಎಂದು ನಾಯಕಿ ಸವಿತಾ ತಿಳಿಸಿದರು.
ಸೆಪ್ಟೆಂಬರ್ 23ರಂದು ಚೀನಾದ ಹ್ಯಾಂಗ್‌ಝೌನಲ್ಲಿ ಚತುರ್ವಾರ್ಷಿಕ ಪಂದ್ಯಾವಳಿಗೆ ಅದ್ಧೂರಿ ಚಾಲನೆ ದೊರೆಯಲಿದೆ. ಸೆಪ್ಟೆಂಬರ್ 27ರಂದು ಪ್ರತಿಷ್ಠಿತ ಹಾಕಿ ಪಂದ್ಯಾವಳಿಯಲ್ಲಿ ಸಿಂಗಾಪುರ ವಿರುದ್ಧ ಭಾರತ ಮಹಿಳಾ ತಂಡ ತನ್ನ ಅಭಿಯಾನ ಆರಂಭಿಸಲಿದೆ.
ಜಪಾನ್, ಚೀನಾ, ಥಾಯ್ಲೆಂಡ್, ಕಜಕಿಸ್ತಾನ್ ಮತ್ತು ಇಂಡೋನೇಷ್ಯಾ ಪೂಲ್ ಬಿ ನಲ್ಲಿ ಸ್ಥಾನ ಪಡೆದಿವೆ. ಪ್ರತಿ ಪೂಲ್‌ನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಇನ್ನು ಚಿನ್ನದ ಪದಕ ಗೆಲ್ಲುವ ತಂಡ ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ.
"ನಾವು ಬೆಂಗಳೂರಿನಲ್ಲಿ ಸುದೀರ್ಘ ಮತ್ತು ಶ್ರಮದಾಯಕ ರಾಷ್ಟ್ರೀಯ ಶಿಬಿರವನ್ನು ಹೊಂದಿದ್ದೇವೆ. ಅಲ್ಲಿ ನಾವು ಸುಧಾರಿಸಬೇಕಾದ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇವೆ. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಾವು ತಂತ್ರಗಳನ್ನು ರೂಪಿಸಿದ್ದೇವೆ ಮತ್ತು ನಮ್ಮ ಎದುರಾಳಿಗಳ ಆಟದ ಶೈಲಿಯನ್ನು ಅರ್ಥಮಾಡಿಕೊಳ್ಳಲು ನಾವು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೇವೆ," ಎಂದು ಭಾರತ ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ತಿಳಿಸಿದ್ದಾರೆ.
"ನಾವು ಉತ್ತಮ ಪಂದ್ಯಾವಳಿಯನ್ನು ಹೊಂದಲು ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೇವೆ ಎಂದು ಭಾವಿಸುತ್ತೇವೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನಮ್ಮ ಗುರಿಯಾಗಿದೆ. ಆದ್ದರಿಂದ ಪಂದ್ಯಾವಳಿಯಲ್ಲಿ ನಮ್ಮ ಗುರಿಗಳನ್ನು ಸಾಧಿಸಲು ನಾವು ಏನು ಮಾಡಬೇಕು ಎಂಬುದರ ಬಗ್ಗೆ ನಮಗೆ ಅರಿವಿದೆ," ಎಂದು ಹೇಳಿದರು.
ಭಾರತ ಮಹಿಳಾ ಹಾಕಿ ತಂಡದಲ್ಲಿ ಗೋಲ್‌ಕೀಪರ್‌ಗಳಾದ ಸವಿತಾ ಮತ್ತು ಬಿಚು ದೇವಿ ಖರಿಬಾಮ್ ಇದ್ದರೆ, ದೀಪ್ ಗ್ರೇಸ್ ಎಕ್ಕಾ, ಇಶಿಕಾ ಚೌಧರಿ, ನಿಕ್ಕಿ ಪ್ರಧಾನ್ ಮತ್ತು ಉದಿತಾ ಅವರು ಡಿಫೆನ್ಸ್ ಮಾಡಲಿದ್ದಾರೆ.
ಸುಶೀಲಾ ಚಾನು, ಮೋನಿಕಾ, ನವನೀತ್ ಕೌರ್, ನೇಹಾ, ನಿಶಾ, ಸಲಿಮಾ ಟೆಟೆ, ಸೋನಿಕಾ ಮತ್ತು ವೈಷ್ಣವಿ ವಿಟ್ಟಲ್ ಫಾಲ್ಕೆ ಅವರು ಭಾರತದ ಮಿಡ್‌ಫೀಲ್ಡ್‌ನಲ್ಲಿ ಆಡಲಿದ್ದಾರೆ.
ದೀಪಿಕಾ, ಲಾಲ್ರೆಮ್ಸಿಯಾಮಿ, ಸಂಗೀತಾ ಕುಮಾರಿ ಮತ್ತು ವಂದನಾ ಕಟಾರಿಯಾ ಅವರನ್ನು ಫಾರ್ವರ್ಡ್‌ಗಳಾಗಿ ಮಹಿಳಾ ಹಾಕಿ ತಂಡದಲ್ಲಿ ಆಯ್ಕೆ ಮಾಡಲಾಗಿದೆ.
"ನಮ್ಮ ತಂಡದಲ್ಲಿ ನಾವು ಅನುಭವಿ ಮತ್ತು ಯುವ ಆಟಗಾರ್ತಿಯರ ಮಿಶ್ರಣವನ್ನು ಹೊಂದಿದ್ದೇವೆ ಎಂಬುದು ನಮಗೆ ಒಳ್ಳೆಯ ಸಂಗತಿಯಾಗಿದೆ. ಎಲ್ಲಾ ಆಟಗಾರರು ತಮ್ಮ ಅತ್ಯುತ್ತಮತೆಯನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ. ಮೈದಾನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತಮ್ಮ ಅತ್ಯುತ್ತಮ ಮನಸ್ಥಿತಿಯಲ್ಲಿದ್ದಾರೆ," ಎಂದು ಉಪನಾಯಕಿ ದೀಪ್ ಗ್ರೇಸ್ ಎಕ್ಕಾ ತಿಳಿಸಿದರು.
ಸೆಪ್ಟೆಂಬರ್ 27ರ ಉದ್ಘಾಟನಾ ಪಂದ್ಯದ ನಂತರ ಭಾರತ ಮಹಿಳಾ ತಂಡ ಸೆಪ್ಟೆಂಬರ್ 29ರಂದು ಮಲೇಷ್ಯಾ, ಅಕ್ಟೋಬರ್ 1ರಂದು ಕೊರಿಯಾ ಮತ್ತು ಅಕ್ಟೋಬರ್ 3ರಂದು ಹಾಂಕಾಂಗ್ ಚೀನಾವನ್ನು ಎದುರಿಸಲಿದೆ.