ಹಾಕಿ ವಿಶ್ವಕಪ್ 2018: ಪ್ರಶಸ್ತಿ ಕನಸು ಭಗ್ನ, ಡಚ್ಚರ ಎದುರು ಸೋತ ಭಾರತ!

ಭುವನೇಶ್ವರ್, ಡಿಸೆಂಬರ್ 13: ಭಾರತದ ಹಾಕಿ ಪುರುಷರ ವೀರೋಚಿತ ಆಟದ ಹೊರತಾಗಿಯೂ ಗುರುವಾರ (ಡಿಸೆಂಬರ್ 13) ಒಡಿಶಾದ ಭುನವೇಶ್ವರ್‌ನಲ್ಲಿರುವ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ನಡೆದ ಹಾಕಿ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ 2-1ರ ಸೋಲನುಭವಿಸಿದೆ. ಇಲ್ಲಿಗೆ ಭಾರತದ ಪ್ರಶಸ್ತಿ ಸುತ್ತಿನ ಕನಸು ಕಮರಿದಂತಾಗಿದೆ.
ಹಾಕಿ ವಿಶ್ವಕಪ್ ಮುಖಪುಟ (ಪಾಯಿಂಟ್ ಟೇಬಲ್ ಸೇರಿ ಹೆಚ್ಚಿನ ಮಾಹಿತಿಗಳು ಇಲ್ಲಿವೆ)
ಪಂದ್ಯ ಆರಂಭಗೊಂಡ 12ನೇ ನಿಮಿಷದಲ್ಲಿ ಭಾರತ ಗೋಲ್ ಖಾತೆ ತೆರೆಯಿತು. ಆಕಾಶ ನೀಲಿ ಬಣ್ಣದ ಜೆರ್ಸಿ ಬಣದ ಪರವಾಗಿ ಆಕಾಶ್‌ದೀಪ್ ಸಿಂಗ್ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಮೊದಲ ಕ್ವಾರ್ಟರ್ ಇನ್ನೇನು ಮುಕ್ತಾಯವಾಗಲಿದೆ ಅನ್ನುವಾಗ ಡಚ್ಚರು ಅಂಕವನ್ನು 1-1ಕ್ಕೆ ಸರಿದೂಗಿಸಿಕೊಂಡರು.
ನೆದರ್ಲ್ಯಾಂಡ್ಸ್ ಪರ ಥಿಯೆರ್ರಿ ಬ್ರಿಂಕ್ಮನ್ ಅವರು 15ನೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತಕ್ಕೆ ದಿಟ್ಟ ಎದುರೇಟು ನೀಡಿದರು. ದ್ವಿತೀಯ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು ಗೋಲ್‌ಗಾಗಿ ಹೋರಾಟ ನಡೆಸಿತಾದರೂ ಗೋಲ್ ಸಿಡಿಯದೆ ಅಂತರ 1-1ರಲ್ಲೇ ಉಳಿಯಿತು.
ಮೂರನೇ ಕ್ವಾರ್ಟರ್‌ನಲ್ಲೂ ಎರಡೂ ತಂಡಗಳಿಂದ ಗೋಲ್ ದಾಖಲಾಗದ್ದು, ಪಂದ್ಯ ಭರ್ಜರಿ ಜಿದ್ದಾಜಿದ್ದಿಯಿಂದ ಕೂಡಿತ್ತು ಅನ್ನೋದಕ್ಕೆ ಸಾಕ್ಷಿ ಹೇಳಿತು. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ಡಚ್ ತಂಡ ಗೋಲ್ ಬಾರಿಸಿತು. ನೆದರ್ಲ್ಯಾಂಡ್ಸ್‌ನ ಮಿಂಕ್ ವಾನ್ ಡೆರ್ ವೆರ್ಡೆನ್ 50ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ 2-1ರ ಮುನ್ನಡೆ ಕೊಟ್ಟರು.
'ಸಿ' ಗ್ರೂಪ್‌ನಲ್ಲಿರುವ ಭಾರತ ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದರೆ, 'ಡಿ'ಗ್ರೂಪ್‌ನಲ್ಲಿರುವ ನೆದರ್‌ಲ್ಯಾಂಡ್ ವಿಶ್ವ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದೆ. ಈ ಪಂದ್ಯಕ್ಕೂ ಮುನ್ನ ಎರಡೂ ತಂಡಗಳು ಆಡಿರುವ 3ರಲ್ಲಿ 2 ಪಂದ್ಯ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದ್ದವು. ಆದರೆ 4ನೇ ಪಂದ್ಯದಲ್ಲಿ ಭಾರತ ಶರಣಾಗಿದೆ.
ಸುಮಾರು 43 ವರ್ಷಗಳ ಹಿಂದೆ ಭಾರತ ಹಾಕಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 1975ರಲ್ಲಿ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ನಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು. ಅನಂತರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ 5ನೇ ಸ್ಥಾನ ಗಳಿಸಿದ್ದೇ ಹೆಚ್ಚೆನಿಸಿತ್ತು. 1982 ಮತ್ತು 1994ರಲ್ಲಿ ಭಾರತ ಐದನೇ ಸ್ಥಾನ ಗಳಿಸಿತ್ತು.
ಇದೀಗ ಆ ಸುಂದರ ಕ್ಷಣಕ್ಕಾಗಿ ಭಾರತ ಕಾಯುವಿಕೆ ಮುಂದುವರೆಸಬೇಕಾಗಿದೆ. ಡಚ್ ತಂಡ ಎರಡು ಬಾರಿಯ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ನಲ್ಲಿ ಕಾದಾಡಲಿದೆ. ಸೆಮಿಫೈನಲ್ ಪಂದ್ಯಗಳು ಡಿಸೆಂಬರ್ 15ರಿಂದ ಆರಂಭಗೊಳ್ಳಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications