
ನವದೆಹಲಿ: ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಹಾಕಿ ಇಂಡಿಯಾ ಶಿಫಾರಸು ಮಾಡಿರುವ ಹೆಸರುಗಳನ್ನು ಶನಿವಾರ (ಜೂನ್ 26) ಪ್ರಕಟಿಸಿದೆ. ಭಾರತೀಯ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಮತ್ತು ಮಾಜಿ ಮಹಿಳಾ ಆಟಗಾರ್ತಿ ದೀಪಿಕಾ ಹೆಸರುಗಳನ್ನು ಹಾಕಿ ಇಂಡಿಯಾ ಪ್ರತಿಷ್ಠಿತ ರಾಜೀವ್ ಗಾಂಧಿ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಇನ್ನು ನಾಲ್ವರ ಹೆಸರುಗಳು ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿವೆ. ಅರ್ಜುನ ಪ್ರಶಸ್ತಿಗೆ ಶಿಫಾರಸಾದವರೆಂದರೆ ಹರ್‌ಮನ್‌ಪ್ರೀತ್ ಸಿಂಗ್, ವಂದನಾ ಕಟಾರಿಯಾ ಮತ್ತು ನವಜೋತ್ ಕೌರ್. ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿಗೆ ದಂತಕತೆ ಡಾ. ಆರ್‌ಪಿ ಸಿಂಗ್ ಮತ್ತು ಮಿಸ್ ಸಂಗೈ ಇಬೆಂಬ್‌ಹಾಲ್ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ.
ಕೋಚ್‌ಗಳಾಗಿರುವ ಬಿಜೆ ಕಾರಿಯಪ್ಪ ಮತ್ತು ಸಿಆರ್ ಕುಮಾರ್ ಹೆಸರುಗಳನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸಿಫಾರಸು ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿಗಾಗಿ 1 ಜನವರಿ 2017ರಿಂದ 31 ಡಿಸೆಂಬರ್ 2020ರ ವರೆಗಿನ ಸಾಧನೆಗಳನ್ನು ಪರಿಗಣಿಸಲಾಗುತ್ತದೆ.
2018ರಲ್ಲಿ ಬ್ರೆಡಾದಲ್ಲಿ ನಡೆದಿದ್ದ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಪಿಆರ್ ಶ್ರೀಜೇಶ್ ಭಾರತೀಯ ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆಯುವಲ್ಲೂ ಶ್ರೀಜೇಶ್ ಪ್ರಮುಖ ಕಾರಣರಾಗಿದ್ದರು.